ದುಡಿಯುತಿಹರೂ ನಾವೆ
ಮಡಿಯುತಿಹರೂ ನಾವೆ
ಜಗಕೆ ಅನ್ನವ ನೀಡುತಿಹರು ನಾವೆ!
ತುತ್ತೊಂದು ಅನ್ನವನು ಬೇಡುತಿಹೆವು!
ನಿಮಗಾಗಿ ಜೀವನವ ಸವೆಸುತಿಹೆವು!
ಮೈಯ ದಂಡಿಪರಾವು
ರಕ್ತ ಹರಿಸುವರಾವು
ದಿನವು ಜನ್ಮವ ತೇಯುತಿಹರು ನಾವು!
ಧನಿಕರಿಗೆ ಹೊನ್ನ ಬಣ ಕೂಡಿಸಿಹೆವು
ಕುರುಡುಕಾಸಿನ ಭಿಕ್ಷೆ ಬೇಡುತಿಹೆವು!
ಭುವಿಯನುಳುವವರಾವು
ಭುವಿಗೆ ಉರುಳುವರಾವು
ಕಾಳ ಕೆತ್ತಿತ ಮಡಿವ ರೈತರಾವು
ತುತ್ತಿಲ್ಲದೆಯೆ ಹೆಣದ ರಾಸಿ ಬಿದ್ದಿಹುದು!
ಕಳಿತ ಹೆಣ, ಕೊಳೆತ ಹೆಣ-ಕೇಳ್ವರಾರು!
ಹಣದ ಕಣಜಗಳಾವು
ಹೆಣದ ವಂಶಜರಾವು
ಸಾವಿಲ್ಲದಿಹ ಅಮರ ಪ್ರೇತವಾವು
ಜೀವವಿಲ್ಲದ ಬರಿಯ ಮೂಳೆ ಮೂಟೆಗಳು!
ಹೊಟ್ಟೆ ಹಸಿವಿನ ಕೊರಗ ಕ್ರಾಂತಿಯೂಟೆಗಳು!
*****