ಸಂಭ್ರಮವಿಲ್ಲ, ಸಡಗರವಿಲ್ಲ
ಮನೆಯೊಳಗೆ ಸೂತಕದ ವಾತಾವರಣ
ಆಶೆಯಂತೆಯೆ
ಬತ್ತಿ ಹೋಗಿದೆ ಎದೆ ಹಾಲು
ಹಡೆದವ್ವ ಕೊರಗುವಳು
ಜೋಲಿ ಏರಿಸಲು
ಮೊಳೆಯೆ ಸಿಗಲೊಲ್ಲದು
ಅಪ್ಪ ಗೊಣಗುವನು
ಪೇಟೆಯಲ್ಲಿ ಮಿಠಾಯಿ
ಇದ್ದಕ್ಕಿದ್ದ ಹಾಗೆಯೆ ತುಟ್ಟಿಯಾಗಿದೆ
ಚಂದ ಮಾಡಿ ಪದ ಹಾಡುವ
ಅಜ್ಜಿಯ ಗಂಟಲೂ ಕಟ್ಟಿ ಹೋಗಿದೆ
ದೂರದಿಂದಲೇ ಶುಭ ಕೋರಿದ್ದಾರೆ
ಬಂಧುಗಳು
ಯಾರೊಬ್ಬರೂ ಸೂಚಿಸಿಲ್ಲ
ಮಗುವಿಗೆ ಹೆಸರು
ಹೋಗಲಿ ಬಿಡಿ…
ಯಾರೋ ಸಮಾಧಾನ ಮಾಡುವರು
‘ಸಾಕಮ್ಮ’ ‘ಸಾಕು’ ಸಾಕು…
ನಿಟ್ಟುಸಿರೇ ಹೆಸರಾಗಿ
ಮಗುವನು ಅಲಂಕರಿಸುವುದು
ನಿರಾಶೆ, ನಿರ್ಲಕ್ಷ್ಯ
ಹಸುಕಂದನಿಗೆ ಹೇಗೆ ಅರ್ಥವಾಗುವುದು?
ನುಣ್ಣನೆಯ ಸಣ್ಣ ದನಿ ಜಡ ಜಗತ್ತ ಭೇದಿಸುವುದು
ಹಿಡಿಯಷ್ಟಿರುವ ತಂಗಿಯನು
ಮುಡಿಯಷ್ಟಿರುವ ಅಕ್ಕ
ಅಕ್ಕರೆಯಿಂದ ಅಪ್ಪುವಳು
ಅಭಯ ನೀಡುವಳು.
*****