ವಿಂಧ್ಯಗಿರಿ ದೇವರು ಕಂದರ್ಪನ ಅವತಾರ
ಪಾದಕ್ಕೆ ಕಮಲ ನೆತ್ತಿಗೆ ಚಂದ್ರ,
ನಿಂತ ನಿಲುವು ರಾಗವೋ ವಿರಾಗವೋ
ರವಿಯೇ ತಾರ ಬುವಿಯೇ ಮಂದ್ರ,
ಕೆಳೆಗೆ ಬೆಳೆದ ಗಿಡಮರಗಳ ನಡುವೆ
ಊಳುವ ಗಾಳಿಯ ಕರುಣಾಕ್ರಂದ,
ಕೊಂಚ ಗದ್ಯ ಇನ್ನೆಲ್ಲ ಪದ್ಯ
ಮರ ಹಿಡಿದ ಫಲವಲ್ಲ ಅಲ್ಲಲ್ಲೇ ನೈವೇದ್ಯ,
ಹಗಲು ಬಿಸಿಲ ಸ್ನಾನ
ರಾತ್ರಿ ಚಿಕ್ಕೆ ಹೊತ್ತ ಕತ್ತಲ ಛತ್ರಿಯಡಿಗೆ
ತಣ್ಣಗೆ ಕಲ್ಲಿನೆದೆಯೊಳಗೆ
ಕೊತ ಕೊತ ಕುದಿಯುವ
ಪೂರ್ವ ಭವಗಳ ಪಾಪಧ್ಯಾನ,
ದೂರಕ್ಕೆ ದೇವರು ಕಲ್ಲು ಸೆಟೆದಂತೆ ಕಾಣುತ್ತಾರೆ;
ಪರೀಕ್ಷಿಸಿ ನೋಡಿ
ನಡುವೆ ಹಠಾತ್ತನೆ ಬೆಚ್ಚುತ್ತಾರೆ.
ವಿಂಧ್ಯಗಿರಿ ದೇವರಿಗೆ ಬಂಧನವಿಲ್ಲದ ಮನೆ
ಅದರ ಇಲ್ಲದ ಬಾಗಿಲನ್ನು
ಹಗಲು ಬಿಚ್ಚುತ್ತದೆ ರಾತ್ರಿ ಮುಚ್ಚುತ್ತದೆ,
ಬಹಳ ಹಿಂದೆ ಅವರ
ಬೆಲ್ಲದ ಗಲ್ಲವನ್ನ ಬೆಳಕಿನ ಇರುವೆ ಕಚ್ಚಿ
ಸುಖದ ನೋವ ಚುಚ್ಚಿ
ಮಣ್ಣು ನರಳಿತು, ಹಣ್ಣು ಮಾಯಿತು;
ಹೊಕ್ಕಳ ಕೆರಳು ಸತ್ತು ಮುಖದಲ್ಲಿ
ಮಕ್ಕಳ ನಗೆ ಹುಟ್ಟಿತು
ಆಗಿಂದ ಅದು
ಬೆಳೆದೇ ಬೆಳೆದು ಬೆಳೆದೇ ಬೆಳೆದು
ಬಂದವರ ಎದೆಯಲ್ಲಿ ಅಕ್ಕಿ ಚೆಲ್ಲುತ್ತದೆ,
ಸಿಕ್ಕಿ ಬಿದ್ದಿದ್ದರೆ ಅಲ್ಲಿ ತಿನ್ನುವ ಹಕ್ಕಿ
ಫಕ್ಕನೆ ಹಿಡಿದು ಮುಗಿಲಿಗೆ ಹಾರಿಸುತ್ತದೆ.
ವಿಂಧ್ಯಗಿರಿ ದೇವರಿಗೆ ರೆಪ್ಪೆಯಿದೆ ಬಡಿಯುವುದಿಲ್ಲ
ಇರಿಯುವಂತೆ ದಿಟ್ಟಿ,
ಧಗಧಗ ಪ್ರಾಯ, ಸುಡುವುದಿಲ್ಲ;
ಪಂಚಾಗ್ನಿ ಮೆಟ್ಟಿದ ಜಟ್ಟಿ,
ಅವರಿಗೆ
ವಸ್ತ್ರ ಕತ್ತಲೆ ಬೆಳಕು ಬೆತ್ತಲೆ
ಸುಡುವ ಸೂರ್‍ಯ ತಂಪು ಕಿತ್ತಲೆ.
ಅಡ್ಡ ನೋಡಿದರೆ
ಮಲಗಿದ ದೇವರ ಎದೆಯಲ್ಲಿ ಅಲಗು
ಉದ್ದ ನೋಡಿದರೆ
ಸೆಟೆದ ವಿಗ್ರಹದ ಕಣ್ಣಲ್ಲಿ ಮಿನುಗು.
ನಡುರಾತ್ರಿ ಭೂಮಿಗೆ ಮಂಪರು:
ಬಾನು ತುಟಿತೆರೆದು
ದೇವಕನ್ಯೆಯರು ಇಳಿದು
ದೇವರ ಮೈಗೆ ಗಂಧ ತೊಡೆಯುತ್ತಾರೆ;
ಹೊಕ್ಕಳಿಗೆ ಮುತ್ತು ಸುರಿದು;
ತೊಡೆಗೆ ಲಟಿಗೆ ತೆಗೆದು
ಪಾದಕ್ಕೆ ದಿಂಡುರುಳಿ ಮುಳು ಮುಳು ಅಳುತ್ತಾರೆ;
ದೇವರ ಕಣ್ಣಲ್ಲಿ ಥಟ್ಟನೆ ದೀಪ ಹತ್ತಿ
ಅಳುವಂತೆ ಉರಿಯುತ್ತದೆ;
ಹದ್ದೊಳಗಿನ ಪಾಪ ಉದ್ದುದ್ದ ಬೆಳೆದು
ತುಟಿಗಳು ಚಲಿಸುತ್ತವೆ.
ಆದರೆ
ತಾವರೆ ಮೆಟ್ಟಿದವರು
ತಿಂಗಳು ಮುಡಿದವರು
ರಾಗಕ್ಕೆ ಮಂಗಳ ಹಾಡಿದವರು
ದೇವರು.
ಮಾತು ಹೊರಡುವ ಮುಂಚೆ ಅಲ್ಲೆ ಹೂತಂತಾಗಿ
ಮೊಳೆತ ಪ್ರಾಣದ ಆಸೆ ಕಮರುತ್ತದೆ,
ಗಾಳಿ
ಸಟೆದ ಕಲ್ಲಿನ ಸುತ್ತ ಚೀರುತ್ತದೆ.
ವಿಶಾಪದ ನಿರೀಕ್ಷೆಯಲ್ಲಿ ದೇವರು ನಿಂತಿದ್ದಾರೆ.
ಒಂದು ದಿನ
ಅಭಯಹಸ್ತ ಮೂಡುತ್ತದೆ
ನಿಜದ ಕೆಚ್ಚ ನೀಡುತ್ತದೆ
ಬಿಲ್ಲು ಬಾಣ ಕೈಗೆ ಕಲಿಸಿ
ಮೈರುಚಿಯನ್ನೆಲ್ಲ ಉರಿಸಿ
ಭಕ್ತವೃಂದ ಸುತ್ತ ಕೊರೆದ ಲಕ್ಷಣಗೆರೆ ಅಳಿಸುತ್ತದೆ;
ಮಾದ ಹುಣ್ಣು ಮತ್ತೆ ಜ್ವಲಿಸಿ
ಸತ್ತ ಕೆರಳು ತಿರುಗಿ ಜನಿಸಿ
ಶಾಪದ ಕೊನೆ ತರುತ್ತದೆ
ಅಸ್ತಿಕಗಣದ ಚೀತ್ಕಾರದ ನಡುವೆ
ದೇವಕವಚ ಸಿಡಿಯುತ್ತದೆ.
*****