ಮೈ ತಪ್ಪೆ
ಮನ ತಪ್ಪೆ?
ಎರಡೂ ಕೂಡಿ ಕುಣಿದ ಗಣಿತದ,
ತಿಂದ ಸಿಹಿ ಖಾರ ಬೇರಿಗೆ ಜಾರಿ
ಚೀರಿದ ಚಿಲುಮೆಯ
ಸುಖ ತಪ್ಪೆ ?
ಭಗವದ್ಗೀತೆಯ ಹಿಂದೆ ಮುಂದೆಯೇ
ನೂರು ಹಗರಣ
ಸಮತೆ ಶಾಂತಿ ಶಿಸ್ತಿನ ನಡುವಿನಲೇ
ಥಟ್ಟನೆ ಜಗಣ!
ಏ ಚೆನ್ನೆ, ಈ
ಸೀ ಕೆನ್ನೆ
ಹೆಗಲಡಿ ಹಬ್ಬಿದ ಬಿಳಿದಿನ್ನೆ
ಕಾಯಿಸಿ ಬೇಯಿಸಿ ತೋಯಿಸಿ, ಸೋಕಲು
ಕಚ್ಚಿ ರಸಚಿಲಿವ ಉರಿಸೊನ್ನೆ,
ಮತ್ತ ಬಾಳೆಕಂಬದ ನಡುವೆ
ವೃತ್ತಗಂಧಿ ಮಿದುಸುಡುಶಯ್ಯೆ
ನೋಯಿಸಿವೆ ಮೈ
ಮಾಯಿಸಿವೆ
ಮುಕ್ತಿಸೂತ್ರಗಳ ಮರೆತ ಗಳಿಗೆಯಲಿ
ಭಗವದ್ಯೋಗದಿ ಮೀಯಿಸಿವೆ.
ಈಚೀಚೆ
ಏನೋ ಮಾತು
ಎಲ್ಲೋ ಕೂತು
ಯಾವುದೊ ನೋವಿಗೆ ಹವ್ವನೆ ಬಾತು
ಹೂ ಮುಳ್ಳು ನಗೆ
ನಿಜ ಸುಳ್ಳು ಧಗೆ
ಮದಾಲಸೆಯ ಮೈ ನೆಗೆತ ಕುಸಿತದಲಿ ಕಲೆತು
ಸರಿಗಮ ಪದನಿಸ ದನಿಯೊಡೆದು
ಹೊಯಭಂಗಿಗಳಿಗೆ ಮಿಡಿದು
ತುಡಿನುಡಿ ಮುಖಾಂತರ
ಲಯದಲಿ
ಮೂಡಿದ ಭವಾಂತರ
ಬುದ್ದಿಯ ಹಂಗಿಗು ಮೀರಿ ನಿಲ್ಲುವ
ಹಿಗ್ಗಿನ ಆವಾಂತರ.
*****