ಮಂಜಿನ ಮರೆಗೆ
ತಿಪ್ಪೆಯ ಒಳಗೆ
ಹೂವೊಂದು ಅರಳಿತ್ತು
ಮತ್ತನ ಮೈಯಿ
ಕೆಂಪನೆ ಬಾಯಿ
ಥರ ಥರ ನಡುಗಿತ್ತು
ಕಣ್ಣಲಿ ಕಂಬನಿ
ನುಣ್ಣನೆ ನಲ್ದನಿ
ನಸುಕನು ಹರಿದಿತ್ತು
ಯಾರದು ತಂದೆ?
ಯಾರದು ತಾಯಿ?
ಎಲ್ಲರ ಕೇಳಿತ್ತು
ನಾಯಿಯ ಬೊಗಳು
ಇರುವೆಯ ಸಾಲು
ಕಂದನ ಮುತ್ತಿತ್ತು
ಎಲ್ಲವ ದೇವರು
ಎಲ್ಲದು ಧರ್ಮವು?
ಚೀರಿ ಅತ್ತಿತ್ತು
ಕೂಸಿನ ಅಳಲು
ಮುಟ್ಟಲು ಮುಗಿಲು
ಜಾತ್ರೆಯು ನೆರೆದಿತ್ತು
ಬಂದರು, ಹೂದರು
ನಿಂದರು, ನೊಂದರು
ಜಗವದು ನಡೆದಿತ್ತು
ಕತ್ತಲು ಸುರಿಯಿತು
ಚಂದಿರ ಹೊರಳಿತು
ಜೀವವೂ ಸೊರಗಿತ್ತು
ಲೋಕವೆ ನೂಕಲು
ನಾಕವು ಸಲಹುದೆ?
ಜೋಗಿತಿ ಹಾಡಿತ್ತು.
*****