ನಡುರಾತ್ರಿಯ ನಾಭಿಯಲ್ಲಿ
ನೆಲ ಜಲ ಮಾತಾಡಿತ ?
ಹಗಲಿನ ಹದ್ದುಗಳು ಹಾರಿ
ಹಮ್ಮಿಗೆ ಗದ್ಗದ ಮೂಡಿ
ತರ್ಕ ಚಿತೆಗೆ ಬಿದ್ದಿತ ?
ತಳದ ಹುತ್ತ ಬಾಯಿ ತೆರೆದು
ನಿದ್ದೆಯಿದ್ದ ನಾಗರಾಗ
ಮೂಕಸನ್ನೆ ತಾಕಲಾಡಿ ಎಚ್ಚರಕ್ಕೆ ಚೆಲ್ಲಿತ ?
ಬಾನಿನ ಮಹೇಂದ್ರಕಾಯ
ಅಸಂಖ್ಯ ನೇತ್ರವ ಬಿಚ್ಚಿ
ಉಳುಕಿದ ಮಣ್ಣೆದೆಯನ್ನು ಚಂದ್ರಹಸ್ತ ಸವರಿತ ?
ಬಂದಿರೇ, ಆಹ!
ಬನ್ನಿರೇ
ಏಕಾಂತಕ್ಕೆಳೆವ ಒಗಟುಗಳೇ
ಬಗೆಹರಿಯದ ಜಿಗಟುಗಳೇ
ಯಾಕೆ ಹೀಗೆ ಕಾಡುತ್ತೀರಿ ?
ಮೋಡದಲ್ಲಿ ನಿಧಾನ ಮೂಡುವ ಅರ್ಥಾತೀತ ಗೂಢಗಳೆ
ಹೊಳೆ ಬೆಟ್ಟ ಬಿಕ್ಕಿದ ಅನುಕ್ತ ಗಾಢಗಳೆ
ನೇಗಿಲು ಹೂಡುತ್ತೀರಿ ಯಾಕೆ ಎದೆಗೆ ನಿಷ್ಕರುಣಿಗಳೆ?
ನಿದ್ದೆ ಹಬ್ಬದ ನೋವ ಬೆಳೆಯುತ್ತೀರಿ ಯಾಕೆ ?
ತಬ್ಬಿದ ಮಣ್ಣಿನ ಸುಖಕ್ಕೆ ಮುಳಿಯುತ್ತೀರಿ ಯಾಕೆ ?
ನಿಂತ ಮುಖ ನಿಂತಂತೆ ಚಲಿಸುವ ನೀವು
ದಯಾಕ್ಷಿ ಭಯಗಳೆ
ರಾಕ್ಷಸ ನಯಗಳೆ
ಲಕ್ಷಣಗೆರೆ ದಾಟಿಸಬರುವಿರೆ ?
ವ್ಯವಹಾರ ಕೊಯಿಲಾಗುವ ಮುನ್ನ
ಮಳೆ ನಷ್ಟದಲ್ಲಿ ಹುಟ್ಟುವ
ಹೆಸರಿಲ್ಲದ ಇಷ್ಟಗಳೆ
ಯಾಕೆ ಕಾಡುತ್ತೀರಿ ಹೀಗೆ ?
ಕಾಡಿ, ಮುಖ ದೀನಮಾಡಿ
ಬೇಡುವ ಧಾಟಿಯಲ್ಲಿ ನೀಡಿಬಿಡುತ್ತೀರಿ ಹೇಗೆ ?
ಉರಿವ ಹಗಲ ಆರಿಸಿದ
ಇರುಳ ಪನ್ನೀರೇ ಘನಿಸಿತೆ ?
ಕಿರುತಿಂಗಳ ಕೊರಗುಬೆಳಕಲ್ಲಿ ಮುಗಿಲು
ಮುಡಿಗಡ್ಡದ ಮುನಿಗಳ ರೂಪಿಸಿತೆ ?
ಮುನಿಗಳೆ!
ಪಾತಾಳ ಜಯಿಸಿದ ದನಿಗಳೆ
ನಿಮ್ಮ ಕೈಕಾಲಿಗೆ ನೀರೆರೆಯಲಿ ಹೇಗೆ
ಕಲಿತ ವೇದಾಂತವೆಲ್ಲ ಬಚ್ಚಲ ಕೊಚ್ಚೆ;
ನಿಮಗೆ ಏನ ತೊಡಿಸಲಿ ಹೇಗೆ
ನಕ್ಷತ್ರಗಂಗೆ ಉದ್ದಸಾಲದ ಕಚ್ಚೆ;
ಕ್ಷಣಸತ್ಯದ ಹೆಣ ಮೆಟ್ಟಿ ಬರುವ
ಅಮೂರ್ತ ಗುರಿಗಳೆ
ಕಡಲೊಡಲಿಗೆ ತಣ್ಣಗೆ ಹರಿದು
ಗಿರಿನೆತ್ತಿ ಕಾರುವ ವಿರೋಧದುರಿಗಳೆ
ಕೋಟ್ಯಂತರ ಇಳೆಕಣಗಳ ಗುಡಿಸುವ ಬರಲುಗಳೆ
ಮಣ್ಣನಾಲಿಗೆಯಿಂದ ಹಿಡಿಯಲಿ ಹೇಗೆ ?
ನಿಮ್ಮನ್ನು ಹಿಡಿಯದ ನುಡಿ
ಬರಿ ನಾದದ ಬೇಗೆ.
ಗೋಳದ ಗುರುತ್ವದಾಚೆಗೆ
ಗಿರಿತೂಕವೆ ಜಳ್ಳು,
ಬೆಳಕಿನ ವೇಗಕ್ಕೆಳೆದರೆ
ಕಾಯದ ರೂಪವೆ ಸುಳ್ಳು,
ಬಣ್ಣಗಳೋ ಕಣ್ಣ ಭ್ರಮೆ
ಕಣ್ಣೋ ಅದಕ್ಕೆ ನಲಿಯುವ ಬೆಳ್ಳು,
ಇಲ್ಲಿಯ ಹಗಲು ಎಲ್ಲಿಗೊ
ಇರುಳೂ ಅಲ್ಲವಾಗಿ
ಈವರೆಗೆ ಕಂಡದ್ದೆಲ್ಲ
ಕಾಣದ್ದರ ನೆರಳು.
ಎಂಬ ಬಗೆ ಕವಿಸುವ
ಕವಿಸಿ ಕುದಿಸುವ
ಕುದಿಸಿ ಉದಿಸುವ ಧಗ ಧಗ ಚಂದ್ರರೆ
ಸತ್ಯದ ಮೈಯಲ್ಲಿ ಸುಳಿಯುವ
ಸುಳ್ಳಿನ ಚಹರೆ ನೀಡಿ ಯಾಕೆ
ಶಂಕೆಯಲ್ಲಿ ಅದ್ದುತ್ತೀರಿ ?
ಬೆಳಕು ಹರಿಯಲು ಕರಗುವ
ಅಸ್ಪಷ್ಟ ಚೀರುಗಳೆ
ಅಯ್ಯೋ!
ಯಾಕೆ ಹಾಗೆ ತೀರುತ್ತೀರಿ!
*****