ಕನ್ನಡದ ತಿಳಿನೀರ ನಾನೊಂದು ಬೊಗಸೆಯಲಿ
ಕುಡಿದು ನೋಡಿದೆನದರ ಸವಿಯನ್ನು ನಾನೊ;
ಕುಡಿಕುಡಿದು ಮುದವಾಂತು ನಲ್ಗಬ್ಬ ಸಾರವನು
ಬಾಯ್ದುದಿಯೊಳನವರತ ಇರಿಸಲೆಳಸಿದೆನೊ!
ಎಷ್ಟು ತತ್ವದ ಗೀತ? ಎಷ್ಟು ಮೋಹದ ಮಾತು?
ವಚನರಾಶಿಯ ಸಾರ, ಪುರಾಣಗಳ ಮೇಳ!
ಗದ್ಯ ಪದ್ಯದ ವಾದ, ಶರಣ ಹಾಡಿನ ನಾದ;
ಕನ್ನಡಾಂಬೆಯ ಕೊರಳ ಮುತ್ತುಮಣಿ ಮಾಲಾ-
ವೃತ್ತಕಂದಗಳೋಟ, ಚಂಪುಕಾವ್ಯದ ಕೂಟ,
‘ಝೇಂಕರಿಪ ಷಟ್ಪದಿ’ಗಳಾ ವೇಗ ಮಾರ್ಗ;
ಶಾಸ್ತ್ರಗ್ರಂಥದ ಸಾಲು, ವ್ಯಾಕರಣಗಳ ಬಾಳು,
ಹಾಸು ಹೊಕ್ಕಾಗಿಯೇ ತಾಳಿ ಬಾಳಿದೆ ಕೇಳ!
ದಾಸ ಪದಗಳು ಹರಡಿ ಹಳ್ಳಿ ಜನಗಳು ಉಬ್ಬಿ
ಲಾವಣಿಗಳಾ ದನಿಯ ಇಂಪಿನಿಂ ಹಿಗ್ಗಿ;
ಹೊಸಕವನ ಕೊಳದ ದನಿ, ಶ್ರೋತೃಗಳ ಬಿಲ್ಲದನಿ,
ಕನ್ನಡದ ಹಲತರದಲೇಳಿಗೆಯ ಸುಗ್ಗಿ!
ದಶಮಾನ ಶತವಾಗಿ, ಶತಮಾನ ದಶವಾಗಿ
ತಿಳಿನೀರ ಬುಗ್ಗೆಯದು ಎಷ್ಟು ಸಿಹಿ ಚೆಲುವು!
ತಿಳಿಯದಿಹ ಕವಿವರ್ಯರೇಸು ಜನ ಏತರದಿ
ಕನ್ನಡದ ತೋಟದಲಿ ಬೆಳೆಸಿದರು ಹೂವು!!
ಆಳಿದರು ಚೋಳ ಚಾಳುಕ್ಯ ಗಂಗ ಕದಂಬ
ವಿಜಯನಗರದ ರಾಜ್ಯ ವೈಭವದ ಗೂಡು;
ನೃಪತುಂಗ ಪಂಪರೂ ಪೊನ್ನರನ್ನರ ತಂಡ
ಗುಣವರ್ಮ ಆ ಜನ್ನ ನಾಗಚಂದ್ರರ ದಂಡು.
ಲಕ್ಷಣವ ಸಾರಿದ ಸಾಳ್ವ ಭಟ್ಟಾಕಳಂಕರು
ಕೇಶಿರಾಜರದಂತು ನಾಗವರ್ಮರದೊ!
ತಾಯಂದಿರಾ ಕಂತಿ ಅಕ್ಕದೇವಿಯರಿಹರು
ಕನ್ನಡಿತಿ ಹೊನ್ನಮ್ಮ ಕವಿಕೋಕಿಲವಳೊ!
ಮಧ್ಯಯುಗ ಬಸವಣ್ಣ ರಾಘವಾಂಕರ ಸಾಲು
ವ್ಯಾಸಕುವರನ ಒಂದು ಭಾರತದ ಹಾಡೊ;
ಪದ್ಮರಸ ಲಕ್ಷ್ಮೇಶ ತಿಮ್ಮಕವಿ ಹರಿಹರರು
ಕವಿವರರು ಅಗಣಿತವೆ ಕನ್ನಡದ ಬಾಳೊ!
ಷಡಕ್ಷರಿಯ ಬಿರುನುಡಿಯು, ಮುದ್ದಣನ ಇನಿವಾತು
ಕನಕಾಪುರಂದರರ ಲಲ್ಲೆ ಹಾಡಿನ ನುಣ್ಪು;
ಕೃಷ್ಣರಾಜರ ಸೇವೆ, ತಿರುಮಲಾರ್‍ಯರ ಸೊಲ್ಲು
ಒಡನಾಡಿ ಬಳೆಯಿತೊ ಕನ್ನಡದ ಹುರುಪು
ನೃಸಿಂಹ ಅಳಸಿಂಗರ ವಿದ್ವತ್ಸೇವೆಯ ಮೇರೆ
ಬಸಪ್ಪಶಾಸ್ತ್ರಿಗಳೊ ಪಂಜೇ ಶ್ರೀಕಂಠರು!
ಹಲವಾರು ನುಡಿಸೇವೆ ಸ್ಪೂರ್ತಿಯಿಕ್ಕಿದ ಜನವೆ
ಕಣ್ಮುಂದು ನಿಲ್ಲುವರು ಇನ್ನು ಬಾಳುವರು!
ಕನ್ನಡದ ಕರ್ಣಾಟಕಿಂದು ಅಂದಿನದಂತೆ
ಒಂದಾಗಿ ಇಲ್ಲವೆಂದೊಕ್ಕೊರಲ ಕೂಗು,
ಒಂದಾಪ ಸವಿಗನಸು ಕಾಣಲಿವೆ ಅದರಂತೆ
ನುಡಿಸೇವೆ ವೃಂದದಾ ಉತ್ಸುಕದ ದಂಡು!
ಮೈಸೂರು ಮಂಗ್ಳೂರು ಧಾರ್ವಾಡ ಎಂದೆಂದು
ಸೀಮಾ ಮಹತ್ವವನು ಕೊಟ್ಟು ಮೂಲೆಯೊಳಿರಿಸಿ,
ಕನ್ನಡಾಂಬೆಯ ಕುವರರಂದಿನಾ ಪ್ರಭೆಯೊಂದು
ಮಾಸಿಹೋಗಿದೆ ಇಂದು ಚೈತನ್ಯವಳಿಸಿ!
ಕವನಗಳ ಕಂತೆಗಳು, ಸಣ್ಣ ಕಥೆ ಬೊಂತೆಗಳು,
ಹಲಕಾದಂಬರಿಗಳೂ ತುಂಬುವುದು ಹಿತವೆ!
ಭಾಷಾಭಿಮಾನವೂ ಸ್ವಜನಾನುರಾಗವೂ
ಬಳೆಯುತ್ತಿವೆ ಜನರಲ್ಲಿ ಫಲಬಿಟ್ಟಿವೆ!!
* * *
ನನ್ನಿಚ್ಚೆ, ನನ್ಗನಸು, ನನ್ನೊಲುಮೆ ಇದು ಒಂದು-
ಕನ್ನಡವು ಭಾರತದ ಹಸುಗೂಸಂತಿರದೆ;
ಮುನ್ನಡೆವೆ ಮುನ್ನೋಡ್ವ ಘನಭಾಷೆಯೆಂದೆನಿಸಿ
ಬಾಳಲೆಂಬುವ ಕಾಂಕ್ಷೆ ಮುನ್ನಿಟ್ಟು ನಡೆವೆ!
*****