ಮಾನವನ ಬೆವರು ಬಾಳಿನ ತವರು
ಅರಿವಾಗಿ ಅರಳಿ ಬೆಳಕಾಯಿತು
ಸಂಸ್ಕೃತಿಗೆ ದುಡಿಮೆ ಬೇರಾಯಿತು ||
ಬಂಡೆಗಟ್ಟಿದ ಬೆಟ್ಟ
ಹಸಿರು ತುಂಬಿದ ಘಟ್ಟ
ಮಾನವನು ಮೈ ಏರಿ ಮಾತಾಡಿದ
ಹೋರಾಟ ನಡೆಸುತ್ತ
ಒಂದಾಗಿ ಬದುಕುತ್ತ
ಹೊಸ ಗೂಡು ಹುಡುಕುತ್ತ ನಡೆದಾಡಿದ ||
ಕಾಡು ಮೇಡಿನ ಹಾಡು
ಕೂಗಿ ಕರೆಯುವ ನಾಡು
ದುಡಿಮೆಗಾರನು ಕೊಟ್ಟ ಹೊಸತು ರೂಪ
ಸಿಡಿಲು ಸಂಚಿನ ಮೋಡ
ಬಿರುಗಾಳಿ ಮಳೆ ನೋಡ
ತಾಳಿದನು ಕೊರೆವ ಚಳಿ ಬಿಸಿಲ ತಾಪ ||
ಧುಮುಕಿದವು ಜಲಪಾತ
ಕೆಣಕಿದವು ಹಿಮಪಾತ
ಜಗ್ಗದೆಯೆ ಹೋರಾಡಿದ
ತಲೆಮಾರು ಕಳೆಯುತ್ತ
ಮನೆ ಮಾರು ಬೆಳೆಯುತ್ತ
ನೋವು ನಲಿವಿನ ನಡುವೆ ಉಸಿರಾಡಿದ ||
*****