ಡಾಕ್ಟರಾ ನೀನೂ ಜೋಕುಮಾರಾ
ನಿನನಂಬಿ ನಾನೂ ಬಕಬಾರಾ ||ಪಲ್ಲ||
ನರಕದಾ ಕುಣಿಕಂಡೆ ಕುಣಿತುಂಬ ಹೆಣಕಂಡೆ
ಹೆಣದಾಗ ಡಾಕ್ಟರ್‍ನ ಮನೆಕಂಡೆ
ಇದ್ದೋವು ಸಾತ್ತಾವು ಸತ್ತೋವು ಎದ್ದಾವು
ಹೆಣದಾಗ ಡಾಕ್ಟರ್‍ನ ಹಣಕಂಡೆ ||೧||
ಗಮ್ಮೆಂದು ನಾರ್‍ಯಾವು ಪಡ್ಡೆಂದು ಒಡದಾವು
ಮ್ಯಾಲಿಂದು ಕೆಳಗೋ ಕೆಳಮ್ಯಾಗೊ
ಉಚ್ಚೀಯ ಹೊಂಡೋ ಹೇಸಿಗಿ ಬಂಡ್ಯೋ
ಅದರಾಗ ಡಾಕ್ಟರಾ ನಗಿಮಾರ್‍ಯೊ ||೨||
ನರಸವ್ವ ಸೋಗ್ಲಾಡಿ ಸರಸವ್ವ ಸುಬ್ಲಾಡಿ
ಬಂದೀದಿ ಬಾರೇ ನಗಿಮಾರೆ
ನೀನಕ್ರ ನಗಿಚಂದ ಗಿಣಿಗಡಕ ಹಣ್ಚಂದ
ನೀನಿಂದ್ರ ನೀರೇ ಕುಲನಾರೆ ||೩||
ಡಾಕ್ಟರ ಬಂದಾನು ಹೆಚ್ಚೆಚ್ಚಿ ಒಗದಾನು
ಕುಂಡಿಯ ಗಂಟೊ ಕೊಳೆಗಂಟೊ
ನರಸವ್ವ ಬಂದಾಳು ಕಿಲುಗಂಟು ಎಬ್ಯಾಳು
ಹುಳನೂರು ಗಂಟೊ ನೂರೆಂಟೊ ||೪||
ಖುಶಿಯಾಗಿ ಹಸನಾದೆ ನರಸೀಯ ಮದವ್ಯಾದೆ
ಡಾಕ್ಟರ್‍ನ ಬಿಲ್ಲೊ ಕೊಡಲಿಲ್ಲೋ
ನರಸೀಯ ಮನಕದ್ದೆ ಡಾಕ್ಟರ್‍ನ ನಾಗೆದ್ದೆ
ಹಾಸೀಗಿ ಬಿಟ್ಟೇದ್ದೆ ಹುಲಿಯಾದ್ಯೋ ||೫||
*****
ಡಾಕ್ಟರ = ಪರಮಾತ್ಮಾ
ನರಸವ್ವ = ಆಧ್ಯಾತ್ಮಿಕ ಆನಂದ
ಬಿಟ್ಟಿದ್ದ = ಭವರೋಗದಿಂದ ಪಾರಾದೆ