ಯಾರು ಕೊಯ್ದರೊ ಬೆಳೆಯ
ನೆನ್ನೆ ನಗುತ್ತಿದ್ದ ನವಿಲುಗದ್ದೆಯಲ್ಲಿ?
ರೆಪ್ಪೆ ಮುಚ್ಚಿದರಿಲ್ಲಿ ಕಪ್ಪೆ ತುಂಬಿದ ಬಾವಿ
ಸಿಪ್ಪೆ ಸುಲಿಯುತ್ತಿದೆ ನೆನಪು ನಿದ್ದೆಯಲ್ಲಿ.
ಕನಸುಗೊಬ್ಬರದಲ್ಲಿ ತೆನೆಯೊಡೆದ ಮನಸನ್ನು
ನೆತ್ತರಲಿ ತೊಯ್ದವರು ಯಾರೊ ಕಾಣೆ
ಬೆವರು ಬಸಿಯುತ್ತ ಬೆಳೆದಂಥ ಬೆಳಕನ್ನು
ಕತ್ತಲಲಿ ಕದ್ದವರು ಯಾರೊ ಕಾಣೆ.
ಕತ್ತಿಕಾಳಗದಲ್ಲಿ ತತ್ತಿಯಿಟ್ಟಿತು ಸೇಡು
ಸತ್ತುಹೋಯಿತು ಪ್ರೀತಿ ಮಣ್ಣಿನಲ್ಲಿ
ಬೀದಿಬೀದಿಯ ತುಂಬ ಹರಿದು ಬಂದಿತು ನೋವು
ಹೆಪ್ಪುಗಟ್ಟಿತು ಇಲ್ಲಿ ಕಣ್ಣಿನಲ್ಲಿ.
ಹರಿವ ನದಿಯಲ್ಲಿ ಬೆವರು, ಉರಿವ ಬಿಸಿಲಲ್ಲಿ ಬೆವರು
ಕವಿದ ಕತ್ತಲೆಯಲ್ಲಿ, ಸೂರ್ಯ ಬೆತ್ತಲೆಯಲ್ಲಿ
ಎಲ್ಲಿ ನೋಡಿದರಲ್ಲಿ ಬೆವರ ಬರಹ
ಜೀವಸಾಗರವನ್ನು ಕುಡಿವ ದಾಹ.
ಬೆವರು ಬಂದೀತೆಂದು ಬತ್ತಿ ಹೋಗುತ್ತಿದೆ-
ಹತ್ತಿ ಉರಿಯುವ ಹುತ್ತ ಈ ಜೀವಸಾಗರ;
ಒಂದೊಂದು ಅಲೆಯು ಮಿಡಿನಾಗರ!
ಇಲ್ಲ, ಬೆಳಗಿನ ಜಾವಕ್ಕೆ ಕಾಯುವ ಬೆವರಿಗೆ
ಇಲ್ಲಿ ಜೀವ ಕೊಡುವುದಿಲ್ಲ.
ಸೂರ್ಯ ಕಣ್ತೆರೆದು ನೋಡುವುದಿಲ್ಲ;
ಸಮುದ್ರ ಕಡೆಯುವುದಿಲ್ಲ.
ಅಮೃತದ ಹನಿ ಉಕ್ಕುವುದಿಲ್ಲ.
ಕಡೆಗೆ ಬೇಡಿದರೂ ಬರುವುದಿಲ್ಲ-
ಒಂದು ಹನಿ ಕಣ್ಣೀರು;
ಬೆವರ ಬೆತ್ತಲು ಮಾಡಿ
ಕದ ಮುಚ್ಚಿ ಕೂತ ಕತ್ತಲ ಕಾರುಬಾರು.
ಬನ್ನಿ ಗೆಳೆಯರೇ ಕತ್ತಲಲ್ಲೇ ಬೆಳೆಯೋಣ
ನಮ್ಮ ನಮ್ಮ ಮನಸುಗಳನ್ನು
ನಮ್ಮ ನಮ್ಮ ಕನಸುಗಳನ್ನು
ಗಾಯಗೊಂಡ ಹೂವುಗಳನ್ನು
ಸಾಯಗೊಡದ ನೋವುಗಳನ್ನು
ಬೆಳೆಯೋಣ, ಬೆಳೆಯುತ್ತ ಬೆಳೆಯುತ್ತ
ಬೆಳಕಾಗೋಣ-
ನವಿಲುಗದ್ದೆಯ ಗರಿಯಾಗೋಣ.
*****