ನಿನ್ನ ಕೆಂದುಟಿಯಿಂದ ಬರೆ ಪ್ರೇಮ ಕಾವ್ಯವನು
ತೆರೆದಿರುವ ನನ್ನೆದೆಯ ಹಾಳೆ ಮೇಲೆ
ಭಾವಗೀತೆಯ ಮೀರಿ ಮಹಾಕಾವ್ಯ ಮೂಡಲಿ
ಅದ ಓದಿ ದಾಟುವೆನು ಜಗದ ಎಲ್ಲೆ //ಪ//
ಗಿಳಿ ಕೋಗಿಲೆ ಬೇಡ ನಿನ್ನ ಹಾಡಿನ ಎದುರು
ನವಿಲ ನರ್ತನವೇಕೆ ನೀನು ನಡೆವಾಗ
ಚುಕ್ಕಿ ಚಂದ್ರಮರೇಕೆ ನೀ ಕಣ್ಣು ತೆರೆದಾಗ
ಬೆಳದಿಂಗಳು ಬೇಡ ನೀನೆ ಇರುವಾಗ
ಹುಬ್ಬು ಹಾರಿಸಬೇಡ ರೆಪ್ಪೆ ಬಡಿಯಲುಬೇಡ
ಹಕ್ಕಿ ಸಹ ಗರಿ ಬಿಚ್ಚಿ ಮೇಲೆ ಹಾರಲಿ
ತುಟಿಯ ಕೊಂಕಿಸುವಾಗ ತಾವರೆಯು ನಿಸ್ತೇಜ
ಚೆಲುವ ಪ್ರಕೃತಿ ಮೇಲೆ ಕರುಣೆ ಇರಲಿ
ನಿನಗಿಲ್ಲ ಉಪಮಾನ ರೂಪಕವು ಸಹ ಇಲ್ಲ
ನಿನ್ನ ಸಂಗದ ಬಲವೆ ಕಾವ್ಯ ಸ್ಫೂರ್ತಿ
ಬರೆದ ಕಾವ್ಯಕೆ ನಾನು ಲಿಪಿಕಾರ, ಕವಿ ನೀನು
ಇದು ಅಲ್ಲವೆ ನಿನ್ನ ಪ್ರೀತಿ ನೀತಿ!
*****