ರಾತ್ರಿಯೂಟ ಮುಗಿಸಿ ಎಲೆಯಡಿಕೆ ಮೆಲ್ಲುತ್ತ
ಸುದ್ದಿ ಪತ್ರಿಕೆ ವಿವರ ಓದುತ್ತ ಕೂತಿದ್ದೆ,
ಅರ್ಧ ಮುಗಿಸಿಟ್ಟಿದ್ದ ಖುರಾನು ಮೇಜಿನ ಮೇಲೆ,
ನಾನೊಬ್ಬನೇ ಇಲ್ಲ ರೂಮಲ್ಲಿ ಇನ್ಯಾರೋ
ಇದ್ದಾರೆ ಅನ್ನಿಸಿತು.
ನೆರಳು ನೆರಳಾಗಿ ಎದುರಿದ್ದ ಕುರ್ಚಿಯ ಮೇಲೆ
ಯಾರೋ ಕೂತಂತಿತ್ತು; ದಿಟ್ಟಿಸಿ ನೋಡಿದರೆ
ಮತ್ತೆ ಅದೆ ಹಳೆ ಭೂತ !
“ಭೂತ ಬಂದದ್ದು ಸಹ ಕಾಣುತ್ತಿಲ್ಲ ಅಲ್ಲವಾ ?
ಏನು ಅಂಥಾ ಓದು ?” -ಸಲಿಗೆ ಬೆಳೆಸಿತು ಭೂತ.
“ನಿನ್ನ ವಿಷಯಗಳೇ,
ವರ್ತಮಾನ ಪತ್ರಿಕೆಯ ತುಂಬ ಭೂತದ ಸುದ್ದಿ” ಅಂದೆ
“ಓಹೋ ಅಡಿಗ !
ನಮ್ಮ ಉಚ್ಚಾಟನೆಗೆ ಕರೆಕೊಟ್ಟ ವೈದಿಕ!
ಇರಲಿ ಏನದು ಸುದ್ದಿ” ಎಂದಿತು.
“ಬಾಬರಿ ಮಸೀದಿಯನ್ನು ನೆಲಸಮ ಮಾಡಿದ್ದಾರೆ,
ಗುಡಿ ನಿಲ್ಲಿಸಿದ್ದಾರೆ.
ಎಲ್ಲ ಕಡೆ ಕೊಲೆ ಇರಿತ
ಆಯ್ತು ದೇಶದ ಕಥೆ” ಕಂಠ ಕಟ್ಟಿತು ನನಗೆ.
“ಏನು ಮನುಷ್ಯರಪ್ಪ,
ನಾಯಿ ಬೆಕ್ಕುಗಳಂತೆ ಕಚ್ಚಾಡುತ್ತೀರಿ !
ಜುಟ್ಟು ನಾಮ ವಿಭೂತಿ ಜನಿವಾರ ಶಿವದಾರ
ಎಲ್ಲ ಕಡೆ ಇದರದೇ ಹಾವಳಿಯಾಗಿ ಹೋಯ್ತು.”
“ನೀ ಹೇಳುವುದು ನಿಜವೆ” ನಾನೆಂದೆ ಕುಗ್ಗುತ್ತ.
“ಏನು ಮತಾಂಧತೆ, ಎಂಥ ನಾಚಿಕೆಗೇಡು,
ಭೂತ ಕೂಡ ನಮ್ಮ ಬೈಯುವಂತಾಗಿದೆ.
ಎಲ್ಲ ಧರ್ಮಗಳನ್ನು ಬಾಚಿ ತಬ್ಬಿದ ದೇಶ,
ಇಂಥ ಧರ್ಮದ್ರೋಹ ಹಿಂದುವಿನ ನೆಲದಲ್ಲಿ
ಎಂದೂ ಆದದ್ದಿಲ್ಲ.
ಲೋಕದೆದುರೆ ಘೋರ ಅಪರಾಧಿ ನಾವೀಗ
ಎಷ್ಟು ಹಳೆಯ ಮಸೀದಿ.
ಬಿದ್ದ ಸದ್ದಿಗೆ ಒಳಗೇ ಧಸಕ್ಕೆಂದಿತು ಎದೆ” ಅಂದೆ.
“ಅನ್ನದೆ ಇರುತ್ತದೆಯೆ?
ನನಗೆ ಮಾತ್ರವೆ ಗೊತ್ತು ನಿನ್ನ ಎದೆಯುರಿ ತಾಪ”-
ದನಿಗೂಡಿಸಿತು ಭೂತ.
“ಎರಡು ದಿನ ಕಳೆದರೂ ಏನೋ ಸಂಕಟ ಒಳಗೆ,
ದೇಶವನ್ನೇ ಬಿಟ್ಟು ಓಡಿಹೋಗಲೆ ಎಂಬ
ಕೆಟ್ಟ ಕಸಿವಿಸಿ ಉರಿ,
ಬಾಬರಿ ಮಸೀದಿ ಮತ್ತೆ ಕಟ್ಟುವುದೆ ಆದಲ್ಲಿ
ತಲೆ ಮೇಲೆ ಇಟ್ಟಿಗೆಯ ಹೊತ್ತು ಸಾಗಿಸುತ್ತೇನೆ –
ಸೀದಾ ಅಯೋಧ್ಯೆಗೇ !
ಅಲ್ಲಿಯ ತನಕ ನನಗೆ ಎಲ್ಲಿ ನೆಮ್ಮದಿ?” ಎಂದೆ
“ಮುಚ್ಚೋ ಮಗನೆ ನಿನ್ನ ಕಳ್ಳ ಅಭಿನಯ ಸಾಕು”
ಕೂಗಿ ಗದರಿತು ಭೂತ.
“ನಿನ್ನ ಕರುಳಿನ ತನಕ ಎಲ್ಲ ಕಾಣುತ್ತದೆ.
ನಟಿಸುತ್ತೀಯ ಭಡವ ?
ಒಳಗೆ ಭಜರಂಗದಳ, ಹೊರಗೆ ತಿಳಿನೀರ ಕೊಳ!
ಇಲ್ಲಿಂದಲೇ ಅವತ್ತು ಕಲ್ಲು ಬೀಸಿದ್ದು ನನಗೆ
ಗೊತ್ತಿಲ್ಲ ಅಂತಲಾ ?”
“ನಿಲ್ಲಿಸು ತಲೆ ಹರಟೆ” ಅರಚಿ ತೋಳೇರಿಸಿದೆ.
ನನ್ನ ಮನೆಯಲ್ಲಿ ಕೂತು ನನಗೇ ಅನ್ನುವ ಕೊಬ್ಬ?
ನಾನು ಸೆಕ್ಯುಲರ್ ಗೊತ್ತ ?”
“ಆಹಾ, ಸೆಕ್ಯುಲರ್ ಇವನು !
ಸೂಡೋ ಸೆಕ್ಯುಲರ್, ಧಡ್ಡ!
ನೀನು ನಾಸ್ತಿಕ ತಿಳೀತಾ ?
ಧರ್ಮಿಷ್ಠರಿಗೆ ಮಾತ್ರ ದುಃಖವಾಗುವ ವಿಷಯ
ಮಸೀದಿ ಬಿದ್ದದ್ದು,
ನಿನ್ನಂಥವರಿಗಲ್ಲ,
ಫೋಸು ಹಾಕುತ್ತೀಯಾ ?”
“ನಾನು ನಾಸ್ತಿಕನ ?” ಮುಷ್ಟಿ ಬಿಗಿಯುತ್ತಿತ್ತು
“ಮತ್ತೇನು ? ಹಾಗಲ್ಲದಿದ್ದಲ್ಲಿ ಮನೆಯೊಳಗೆ
ಹೇಗೆ ಬರುತ್ತಿದ್ದೆ ನಾನು ?
ಮಾಸ್ತಿ ಮನೆಯೊಳಗೆ ಕಾಲಿಡಲೂ ಆಗದೆ ಹೋಯ್ತು
ಕಡೆದಿನದ ತನಕ”
“ನಾನು ಸೆಕ್ಯುಲರ್ ಅಲ್ಲ ಅನ್ನುತ್ತೀಯಲ್ಲ,
ನೀನು ಇರಬಹುದೆ ?” – ಚುಚ್ಚಿ ಕೇಳಿದೆ ನಾನು
“ಸಾರಿ ಅಂತನ್ನು, ನಾನು ಬರಿ ಭೂತ ನಿಮ್ಮಂತೆ
ಸೂಡೋ ಸೆಕ್ಯುಲರ್ ಆಲ್ಲ
ಈ ದೇಶದಲ್ಲಿ ಎಲ್ಲಿದ್ದಾನೆ ಸೆಕ್ಯುಲರ್ ?
ಒಳಗೆ ರಾಮನ ಭಜನೆ, ಸೀಕರಣೆ ಪಾನಕ
ಹೊರಗೆ ವೇದಿಕೆ ಮೇಲೆ ಮೊಸಳೆ ಕಣ್ಣೀರು.”
“ಬುದ್ಧಿಜೀವಿಗಳು?” – ಸವಾಲೆಸೆದು ಕೇಳಿದೆ
“ಬುದ್ಧಿ ಜೀವಿಯೆ ನೀನೂ –
ಕಂಡವರ ಬುದ್ಧಿತಿನ್ನುತ್ತಲೇ ಬೆಳೆದವರು
ನಿನ್ನಂತೆ ಉಳಿದವರೂ.
ವರ್ಚಸ್ಸು ಬೆಳೆಸಿಕೊಳ್ಳುವ ಕಳ್ಳ ನಾಟಕ ಇದು.
ಸುಗಮಗೀತೆಯ ರಚನೆ ಇದಕ್ಕಿಂತ ಮೇಲು”-
ತಾನೆ ಮನೆಯಜಮಾನ ಎನ್ನುವಂತೆ ಭೂತ
ಒರಟಾಗಿ ಗದರಿಸಿತು.
“ಮತ್ತೆ ಮಸೀದಿಯನ್ನು ಅಲ್ಲೇ ಕಟ್ಟಲಿ, ಅಂತ
ಪತ್ರಿಕಾ ಹೇಳಿಕೆ ಕೊಡುತ್ತೇನೆ ಗೂತ್ತ?”
ಬೀಗಿ ಹೇಳಿದೆ ನಾನು
“ಎಂಥ ಖದೀಮನೋ ನೀನು
ಕಟ್ಟಿರುವ ಗುಡಿಯನ್ನು ಯಾರು ಒಡೆದಾರು ?
ಎಲ್ಲ ಗೊತ್ತಿದೆ ನಿನಗೆ !
ನಿನ್ನ ಜೊತೆ ಮಾತು ಸಹ ಶುದ್ಧ ಹೇಸಿಗೆ
ಬರುತ್ತೇನೆ ನಾನಿನ್ನು.”
ಫಟ್ಟನೆ ಒಡೆದಂತಾಯ್ತು ಯಾವುದೋ ಬಲೂನು
ಕುರ್ಚಿ ತೂಗುತ್ತಿತ್ತು
ಹಗುರಾಗುತ್ತಿತ್ತು ಎದೆ
ಟೇಬಲ್ಲ ಮೇಲೆ ನಕ್ಕಿತು ಖುರಾನು.
*****