ಮುಸ್ಸಂಜೆಯ ಮಿಂಚು – ೨೩

ಮುಸ್ಸಂಜೆಯ ಮಿಂಚು – ೨೩

ಅಧ್ಯಾಯ ೨೩  ವೃದ್ದರಿಬ್ಬರ ಮದುವೆ

ಸೂರಜ್ ಈಗ ತನ್ನ ಮನದ ಭಾವನೆಗಳನ್ನು ಹೇಗೆ ರಿತುವಿಗೆ ತಿಳಿಸುವುದು? ಅನಂತರ ಅವಳು ಹೇಗೆ ಪ್ರತಿಕ್ರಿಯಿಸಿಯಾಳು ಎಂಬ ಚಿಂತೆ ಶುರುವಾಗಿತ್ತು. ತನ್ನನ್ನು ಅಪಾರ್ಥ ಮಾಡಿಕೊಂಡುಬಿಟ್ಟರೆ? ಈಗ ಒಳ್ಳೆಯ ಸ್ನೇಹಿತರಂತೆ ಇದ್ದೇವೆ. ನಾಳೆ ಅದನ್ನೂ ಕಳ್ಕೊಂಡು ಬಿಟ್ಟರೆ ? ಬೇಡ, ನೇರವಾಗಿ ಕೇಳುವುದೇ ಬೇಡ. ಮೊದಲು ಅವಳ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಂಡು ಅನಂತರ ಮುಂದಿನ ಹೆಜ್ಜೆ ಇಡಬೇಕೆಂದು ನಿರ್ಧರಿಸಿಕೊಂಡ. ಅದಕ್ಕಾಗಿ ಕಾಯತೊಡಗಿದ.

ಅವಕಾಶ ತಾನಾಗಿಯೇ ಕೂಡಿ ಬಂದಿತ್ತು. ರಿತುವಿಗೆ ಮಿಂಚುವಿನ ಹುಟ್ಟಿದ ಹಬ್ಬ ಆಚರಿಸಬೇಕು ಅನ್ನೋ
ಹಂಬಲ ಹುಟ್ಟಿಕೊಂಡಿತ್ತು. ಮಿಂಚು ಹುಟ್ಟಿ ಇನ್ನೆರಡು ದಿನಗಳಲ್ಲಿ ವರ್ಷ ತುಂಬುತ್ತಿತ್ತು. ತನ್ನ ಆಸೆ ಹೇಳಿಕೊಂಡ ಕೂಡಲೇ ಆಶ್ರಮದಲ್ಲಿ ಎಲ್ಲರೂ ಸಂತೋಷದಿಂದ ಒಪ್ಪಿದರು. ಮಿಂಚುವಿಗೆ ಹೊಸ ಬಟ್ಟೆ ತರಲು ರಿತು ನಿರ್ಧರಿಸಿದಳು. ಹೆಣ್ಣು ಮಗು ಕಿವಿ ಚುಚ್ಚಿಸಬೇಕೆನಿಸಿ, ರಿತು ಹೊರ ಕರೆದೊಯ್ಯಲು ಸೂರಜ್‌ನ ನೆರವು ಬೇಡಿದಳು. ಕೂಡಲೇ ಒಪ್ಪಿಕೊಂಡ ಸೂರಜ್ ಒಂದು ಕಂಡೀಶನ್ ಹಾಕಿದ. ಮಿಂಚುವಿನ ಹುಟ್ಟಿದ ಹಬ್ಬದ ಕೊಡುಗೆಯಾಗಿ ತಾನೇ ಅವಳಿಗೆ ಕಿವಿ ಓಲೆ ತೆಗೆಸಿಕೊಡುವುದಾಗಿ ಹೇಳಿ ಅದಕ್ಕೆ ಒಪ್ಪಿದರೆ ಮಾತ್ರ ಜತೆಗೆ ಬರಲು ಒಪ್ಪುವೆನೆಂದ.

“ಅಯ್ಯೋ, ಅದಕ್ಕೇನಂತೆ, ಧಾರಾಳವಾಗಿ ತೆಗೆಸಿಕೊಡು. ಅವಳು ಆಶ್ರಮದ ಮಗಳು ತಾನೇ? ನಿನಗೂ ಮಗಳಿದ್ದಂತೆ.”

“ಅಂದ್ರೆ ಮಿಂಚುವಿಗೆ ಅಪ್ಪನೂ ಸಿಕ್ಕಿದಂತಾಯ್ತು” ಎಂದ ತಟಕ್ಕನೆ.

“ಏನ್ ಹೇಳಿದೆ ನೀನು?”

“ಏನಿಲ್ಲ ಕೂತ್ಕೋ. ಮುಂದುಗಡೇನೇ ಬಾ. ಇಲ್ಲದೆ ಇದ್ರೆ ನನ್ನ ಡ್ರೈವರ್ ಅಂದುಕೊಂಡರೆ ಕಷ್ಟ” ಎಂದು ಹೇಳಿ ಕಾರು ಚಲಾಯಿಸಿದ. ಮೊದಲು ಮಗುವಿಗೆ ಫ್ರಾಕ್ ತೆಗೆದುಕೊಂಡರು. ಆಮೇಲೆ ಕಿವಿಗೆ ಹವಳದ ಓಲೆಯನ್ನು ಸೆಲೆಕ್ಟ್ ಮಾಡಿದಳು. ಮಿಂಚು ಕಿವಿ ಚುಚ್ಚಿಸಿಕೊಳ್ಳುವಾಗ ವಿಪರೀತ ಅತ್ತುಬಿಟ್ಟಳು.

“ಮಿಂಚು, ಅಳಬೇಡ ಮಿಂಚು, ನೀನು ನನ್ನ ಮುದ್ದು ಅಲ್ವಾ? ಆಗಿಹೋಯ್ತು. ಇನ್ನು ನೋವಾಗಲ್ಲ, ಅಳಬೇಡ ಚಿನ್ನು” ಸಮಾಧಾನಿಸುತ್ತಿದವಳ ಕಣ್ಣುಗಳಲ್ಲಿಯೂ ನೀರಿನ ತೆಳು ಸೆಲೆ.

ಅದನ್ನು ಕಂಡ ಸೂರಜ್ ಜೋರಾಗಿ ನಕ್ಕವನೇ, “ರಿತು, ಮಿಂಚು ಏನೋ ಸರಿ, ಆದರೆ ನೀನ್ಯಾಕೆ ಅಳ್ತಾ ಇದ್ದೀಯಾ? ನಿಂಗೇನು ಕಿವಿ ಚುಚ್ಚಿಸಲಿಲ್ಲವಲ್ಲ?” ರೇಗಿಸಿದ.

ಕಣ್ಣಿನಲ್ಲಿ ತುಂಬಿದ್ದ ನೀರನ್ನು ಒರೆಸಿಕೊಂಡವಳೇ ತನ್ನ ಕಣ್ಣಿನ ನೀರು ಸೂರಜ್‌ನ ದೃಷ್ಟಿಗೆ ಬಿದ್ದು ಆತ ನಕ್ಕಾಗ ಸಂಕೋಚಿಸುತ್ತ, “ಮಿಂಚು ಅಳ್ತಾ ಇದ್ರೆ ನನ್ನ ಕೈಲಿ ತಡ್ಕೊಳ್ಳೋದಕ್ಕೆ ಆಗಲಿಲ್ಲ ಸೂರಜ್, ನನಗೆ ಗೊತ್ತಿಲ್ಲದಂಗೆ ಕಣ್ಣೀರು ಬಂದುಬಿಡ್ತು. ತುಂಟಿ ನನ್ನ ಅಳಿಸಿಬಿಟ್ಟು, ಈಗ ನೋಡು, ಹೇಗೆ ನನ್ನೇ ನೋಡ್ತಾ ಇದ್ದಾಳೆ ಅಂತ” ಕೆನ್ನೆ ತಟ್ಟಿದಳು. ಸೂರಜ್ನ ತೋಳುಗಳಲ್ಲಿ ಇದ್ದ ಮಿಂಚು ರಿತುವಿನತ್ತ ಹಾರಿ ಬಂದಳು.

“ಸರಿ, ಮಿಂಚುವಿನ ಕಾರ್ಯಕ್ರಮವೆಲ್ಲ ಮುಗಿಯಿತು. ಮತ್ತೇನು ಮುಂದಿನ ಕಾರ್ಯಕ್ರಮ?” ಕಾರು ಡ್ರೈವ್ ಮಾಡುತ್ತಲೇ ಕೇಳಿದ.

“ಇನ್ನೇನೂ ಇಲ್ಲ. ಮಿಂಚುವನ್ನು ನಮ್ಮ ಮನೆಗೆ ಕರ್ಕೊಂಡು ಹೋಗೋಣವಾ? ಅಜ್ಜಿ ನೋಡಬೇಕು. ತುಂಬಾ ದಿನ ಆಯ್ತು ಅಂತ ಇದ್ದರು” ಎಂದಳು.

“ಸರಿ, ಈಗ ನಿಮ್ಮನೆಗೆ ಹೋಗಬೇಕು. ದಾರಿ ಹೇಳ್ತಾ ಹೋಗು. ನಿಮ್ಮ ಮನೆ ಮುಂದೆ ನಿಲ್ಲಿಸುತ್ತೇನೆ” ಎಂದ.

ಭಾನುವಾರವಾದ್ದರಿಂದ ತನುಜಾ-ಮನು ಮನೆಯಲ್ಲಿಯೇ ಇದ್ದರು. ಊಟಕ್ಕೆ ಇಲ್ಲಿಗೆ ಬರುವುದಾಗಿ ರಿತು ಹೇಳಿದ್ದರಿಂದ ಊಟವನ್ನೂ ಮಾಡದೆ ಅವಳಿಗಾಗಿ ಕಾಯುತ್ತಿದ್ದರು. ರಿತುವಿನ ಜತೆ ಸೂರಜ್‌ನನ್ನು ನೋಡಿ ಅಚ್ಚರಿಗೊಂಡರು. ಆಶ್ರಮಕ್ಕೆ ಹೋಗಿದ್ದಾಗ ಸೂರಜ್ನ ಪರಿಚಯವಾಗಿತ್ತು. ಇನ್ನು ಪ್ರತಿದಿನ ಸೂರಜ್‌ನ ಬಗ್ಗೆ ಏನಾದರೂ ಹೇಳುತ್ತಿದ್ದ ರಿತುವಿನಿಂದ ಅವನ ವ್ಯಕ್ತಿತ್ವದ ಪರಿಚಯವೂ ಆಗಿತ್ತು.

ಮಿಂಚುವನ್ನು ಆಶ್ರಮದಲ್ಲಿಯೇ ಉಳಿಸಿಕೊಳ್ಳುವಲ್ಲಿ ಸೂರಜ್ನ ಪಾತ್ರವೇ ಅಪಾರವಾಗಿದ್ದುದು ತಿಳಿದಿತ್ತು. ಹೆತ್ತವರ ಆಸೆಗಳಿಗೆ ಸ್ಪಂದಿಸದೆ, ತಾತನ ಉದಾತ್ತ ಗುಣವನ್ನು ಮೆಚ್ಚಿ ಇಲ್ಲಿಯೇ ನೆಲೆಸಿ, ಹೆತ್ತ ಮಗನಿಂದ ಉಂಟಾಗಿದ್ದ ನೋವನ್ನು ಮೊಮ್ಮಗನಾಗಿ ಸ್ವಲ್ಪಮಟ್ಟಿಗೆ ಕಡಿಮೆ ಮಾಡುವ ಅವನ ಉದಾರ ಗುಣವನ್ನು ಮನು ಮತ್ತು ತನುಜಾ ಕೂಡ ಮೆಚ್ಚಿಕೊಂಡಿದ್ದರು. ಇಂಥ ಸರಳ, ಸಜ್ಜನ ಮನೆಗೆ ಬಂದದ್ದು ಹೆಚ್ಚಿನ ಸಂತೋಷ ತಂದಿತು. ಅದು ಅವರ ಮಾತುಕತೆ, ಕೃತಿಗಳಲ್ಲಿ ಪ್ರತ್ಯಕ್ಷವಾಗಿ ಕಾಣಿಸಿಕೊಂಡಿತ್ತು.

ಸಡಗರದಿಂದಲೇ ಸೂರಜ್‌ನನ್ನು ಬರಮಾಡಿಕೊಂಡರು. “ಬಡವರ ಮನೆಗೆ ಭಾಗ್ಯದೇವತೆ ಬಂದ ಹಾಗೆ ಬಂದ್ಯಲ್ಲಪ್ಪ, ಬಾ ದೊರೆ” ಎಂದು ಅಜ್ಜಿ ಹಾರ್ದಿಕವಾಗಿ ಸ್ವಾಗತಿಸಿದಳು.

ಅಜ್ಜಿಯನ್ನು ಕಂಡೊಡನೆ ಸೂರಜ್‌ಗೆ ಏನನಿಸಿತೋ? ಎದ್ದು ಬಂದವನೇ ಅಜ್ಜಿಯ ಕಾಲುಗಳಿಗೆ ನಮಸ್ಕರಿಸಿದ. “ಅಯ್ಯಯ್ಯೋ, ನನ್ನ ಕಾಲಿಗೆ ಯಾಕಪ್ಪಾ ಬೀಳ್ತೀಯಾ? ದೇವರು ನಿನ್ನ ನೂರು ವರ್ಷ ಚಿನ್ನಾಗಿಟ್ಟಿರಲಿ” ಎಂದು ಮನ ತುಂಬಿ ಹರಿಸಿದಳು.

“ಮಿಂಚು ಪುಟ್ಟ ಬಂದುಬಿಟ್ಟಿದೆ ನಮ್ಮ ಮನೆಗೆ, ಈ ಆಜ್ಜಿನ ನೋಡಬೇಕು ಅಂತ ನೀನೇ ಬಂದುಬಿಟ್ಯಾ ಮುದ್ದು? ಬಾರೆ ಬಾರೆ, ಚಿನ್ನಿ” ಎನ್ನುತ್ತ ರಿತುವಿನ ಬಳಿ ಇದ್ದ ಮಿಂಚುವನ್ನು ಕರೆದರು. ಅದು ಗಾಬರಿಯಿಂದ ಅಜ್ಜಿಯನ್ನೇ ನೋಡುತ್ತ ರಿತುವನ್ನು ತನ್ನ ಪುಟ್ಟ ಕೈಗಳಿಂದ ಬಲವಾಗಿ, ಗಟ್ಟಿಯಾಗಿ ಹಿಡಿದುಕೊಂಡಿತು.

“ನಾನು ಅಜ್ಜಿ ಕಣೆ ಬಾರೇ, ಮಮ್ಮು ಮಾಡಿಸ್ತೀನಿ ಬಾರೇ ಚಿನ್ನಿ. ಹೊಟ್ಟೆ ಹಸೀತಾ ಇಲ್ವಾ ಬಾ” ಎಂದು ರಿತುವಿನಿಂದ ಬಲವಂತವಾಗಿ ಕಿತ್ತುಕೊಂಡು, “ರಿತು, ಬೇಗ ಊಟಕ್ಕೇಳು, ಆ ಮಗೂನ್ನೂ ಏಳಿಸು, ಮನು, ತನುಜಾ ಊಟ ಮಾಡದೆ ಕಾಯ್ತಾ ಇದ್ದಾರೆ. ಎಲ್ಲಾ ಒಟ್ಟಿಗೆ ಕೂತ್ಕಂಡುಬಿಡಿ, ಪುಟ್ಟಿನ ನಾನು ನೋಡ್ಕೋತೀನಿ” ಅಜ್ಜಿ ಅವಸರಿಸಿ ಏಳಿಸಿದಳು.

ಮಿಂಚು ಜೋರಾಗಿ ಅಳಲು ಪ್ರಾರಂಭಿಸಿದಾಗ ಸಮಾಧಾನಿಸುತ್ತ, “ತನುಜಾ, ಒಂದು ತುತ್ತು ಅನ್ನಕ್ಕೆ ತುಪ್ಪ, ಒಂಚೂರು ಸಾರು ಹಾಕಿ ಕೊಡೇ. ಪಾಪ, ಹಸಿದಿದೆ ಅನ್ನಿಸುತ್ತೆ. ಹೊರಗಡೆ ಹೋಗಿ ತಿನ್ನಿಸುತ್ತೇನೆ” ಎಂದು ಬಟ್ಟಲಲ್ಲಿ ಹಾಕಿಕೊಟ್ಟ ಅನ್ನ, ತುಪ್ಪ, ಸಾರನ್ನು ಕಿವುಚುತ್ತ ಹೊರನಡೆದರು. ಮಿಂಚು ಅಳುತ್ತಲೇ ಇದ್ದಳು. ಅದನ್ನು ನೋಡಲಾರದೆ ಮನು,

“ಅಮ್ಮಾ ಅಷ್ಟೊಂದು ಅಳ್ತಾ ಇದೆಯಲ್ಲಮ್ಮ ಮಗು. ನಾನು ಎತ್ಕೋತೀನಿ ತಾಳು” ಎಂದವರೇ ಅಜ್ಜಿಯ ಕೈಯಿಂದ ಮಗುವನ್ನು ಎತ್ತಿಕೊಂಡರು. ಮಿಂಚುವಿನ ಅಳು ಮತ್ತೂ ತಾರಕಕ್ಕೇರಿತು.

“ಬಾರೆ ಮುದ್ದಮ್ಮ, ಇವರ್ಯಾರೂ ನಿನ್ನ ಸರಿಯಾಗಿ ಎತ್ತಿಕೊಳ್ಳಲ್ಲ. ನಾನು ಎತ್ತಿಕೊಳ್ಳುತ್ತೇನೆ ಬಾರೇ, ನಾನೇ ನಿಂಗೆ ಊಟ ತಿನ್ನಿಸುತ್ತೇನೆ” ಮಿಂಚುವಿನ ಅಳು ನಿಲ್ಲಿಸಲು ತನುಜಾ ಕೂಡ ಪ್ರಯತ್ನಿಸಿದಳು. ಊಹೂಂ, ಅವರ್ಯಾರ ಮುದ್ದುಗರೆಯುವಿಕೆಗೂ ಜಗ್ಗದ-ಬಗ್ಗದ ಮಿಂಚು ಅಲ್ಲಿ ರಿತುವನ್ನು ಕಾಣದೆ ಸೂರಜ್‌ನತ್ತ ಕೈತೋರುತ್ತ ಅಳುವನ್ನು ಜೋರಾಗಿಸಿತು.

ಆ ಮಗುವಿನ ಮೇಲೆ ಇಡೀ ಮನೆಯವರೆಲ್ಲ ಸುರಿಸುತ್ತಿದ್ದ ಪ್ರೀತಿಯನ್ನು ಬೆರಗಿನಿಂದ ನೋಡುತ್ತ, ಒಂದೂ ಮಾತಾಡದೆ ಕುಳಿತಿದ್ದ ಸೂರಜ್‌ಗೆ ಮಿಂಚು ಆರ್ತಳಾಗಿ ನೋಡುತ್ತ ತನ್ನತ್ತ ಕೈಮಾಡಿ ಅಳುತ್ತಿರುವುದನ್ನು ಸಹಿಸದೆ ಹೋದ. ತಟಕ್ಕನೇ ಎದ್ದು ನಿಂತ ಸೂರಜ್, ತನುಜಾಳ ಬಳಿ ಇದ್ದ ಮಗುವನ್ನು ಎತ್ತಿಕೊಂಡು ತನ್ನೆದೆಗೆ ಒತ್ತಿಕೊಂಡ. ಏನೋ ಸಮಾಧಾನವೆನಿಸಿ ಮಿಂಚುವಿನ ಪುಟ್ಟ ತಲೆಗೆ ಮುತ್ತನಿರಿಸಿದ, ಮಿಂಚು ಅಳು ನಿಲ್ಲಿಸಿದರೂ ಬಿಕ್ಕಳಿಸುತ್ತಲೇ ಇದ್ದಳು.

“ನೋಡಿದ್ರಾ, ಹೇಗೆ ಸುಮ್ಮನಾಗಿಬಿಟ್ಟಳು ನಿಮ್ಮಹತ್ರ ಬಂದ ಕೂಡಲೇ, ಅದೇನು ಮೋಡಿ ಮಾಡಿದ್ದೀರಾ ಈ ಕಳ್ಳಿಗೆ” ಮನು ಮಿಂಚು ಅಳುವುದನ್ನು ನಿಲ್ಲಿಸಿದ್ದನ್ನು ಕಂಡು ಅಚ್ಚರಿಪಟ್ಟನು.

“ನೀವೆಲ್ಲ ಹೊಸಬರು ಅಲ್ವಾ? ಅಲ್ಲಿ ದಿನಾ ನನ್ನ ನೋಡ್ತಾ ಇರ್ತಾಳೆ. ಹಾಗಾಗಿ ನಿಮತ್ರ ಗಾಬರಿ ಆಗಿದ್ದಾಳೆ. ನನಗಿಂತ ಮಿಂಚು ರಿತುವನ್ನು ಹೆಚ್ಚು ಹಚ್ಚಿಕೊಂಡಿದ್ದಾಳೆ” ಎಂದ ಮೆಲ್ಲನೆ.

ಊಟಕ್ಕೆ ಏರ್ಪಾಡು ಮಾಡಲು ಒಳಹೋಗಿದ್ದ ರಿತು, “ಅರೆ! ಮಿಂಚು ನಿಮತ್ರ ಇದ್ದಾಳೆ. ಏಯ್ ಕಳ್ಳಿ, ಸೂರಜ್ ಊಟ ಮಾಡಬೇಕು. ನೀನು ಅಜ್ಜಿ ಹತ್ರ ಹೋಗು. ಅಜ್ಜಿ, ಹೊರಗಡೆ ಉಯ್ಯಾಲೆ ಮೇಲೆ ಕೂರಿಸು, ಸುಮ್ಮನಾಗ್ತಾಳೆ, ಅಳಲ್ಲ” ಎಂದು ಹೇಳಿ, “ಬಾ ಸೂರಜ್, ಊಟ ಮಾಡೋಣ, ನನಗಂತೂ ತುಂಬಾ ಹಸಿವಾಗ್ತಾ ಇದೆ” ಎನ್ನುತ್ತ ಒಳಗೆ ಕರೆದೊಯ್ದಳು.

ಮನು, ರಿತು, ಸೂರಜ್ ಟೇಬಲ್ ಬಳಿ ಕುಳಿತುಕೊಂಡರು. ತನುಜಾ ಬಡಿಸುತ್ತಿದ್ದಳು. ಭಾನುವಾರವೆಂದು ರಿತುವಿಗೆ ಇಷ್ಟವಾದ ಪಲಾವ್ ಮಾಡಿ, ಈರುಳ್ಳಿ ಬಜ್ಜಿ ಕರಿದಿದ್ದಳು. ಈಗ ಸೂರಜ್ ಬಂದಿದ್ದಾನೆಂದು ಒಂದಿಷ್ಟು ಶ್ಯಾವಿಗೆ ಪಾಯಸ ಮಾಡಿದಳು ರಿತು. “ಆದಷ್ಟು ಬೇಗ ಪಾಯಸ ಮಾಡಿದೆ ರಿತು? ಶ್ಯಾವಿಗೆ ಪಾಯಸ ಅಂದ್ರೆ ನಂಗೆ ತುಂಬಾ ಇಷ್ಟ” ಚಪ್ಪರಿಸುತ್ತ ಪಾಯಸದ ಸವಿಯನ್ನು ಸವಿದ ಸೂರಜ್. ಇಷ್ಟು ಸರಳವಾಗಿ ತಮ್ಮೊಂದಿಗೆ ಬೆರೆತು ಹೋದ ಸೂರಜ್‌ನ ಗುಣ ಎಲ್ಲರಿಗೂ ಬಹಳ ಹಿಡಿಸಿತು. ಊಟ ಮಾಡುತ್ತಲೇ ತನ್ನ ತಂದೆ-ತಾಯಿಯ ಬಗ್ಗೆ ಅವರ ಆಸೆಗಳು, ಅದನ್ನು ತಾನು ತಿರಸ್ಕರಿಸಿದ್ದು, ಅದಕ್ಕಾಗಿ ಕೋಪಗೊಂಡ ಅವರು ವಾಪಸ್ಸು ಹೋಗಿದ್ದು, ಎಲ್ಲವನ್ನೂ ಹೇಳಿಕೊಂಡ. ಯಾಕೋ ಇವರ್ಯಾರೂ ಅನ್ಯರು ಎಂಬ ಭಾವನೆಯೇ ಸೂರಜ್‌ಗೆ ಕಾಡಲಿಲ್ಲ. ಆ ಮನೆಯ ವಾತಾವರಣ, ಮನು, ತನುಜಾ, ಅಜ್ಜಿ ಇವರೆಲ್ಲರ ಸರಳತೆ, ಆತ್ಮೀಯತೆ ಎಲ್ಲವ ಸೂರಜ್‌ಗೆ ಇಷ್ಟವಾಗಿತ್ತು. ಅತ್ತೆ-ಸೊಸೆ, ತಾಯಿ-ಮಗಳಂತೆ ಪ್ರೀತಿಯಿಂದ ಇರುವುದು, ಮನು ತಾಯಿಗೆ ತೋರುವ ಗೌರವ, ಪ್ರೀತಿ, ತಾಯಿಗಾಗಿ ಮಿಡಿಯುವ ಅವರ ಕಾಳಜಿ ಎಲ್ಲವೂ ಹೊಸದಾಗಿ ಕಾಣಿಸುತ್ತಿತ್ತು. ಇದೊಂದು ಆದರ್ಶ ಕುಟುಂಬ. ಇಂಥ ಕುಟುಂಬದಿಂದ ರಿತು ಬಂದಿದ್ದರಿಂದಲೇ ಅಷ್ಟೊಂದು ಸಂಸ್ಕಾರ, ಅನ್ಯರಿಗೆ ಮಿಡಿಯುವ ಹೃದಯ, ಕಷ್ಟಗಳಿಗೆ ನೆರವಾಗುವ ಮನಸ್ಸು… ಎಲ್ಲವೂ ಅವಳಿಗೆ ರಕ್ತಗತವಾಗಿರುವುದು ಎಂದು ಅಂದುಕೊಂಡ. ಅವಳ ಮೇಲಿನ ಪ್ರೀತಿ ಮತ್ತೂ ಹೆಚ್ಚಾಯಿತು. ಆದರೆ ಅವನ ಮನಸ್ಸಿನ ಭಾವಗಳಾಗುವುವನ್ನೂ ಅರಿಯದ ರಿತು, ಮೌನವಾಗಿ ಊಟ ಮಾಡುತ್ತಿದ್ದಳು. ತನುಜಾ ಬಲವಂತ ಮಾಡಿ ಬಡಿಸುತ್ತಾ ಆತ್ಮೀಯವಾಗಿ ಸೂರಜ್‌ನನ್ನು ಉಪಚರಿಸಿದಳು. ಊಟವಾದ ಆನಂತರ ಸೂರಜ್ ಹೊರಟು ನಿಂತನು. ರಿತುವಿನ ಮನೆಯವರನ್ನೆಲ್ಲ ಮನೆಗೆ ಆಹ್ವಾನಿಸಿದ ಅಜ್ಜಿಯ ಕೈಯಲ್ಲಿ ಊಟ ಮಾಡಿಸಿಕೊಂಡ ಮಿಂಚು ಅಜ್ಜಿ ಜತೆ ಕಿಲಕಿಲನೆ ನಗುತ್ತಿತ್ತು.

“ನೋಡಿ ಈಗ ಹೊಂದಿಕೊಳ್ತಾ ಇದ್ದಾಳೆ. ನಿಮ್ಮ ಮನೆ ಅವಳಿಗೆ ತುಂಬಾ ಇಷ್ಟವಾಗಿದೆ ಅಂತ ಕಾಣುತ್ತೆ. ಮಿಂಚು, ಅಜ್ಜಿ ಜತೆನೇ ಇರ್ತಿಯಾ?” ಎಂದು ಮಿಂಚುವನ್ನು ಮಾತನಾಡಿಸಿದ ಕೂಡಲೇ ಮಿಂಚು ಸೂರಜ್ನ ಬಳಿಗೆ ನೆಗೆದು ಬಂದಳು. ಬಾಯೆಲ್ಲ ಅನ್ನಮಯವಾಗಿತ್ತು. ಅದೇ ಮುಖವನ್ನು ಸೂರಜ್ನ ಶರ್ಟಿಗೆಲ್ಲ ತಿಕ್ಕಿಬಿಟ್ಟಳು. ಶರ್ಟೆಲ್ಲ ಕೊಳೆಯಾಗಿ ಹೋಯಿತು. “ಅಯ್ಯಯ್ಯೋ, ಮುಖ ಒರೆಸಿಯೇ ಇರಲಿಲ್ಲ. ಆಗಲೇ ಹಾರಿ ಹೋಗಿಬಿಟ್ಟಳಾ? ನೋಡಿ ಶರ್ಟೆಲ್ಲಾ ಹೇಗೆ ಗಲೀಜಾಯಿತು. ಕೊಡಿ ತೊಳೆದುಕೊಡ್ತೀನಿ” ಎಂದ ಅಜ್ಜಿಗೆ,

“ಪರವಾಗಿಲ್ಲ ಬಿಡಿ ಅಜ್ಜಿ. ಹೇಗೂ ಮನೆಗೆ ಹೋಗ್ತಾ ಇದ್ದೀನಿ. ಅಲ್ಲಿಯೇ ಶರ್ಟನ್ನ ಬದಲಾಯಿಸುತ್ತೇನೆ” ಎಂದ ಸೂರಜ್ ಜೇಬಿನಿಂದ ಕರ್ಚಿಫ್ ತೆಗೆದು ಶರ್ಟ್‌ನ ಮೇಲಿದ್ದ ಅನ್ನದ ಅಗುಳುಗಳನ್ನು ಒರೆಸಿಕೊಂಡು, ಅದೇ ಕರ್ಚಿಫಿನಿಂದ ಮಿಂಚುವಿನ ಮುಖವನ್ನು ಒರೆಸಿದ. ಅವನ ಆ ಕೆಲಸವನ್ನೇ ರಿತು ಅಭಿಮಾನದಿಂದ ನೋಡಿದಳು. ಅವಳ ಕಣ್ಣಿಗೆ ಮಿಂಚು, ಸೂರಜ್ ಆ ಕ್ಷಣ ಅಪ್ಪ-ಮಗಳಂತೆ ಗೋಚರಿಸಿದಾಗ ಒಂದು ಕ್ಷಣ ಸಂತಾಪದಿಂದ ಮರುಕಪಟ್ಟಳು. ಪಾಪ, ಮಿಂಚುವಿಗೆಲ್ಲಿ ಆ ಅದೃಷ್ಟ? ಅಪ್ಪನ ಪ್ರೀತಿ, ಅಮ್ಮನ ವಾತ್ಸಲ್ಯ ಎರಡರಿಂದಲೂ ದೂರಾದ ನತದೃಷ್ಟ ಮಗು ಎಂದು ಪರಿತಾಪಪಟ್ಟಳು. ಯಾರೆಷ್ಟೇ ಪರಿತಾಪಪಟ್ಟರೂ ಮಿಂಚುವಿನ ಸ್ಥಿತಿ ಏನೂ ಬದಲಾಗದು ಎಂದುಕೊಂಡು ಸೂರಜ್‌ನೊಂದಿಗೆ ಮಿಂಚುವನ್ನು ಬಿಟ್ಟುಬರಲು ಹೊರಟಳು. ಮನು, ತನುಜಾಗೆ ಒಳ್ಳೆಯ ಊಟ ಹಾಕಿದ್ದಕ್ಕೆ ಹಾಗೂ ಆತ್ಮೀಯತೆ ತೋರಿದ್ದಕ್ಕೆ ಮತ್ತೊಮ್ಮೆ ಧನ್ಯವಾದ ಹೇಳುತ್ತಾ ಎಲ್ಲರಿಗೂ ವಂದಿಸಿ ಕಾರು ಹತ್ತಿದ. ಅವನ ಜತೆ ಹೊರಟ ರಿತು ಮಿಂಚುವನ್ನು ಎತ್ತಿಕೊಂಡು ಕಾರನ್ನೇರಿದಳು. ಪರಿಸ್ಥಿತಿ ಬದಲಾಗದಿದ್ದಲ್ಲಿ ರಿತು ತನ್ನ ಕರುಳ ಕುಡಿಯನ್ನು ಎತ್ತಿಕೊಂಡು ಜಸ್ವಂತನ ಜತೆ ಹೀಗೆ ನೋಡುವ ಭಾಗ್ಯ ತಮ್ಮದಾಗುತ್ತಿತ್ತು ಎಂಬ ಆಲೋಚನೆಯಿಂದ ಮನು ಹಾಗೂ ತನುಜಾ ಒಂದು ಕ್ಷಣ ಮಂಕಾದರು.
* * *

ಆಶ್ರಮಕ್ಕೆ ಮತ್ತೊಬ್ಬಾಕೆ ಹೊಸದಾಗಿ ಸೇರಿಕೊಂಡಿದ್ದರು. ಶಿಕ್ಷಕಿಯಾಗಿದ್ದ ಯಶೋದಾ ತನ್ನ ತಮ್ಮ
ತಂಗಿಯರ ಬದುಕನ್ನು ರೂಪಿಸಲು ಅವಿವಾಹಿತೆಯಾಗಿಯೇ ಉಳಿದುಬಿಟ್ಟಿದ್ದಳು. ಇಬ್ಬರು ತಂಗಿಯರು, ಒಬ್ಬ ತಮ್ಮನನ್ನು ಓದಿಸಿ, ಅವರಿಗೆ ಕೆಲಸ ಕೊಡಿಸಿ ಮದುವೆ ಮಾಡುವಷ್ಟರಲ್ಲಿ ಮದುವೆಯ ವಯಸ್ಸು ಮೀರಿತ್ತು. ಆದರೂ ಹೆತ್ತವರ ಮನಸ್ಸನ್ನು ನೋಯಿಸಲಾರದೆ ಎರಡನೆಯ ಸಂಬಂಧಕ್ಕೆ ಕೊರಳೊಡ್ಡಿದ್ದಳು. ಅದೇಕೋ ಆ ವೈವಾಹಿಕ ಬದುಕು ಯಶೋದಳಿಗೆ ಮುಳ್ಳಿನ ಹಾಸಿಗೆ ಎನಿಸಿದಾಗ ಆ ಬದುಕಿನಿಂದಲೇ ಹೊರಬಂದು ಹೆತ್ತವರ, ಒಡಹುಟ್ಟಿದವರ ಕೆಂಗಣ್ಣಿಗೆ ಗುರಿಯಾಗಿದ್ದಳು. ನಿವೃತ್ತಿಯಾಗುವತನಕ ಒಂಟಿಯಾಗಿಯೇ ಬದುಕುತ್ತಿದ್ದ ಯಶೋದಾ ಅನಂತರ ಯಾರಿಗೂ ಬೇಡವಾಗಿರುವ ತಾನು ಅವರಿಗೆ ಹೊರೆಯಾಗಬಾರದೆಂದು ಬಂದ ಹಣವನ್ನು ಜತೆಗಿಟ್ಟುಕೊಂಡು ಆಶ್ರಮದ ಹಾದಿ ಹಿಡಿದಿದ್ದಳು. ಇಲ್ಲಿನ ವಾತಾವರಣ, ಸಹಸದಸ್ಯರ ಸ್ನೇಹದಲ್ಲಿ ತನ್ನ ಏಕಾಂಗಿತನವನ್ನು ಮರೆಯುತ್ತ ನೆಮ್ಮದಿ ಅರಸಲು ಯತ್ನಿಸುತ್ತಿದ್ದಳು.

ಹೀಗಿರುವಾಗಲೇ ಆಶ್ರಮದ ಪಾಂಡುರಂಗರವರೊಂದಿಗಿನ ಸ್ನೇಹ ಇಷ್ಟವಾಗತೊಡಗಿತು. ವಿದ್ಯಾವಂತೆಯಾಗಿದ್ದ ಯಶೋದಾ ತನ್ನ ಕಥೆಗಳನ್ನೆಲ್ಲ ಹೇಳಿಕೊಳ್ಳುತ್ತ, ತನ್ನವರ ಸ್ವಾರ್ಥ ಗುಣ, ದುರಾಸೆಯಿಂದಾಗಿ ತನ್ನವರೆಲ್ಲ ಇದ್ದು ಒಂಟಿಯಾಗಿರುವ ದುರಾದೃಷ್ಟ ತನ್ನದಾಗಿದೆ ಎಂದು ಕಣ್ಣೀರಿಡುವಾಗ ಪಾಂಡುರಂಗರವರು ಸಮಾಧಾನಿಸುತ್ತಿದ್ದರು. ಮದುವೆಯಾದರೂ ಹಿರಿಯ ಹೆಂಡತಿಯ ಮಕ್ಕಳ ಅಸಹನೆ, ತಂದೆಯ ಪ್ರೀತಿಯಲ್ಲಿ, ಆಸ್ತಿಯಲ್ಲಿ ಪಾಲಿಗೆ ಬಂದವಳೆಂಬ ತಿರಸ್ಕಾರ, ಜತೆಗೆ ಗಂಡನ ಪ್ರೀತಿ ದಕ್ಕದೆ ಹೋದದ್ದು, ಸದಾ ಮೊದಲ ಹೆಂಡತಿಯ ಪ್ರೇಮವನ್ನೇ ಸ್ಮರಿಸುತ್ತ ತನ್ನನ್ನು ಕಡೆಗಣಿಸಿದ್ದನ್ನು ಸಹಿಸದೆ ಆ ಬದುಕನ್ನೇ ಒದ್ದು ಬಂದದ್ದು. ಒಡಹುಟ್ಟಿದವರಿಗೆ ತನ್ನ ಸಂಪಾದನೆಯ ಮೇಲೆ ಕಣ್ಣು ದುಡಿದದ್ದೆಲ್ಲ ಹಕ್ಕೆಂಬಂತೆ ಕಸಿಯುತ್ತಿದ್ದದ್ದು. ಈಗ ನಿವೃತ್ತಿಯ ಹಣದ ಮೇಲೂ ಕಣ್ಣಾಕಿದಾಗ ಮನಸ್ಸು ನೊಂದು, ಅವರ್ಯಾರಿಗೂ ಹೇಳದೆ ಈ ಆಶ್ರಮ ಸೇರಿದ್ದು ಎಲ್ಲವನ್ನೂ ಹೇಳಿಕೊಂಡು, ಕೊರಗುತ್ತಿದ್ದಳು ಯಶೋದಾ. ಬದುಕಿನ ಉದ್ದಕ್ಕೂ ಒಂದೇ ಒಂದು ಪ್ರೀತಿಯ, ಸಮಾಧಾನದ ಮಾತು ಕೇಳಿರದ ಯಶೋದಾಳಿಗೆ ಪಾಂಡುರಂಗರ ಸಾಂತ್ವನ, ಅವರ ಪ್ರೀತಿ ತುಂಬಿದ ಮಾತುಗಳಿಂದ ಪ್ರಭಾವಿತಳಾದಳು.

ಪಾಂಡುರಂಗರವರಿಗೆ ಯಶೋದಾಳ ಸರಳತೆ, ಬುದ್ಧಿವಂತಿಕೆ, ಆತ್ಮೀಯವಾಗಿ ಬೆರೆಯುವ ಗುಣ ಇಷ್ಟವಾಗಿ ಬಹುತೇಕ ಜತೆಯಲ್ಲಿಯೇ ಇರುವ ಆಸೆಯನ್ನು ತಡೆಯದೆ ಹೋಗುತ್ತಿದ್ದರು. ತಮ್ಮ ಬದುಕಿನ ನೋವು-ನಲಿವುಗಳನ್ನು ಅವಳೊಂದಿಗೆ ಹೇಳಿಕೊಳ್ಳಲು ಹಿತವೆನಿಸತೊಡಗಿತು. ದಿನದಿಂದ ದಿನಕ್ಕೆ ಅವರ ಸ್ನೇಹ ಬಲವಾಗತೊಡಗಿತು. ಒಬ್ಬರನ್ನೊಬ್ಬರು ಅಗಲಿರಲು ಅಸಾಧ್ಯ ಎನ್ನುವ ಮಟ್ಟಿಗೆ ಅವರಿಬ್ಬರೂ ಹತ್ತಿರವಾಗಿಬಿಟ್ಟರು. ಅವರ ಸ್ನೇಹದ ಸ್ವರೂಪವೇ ಬದಲಾಗಿ ಹೋಗಿತ್ತು. ಈ ಸ್ನೇಹಕ್ಕೆ ಅರ್ಥವೇನು? ಈ ಮನಸ್ಸಿನ ಸಂಬಂಧದ ಸ್ವರೂಪವೇನು ಎಂದು ಹುಡುಕಾಡುತ್ತಿದ್ದಾಗಲೇ ಅವರಿಬ್ಬರಿಗೂ ಅದರ ಹೊಳಹು ಗೋಚರಿಸಿಬಿಟ್ಟಿತ್ತು. ಇದು ಜನ್ಮಜನ್ಮದ ಅನುಬಂಧವೆಂಬುದು ಗೊತ್ತಾಗಿಬಿಟ್ಟಿತು. ಈ ಅನುಬಂಧಕ್ಕೊಂದು ಹೆಸರಿರಿಸಲು ನಿರ್ಧರಿಸಿದರು. ತಾವಿಬ್ಬರೂ ಮದುವೆಯಾಗಿ ಬಿಟ್ಟರೆ ಕೊನೆದಿನಗಳಲ್ಲಿ ಮಾನಸಿಕ ಬಾಂಧವ್ಯದ ಬೆಸುಗೆ ಬೆಸೆದು, ಬದುಕಿನ ಸಂಜೆಯಲ್ಲಿ ಪರಸ್ಪರ ಅವಲಂಬಿತರಾಗಿ ಪ್ರೀತಿ, ವಿಶ್ವಾಸದಿಂದ ಬದುಕಬಹುದೆಂದು ಮನವರಿಕೆ ಮಾಡಿಕೊಂಡರು. ಈ ನಿರ್ಧಾರದಿಂದ ಆಶ್ರಮದಲ್ಲಿ ದೊಡ್ಡ ಗೊಂದಲವೇ ಹುಟ್ಟಿ ಹಾಕೀತೆಂದು ತಿಳಿದಿದ್ದರೂ ಈ ವಯಸ್ಸಿನಲ್ಲಿ ಮದುವೆಯೇ ಎಂದು ಕುಹಕವಾಡಿ ನಕ್ಕರೂ, ಆಡಿಕೊಂಡು ಲೇವಡಿ ಮಾಡಿದರೂ ಧೃತಿಗೆಡದೆ ತಮ್ಮ ನಿರ್ಧಾರಕ್ಕೆ ಬದ್ದರಾಗಿರಲು ತೀರ್ಮಾನಿಸಿಕೊಂಡ ಮೇಲೆಯೇ ತಮ್ಮ ನಿರ್ಧಾರವನ್ನು ಧೈರ್ಯವಾಗಿ ಪ್ರಕಟಿಸಿದ್ದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಗವ ತೋರುವ ಕಣ್ಣು
Next post ತಂಗಿ ಹುಟ್ಟಿದಳು

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…