ನಿಶ್ಚಿಂತನಿರಾಳದಲ್ಲಿ ಆಡುವ ಮಹಾದೇವನ
ಕರ್ತೃವೆಂದರಿದ ಕಾರಣದಿಂದ,
ತತ್ವವೆಂಬುದನರಿದು ಮನವ
ನಿಶ್ಚಿಂತವ ಮಾಡಿ,
ನಿಜಸುಖದಲ್ಲಿ ನಿಂದು,
ಕತ್ತಲೆಯ ಹರಿಯಿಸಿ,
ತಮವ ಹಿಂಗಿಸಿ, ವ್ಯಾಕುಲವನಳಿದು,
ನಿರಾಕುಳದಲ್ಲಿ ನಿಂದು,
ಬೇಕುಬೇಡೆಂಬುಭಯವಳಿದು,
ಲೋಕದ ಹಂಗ ಹರಿದು,
ತಾನು ವಿವೇಕಿಯಾಗಿ ನಿಂದು,
ಮುಂದೆ ನೋಡಿದರೆ, ಜ್ಯೋತಿಯ
ಬೆಳಗ ಕಾಣಬಹುದೆಂದರು.
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ