ಅಲೆ ಅಲೆಗಳು ಎಳೆದು
ಮುದ್ದಿಸುತ ಮುನ್ನುಗ್ಗುವ
ಹಡಗಿನ ಅಂಚಿಗೆ ನಾನೊರಗಿ ನಿಂತಿದ್ದೆ.
ತುಂತುರ ಮಳೆಗೆ
ಹೊಯ್ದಾಟದ ಹಡಗಿನ ಗಮ್ಮತ್ತಿಗೆ
ಮೈಯೆಲ್ಲಾ ಕಚಗುಳಿಯಾಗುತ್ತಿತ್ತು
ದೂರದ ದೀಪಸ್ತಂಭ
ಸರಹದ್ದಿನ ಭವ್ಯ ಮಹಲುಗಳು
ಸರಕು ಹಡಗುಗಳ ಓಡಾಟ
ಮಂಜು ಮೋಡಗಳೊಳಗೆ
ತೂಗಾಡುವ Sea gullಗಳ
ಸಿನೀಕ್ ದೃಶ್ಯದಲ್ಲಿ
ಕಾಲುವೆಯ ತಣ್ಣನೆಯ ನೀರಿನ
ಕೊರೆಯುವ ಚಳಿಯಲ್ಲಿ ತೇಲಾಡುತ್ತಿದ್ದೆ.
ದ್ವೀಪಗಳಗುಂಟ ಹೊರಳುವಾಗ
ಬಾಲ್ಯದ ಚಂದಮಾಮ ಕಥೆಗಳು
ಏಳು ಸಮುದ್ರದಾಟಿ
ರಾಜಕುಮಾರಿ ಕರೆತರುವ
ರಾಜಕುಮಾರನ ಸಾಹಸಗಳಿಗೆ,
ಮೈ ನವಿರೆಬ್ಬಸಿದ ಆ ಬಾಲೀಶಕ್ಕೆ
ಆ ಆನಂದಕ್ಕೆ, ಮೈ ಮನ
ಹಗುರಾಗಿಸಿಕೊಂಡು
ನಗುತ್ತಲೇ ಈಚೆ ಹೊರಳುವಾಗ
ಪಕ್ಕದ ಸ್ಪ್ಯಾನಿಷ್ ಗುಂಪು
ಪ್ಲ್ಯಾಶ್ ಮಾಡಿಕೊಳ್ಳುತ್ತದೆ
ಪುಂಖಾನು ಪುಂಖವಾಗಿ ಮೋಡಗಳು
ಆಕಾಶದಲ್ಲಿ ತೇಲುತ್ತಲೇ ಇವೆ.
ಕೊರೆವ ಮಂಜು
ಎದೆ ನಡಗುವ ಕಡಲುಬ್ಬರಗಳಲ್ಲೂ
ಜಲ ಕನ್ಯೆಯಾಗಿ (mermaid)
ದ್ವೀಪಗಳು ಹೊಕ್ಕು
ಸಂಶಯದ- ಕಟ್ಟುಕಥೆಗಳ
ಬಲೆಗಳೆಳೆದು ಎಳೆಯ ಬಾಲೀಷ
ವಿಜ್ಞಾನಗಳಿಗೆ ವಸ್ತುವಾಗಿಸಿ
ಅನಂತಕ್ಕೇರಿಸುವ; ಸಮುದ್ರದಾಳದ
ಕೊಳವೆ ಮಾರ್ಗದಲ್ಲಿ
(ಇಂಗ್ಲೆಂಡು ಪ್ರಾನ್ಸ್‌ಗಳ ನಡುವೆ)
ಓದಾಡುವ ರೈಲು ಕಾರುಗಳಲ್ಲೆಲ್ಲ
ಓಡಾಡಿಸುವ ಯೋಜನೆ.
ಓರಿಯೆಂಟ್ ಫೆರ್ರಿ ಮುನ್ನುಗ್ಗುತ್ತಿದೆ.
ಕಡಲಂಚು ಅಂಚುಗಳಿಗೆ
ಪೂರ್ವ ಸಿದ್ಧತೆಗಳಿಲ್ಲದೆಯೂ
ಮನಸ್ಸು ಅಂಟಿಕೊಳ್ಳುತ್ತದೆ.
ತುಂತುರ ಮಳೆಗೆ
ಸೂರ್ಯನ ಕಿರಣಗಳು ಸ್ಫಟಿಕಗಳಾಗಿ
ತಲೆ ತುಂಬ ಮೆತ್ತಿ
ವಜ್ರ ಮುಕುಟಗಳಾಗುತ್ತವೆ
ಬ್ರಿಟೀಷ್ ಕಡಲ್ಗಾಲುವೆಯ
ರಾಣಿಯಾಗಿ ನನ್ನ
ಕಾಲರ್ ಸರಿಪಡಿಸಿಕೊಳ್ಳುತ್ತ
ಫೆರ್ರಿ ಮೇಲೆ ಗಂಭೀರ ಹೆಜ್ಜಿಯಿಂದ
ಓಡಾಡಿ ವಜ್ರಮುಕುಟಗಳನ್ನು
ಮುಟ್ಟುತ್ತ ಮುದ್ದಿಸುತ್ತ
ಪ್ಯಾರಿ ನಗರ ಪ್ಯಾರಿಸ್ಸಿಗೆ ಹೆಜ್ಜೆ ಊರಿದೆ.
(ಇಂಗ್ಲೆಂಡಿನಿಂದ ಪ್ರಾನ್ಸ್‌ಗೆ ಹೋಗುವಾಗ ಓರಿಯಂಟ್ ಫೆರ್ರಿಯಿಂದ(ಹಡಗು) ನೋಡಿದ ಅನಿಸಿದ ಆನಂದಿಸಿದ ದೃಶ್ಯ)
*****