‘ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು
ಮಗುವಾಗಿದ್ದಾಗಿನಿಂದಲೂ ಬಲ್ಲ ಅವನನ್ನು
‘ಬಾ’ ‘ಬಾ’ ಎಂದವನ ಎಷ್ಟು ಸಲ ಕರೆದಿದ್ದೆನು
ಬರುವನೊ, ಬಾರನೊ, ತಿಳಿಯದೆ
ಇಂದಿಗೂ ಕಾಯುತ್ತಲೇ ಇರುವೆನು
ಹೇಳಿ ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು
ಯಾವ ಕಾಲದಲ್ಲಿ, ಯಾವ ಕೊಳದಲ್ಲಿ
ನೈದಿಲೆಯಾಗಿದ್ದೆನೋ ಏನೋ…
ಯಾವ ಬೆಟ್ಟದಲ್ಲಿ, ಯಾವ ಘಟ್ಟದಲ್ಲಿ
ಮೊಡವಾಗಿದ್ದೆನೋ ಏನೋ…
ಈಗಲೂ ಅದೇ ನೆನಪ್ಪಲ್ಲಿ ಅದೇ ತಪದಲ್ಲಿ
ಅನುದಿನವೂ ನೆನೆಯುವೆನು
ಹೇಳಿ ಹೇಗೆ ಪ್ರಿಯದೆ ಇರಲಿ ಚಂದ್ರನನ್ನು
ಕಣ್ಣು, ಮೂಗು, ಬಾಯಿ, ಏನಿಲ್ಲದಿದ್ದರೂ
ಇದ್ದ ಹಾಗೆಯೆ ಕಾಣುವನು ಅವನು
ರೊಟ್ಟಿಯ ಚೂರಿನಂತೆ, ಹಣ್ಣಿನ ಹೋಳಿನಂತೆ
ಬೆಣ್ಣೆಯ ಮುದ್ದೆಯಂತೆ, ಬೆಳ್ಳಿಯ ತಟ್ಟೆಯಂತೆ
ಬಹುರೂಪಿ ಅಡಿಗಡಿಗೂ ಬೆರಗಾಗುವೆನು
ಹೇಳಿ ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು
ಯಾವ ಲೋಕದಲ್ಲಿ, ಯಾವ ಎರಕದಲ್ಲಿ
ರೂಪುಗೊಂಡವನೋ ಏನೋ…
ಯಾವ ಕಾಲದವನೋ ಏನವನ ಜಾತಿ?
ಮಾತಿನ ಹಂಗಿಲ್ಲದೇ ನನ್ನನ್ನು ಮುಟ್ಟಿಹನು
ಹೇಳಿ ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು
ಉಪ್ಪರಿಗೆಯನೇರಿ ಕಾದವನ ದಾರಿ ಎದುರುಗೊಳ್ಳುವೆನು
ಬೆಟ್ಟದಾಚೆಗೆ ಬೆಳದಿಂಗಳ ತೋಳು ಚಾಚಿ
ಬೆಳ್ಳಿಕಿರಣಗಳ ಮಾಲೆ ತಂದೇ ತರುವನು
ಸಿದ್ದಾರ್ಥನ ಪ್ರಿಯಮಿತ್ರ, ಮೈತ್ರಿಯೇ ಮಹಾಸೂತ್ರ
ಪ್ರೀತಿಸದೆ ಇರಲಾರೆ ಚಂದ್ರನನ್ನು.
*****