ಇವರು ಹಿರಿಯರು
ತಾವರಿಯದ ಹೊನ್ನು
ಕೊಪ್ಪರಿಗೆಗಟ್ಟಲೆ ಇದೆಯೆಂದು ಸುತರಾಂ ಅರಿಯರು
ಎಳೆಯರು ಅದರ ಮಾತಾಡಿದರೊ
ಇವರ ಬಾಯಿಂದ ಉರಿಯ ಮಳೆ
ಕೆಸರ ಹೊಳೆ
ಕಣ್ಣೆಲ್ಲ ಬೆಂಕಿಬಳೆ.
ನದಿ ಹೊರಳಿದ್ದಕ್ಕೆ
ನೆಲ ಕೆರಳಿದ್ದಕ್ಕೆ
ಇಷ್ಟು ದಿನ ನಿಂತ ಬಂಡೆ ಈಗ ತಳ ಧಿಕ್ಕರಿಸಿ
ಬೆಟ್ಟದಿಂದ ಉರುಳಿದ್ದಕ್ಕೆ
ಕೋಪ ಇವರಿಗೆ
ಇಟ್ಟ ಜೈಲಿನಿಂದ ಮಗ ತಪ್ಪಿಸಿಕೊಂಡದ್ದಕ್ಕೆ
ಹಿಡಿಶಾಪ ಅವನಿಗೆ.
ಅರಿವಿಗೆ ಮಿತಿಗಳಿವೆ
ಮಿತಿಗಳೇ ಮರ್‍ಯಾದೆ ಇವರಿಗೆ.
ತೊಟ್ಟ ಬೇಡಿಯೆ ಬಳೆ
ಮೈಬೆವರೇ ಪುನುಗು ಶುದ್ದಿಗೆ.
ಗೆಜ್ಜೆ ಕಟ್ಟಿದ ಪ್ರಾಯ ಕೊಪ್ಪರಿಗೆ ಗುರಿಯಲ್ಲಿ
ಹೆಜ್ಜೆ ಹಾಕಿದ್ದಕ್ಕೆ
ಕೇರಿಕಟ್ಟಳೆ ಮೀರಿ ಊರ ಗಡಿಯಾಚೆ
ಭೇರಿ ನುಡಿಸಿದ್ದಕ್ಕೆ
ಮನೆ ಮನೆ ಮುಂದೆ ಇವರ ಮಾರಿ ಗಂಟಲ ತುತ್ತೂರಿ
ಎಲ್ಲೆಂದರಲ್ಲಿ
ತಮ್ಮ ಮಕ್ಕಳ ವಿರುದ್ಧವೇ ಪಿತೂರಿ!
ಪ್ರಳಯವಾಗಿಲ್ಲ ಬಿಡಿ
ಕೂತು ಮಾತಾಡೋಣ
ಗಡಿ ಇದ್ದರೇನಂತೆ ಆಮದು ರಫ್ತಿಗೆ ಒಪ್ಪೋಣ
ಎಂದಿರೋ
ಕೈತಪ್ಪಿ ಇವರಿಗೆ ಅವಾಚ್ಯ ಭಾಷೆಯ ಮೇಲಿನ ಕಡಿವಾಣ
ಬಂಗಾರದ ಬಟ್ಟಲು
ಕಫಕ್ಕೆ ನಿಲ್ದಾಣ
ತಿಳಿಯದ ಹುಚ್ಚಿಗೆ ತಡೆಗಳ ಮೆಚ್ಚಿಗೆ ಯಾಕೆ?
ಹೊಸತನ್ನು ಕಟ್ಟುವ ಅದನ್ನು ಕಟ್ಟೀತೇ ಟೀಕೆ?
*****