ಜೊತೆಜೊತೆಯಲಿ
ಕೈಯಲ್ಲಿ ಕೈಯಿಟ್ಟು ನಡೆವ
ಅವರನ್ನೂ ಕಂಡಾಗಲೆಲ್ಲಾ,
ಮುಂದೊಂದು ದಿನ ನಾನು ಹೀಗೆ,
ಬರಿಯ ಹಾಗೇ ಅಂದುಕೊಂಡಿದ್ದೆ, ಅಷ್ಟೇ.
ಪೇಟೆ ದಾರಿಯಲ್ಲಿ
ಹೀಗೆ ಕೈ ಕೈ ಹಿಡಿದು
ನಡೆದಾಡಿರಲೇ ಇಲ್ಲ ನಾವೆಂದೂ.
ಹಾಗೆ ಇರಲಾಗಲೇ ಇಲ್ಲ
ಎಂದುಕೊಳ್ಳುತ್ತಿರುವಾಗಲೇ,
ಆಕಸ್ಮಿಕವಾಗಿ ಆತ ಎದುರಾದದ್ದು.
ಕೊಂಚ ಗಲಿಬಿಲಿ ಮುಖದಲ್ಲೇ ನಕ್ಕು
ಹಲ್ಲು ಗಿಂಜಿದ.
ನನ್ನ ಮುಖದಲ್ಲೊಂದು ವಿಜಯದ ನಗೆ.
ಬಿಚ್ಚಿಕೊಳ್ಳಲು ಏನಿಲ್ಲ
ಗಿಡದ ಕೊರಳಲ್ಲಿ ಮೂಡಿದ ಏಕಾಂಗಿದನಿ
ಜಗದ ದನಿಯಾಗಿ ಮೂಡಿದ್ದಾಗಿದೆ.
ಹೆರಳಿಗೆ ಮುಡಿಸಿದ ಮಾಲೆ
ಕಿತ್ತೆಸೆದು ವರ್ಷಗಳಾಗಿವೆ.
ನಾಭಿಯಲ್ಲುದಿಸಿದ ನಾದ
ಅಶ್ರುತ ಗಾನವಾಗಿ
ಕರ್ಣಕ್ಕೊಲಿಯದೆ ಕರ್ಕಶವಾಗ ಲಾಗಾಯ್ತು.
ಬರಿಯ ದಾಸರ ಪದಗಳೇ
ಉಸಿರಾಗಿ ಕಳೆದಾಯ್ತು.
ಎಲ್ಲ ಹೆಣ್ಣು ಅಹಲ್ಯೆ ಎಂದೇ ಪರಿಭಾವಿಸಿ
ಅನರ್ಥಗೈಯುವ ಇಂದ್ರರಿರುವರು ಜಾಣೆ
ಸೀತೆಯಂತಿರಬೇಕು ನೀನು
ಎಂದಾಗಲೆಲ್ಲಾ ನಾನೆನ್ನುತ್ತಿದ್ದೆ
‘ನೀನು ರಾಮನಾದರೆ’
ಅಷ್ಟೇ ಪಲ್ಲಟಿಸಿಬಿಟ್ಟಿತು ಬದುಕು.
ಪರಿಪರಿಯಾದ
ಯಾವ ಪ್ರಲಾಪವೂ ಪ್ರಕೋಪವೂ ಇಲ್ಲದೇ.
ಈಗ ಪೇಟೆದಾರಿಯಲ್ಲಿ
ಕೈ ಕೈ ಹಿಡಿದು ನುಲಿವ
ಅವರು ಗೋಚರಿಸುವುದಿಲ್ಲ.
ಅದಕ್ಕೆಂದೆ ಗುತ್ತು ಬದಲಿಸಿ ಬೆಟ್ಟದ
ನೆತ್ತಿಯ ಮೇಲೆ ಕೂತೆ.
ಕನಸ ಕವನ ನೆಲನೆಲ್ಲಿಯ ಬಾಯಿಗಿಟ್ಟಿತು
ಸೋಂಕಿನ ಶೀತಕ್ಕೆ ರಾಮಬಾಣ
ಮನೆ ಕಿಬಳಿಯ ಬದಿಯಲ್ಲೆ
ಹುಟ್ಟಿದ ಇದಕ್ಕೆ ಅದೆಂಥಾ
ಇಸ್ರೂಪದ ಹೆಸರು- ನೆಲನೆಲ್ಲಿ
ಪೇಟೆದಾರಿಯಲ್ಲಿ ಸಿಗದ ಇದನ್ನು
ಹಿತ್ತಲು ಹುಡುಕಿಯೇ ತೆಗೆದದ್ದು
ಒಂದಿಷ್ಟು ನೀರು ಸೇರಿಸಿ ಕುದಿಸಿ ರಸ
ಬಸಿದು ಕುಡಿದಷ್ಟು ರಸವುಕ್ಕಿಸಿ
ಜಗವ ತೋರುವ ಕಣ್ಣಾದದ್ದು
*****