ಎಲ್ಲೇ ಹೋಗಲಿ ನೀರು
ಕೆಳಹರಿಯುವುದೇಕೆ?
ಎಷ್ಟೇ ಒತ್ತಿದರು ಚಿಲುಮೆ
ಮೇಲುಕ್ಕುವುದೇಕೆ ?
ಮತ್ತೆ ಮತ್ತೆ ಕಡಿದರು ಮರ
ಸಿಟ್ಟು ಸೆಡವು ಮಾಡದೆ
ಎಂದಿನ ಹಾಗೇ ಮತ್ತೆ
ಫಲ ನೀಡುವುದೇಕೆ ?
ನೀರಿಗೆ ಸ್ವಧರ್ಮ ಮುಖ್ಯ
ಹರಿಯುವುದೇ ಧ್ಯೇಯ,
ಚಿಲುಮೆಗು ಮರಕ್ಕು ಅಷ್ಟೇ
ಚಿಮ್ಮುವುದೇ ಕಾರ್ಯ;
ಸ್ಥಧರ್ಮವೆಂದರೆ ಎಷ್ಟೂ
ಸ್ವಂತಕ್ಕಾಗಿರದೆ
ತನ್ನ ತಾನು ಉರಿಸಬೇಕು
ಉರಿಯುವಂತೆ ಸೂರ್ಯ.
ಸದಾ ಈ ನಡೆಯಲ್ಲೇ
ಆಡಿದೆ ಜಡಪ್ರಕೃತಿ,
ಸ್ವಧರ್ಮದಲ್ಲಿರು ಎಂದ
ಕೃಷ್ಣನಂಥ ಪ್ರಭೃತಿ:
ಸ್ವಧರ್ಮ ಎಂದರೆ ಋತ,
ಸೃಷ್ಟಿ ಎನುವ ರಥ
ಸುಲಲಿತ ಚಲಿಸಲಿ ಎಂದು
ರೂಪಿಸಿಟ್ಟ ಪಥ.
ಋತವೇ, ಪಥದೊಳಗೆಳೆದುಕೊ
ಸ್ವಾರ್ಥಿ ಮನುಜನನ್ನು;
ಬುದ್ಧಿಯುಟ್ಟು ಧರ್ಮದಿಂದ
ಹೊರನಡೆದವನನ್ನು;
ಇಂದ್ರಿಯಗಳನೂರಿ ಜಗವ
ಹೀರುವ ಭರದಲ್ಲಿ
ಬಾಳಿನ ನಿಜಸೌಂದರ್ಯಕೆ
ಕುರುಡಾದವನನ್ನು.
*****