ಸಂಕುಚಿತ ಪ್ರವೃತ್ತಿಯ ಶಿಕ್ಷಕ ಅವನು. ಮಕ್ಕಳಿಗೆ ಪಾಠ ಬೋಧಿಸುವಾಗ ಮನುಷ್ಯನ ಸಣ್ಣತನವನ್ನು ಖಂಡಿಸುತ್ತಿದ್ದ. ವೈಶಾಲ್ಯತೆ ದಕ್ಕಿಸಿಕೊಳ್ಳಲು ಸಾಕ್ಷಿಪ್ರಜ್ಞೆಯಾಗುತ್ತಿದ್ದ. ಸಂದರ್ಭ ಸಿಕ್ಕಾಗೆಲ್ಲ ಪಾಠದ ಆಶಯವನ್ನು ವಿರೂಪಗೊಳಿಸಿ ವಿಷಂತರದಿಂದ ಕೆಳಸ್ತರದ ವಿದ್ಯಾರ್ಥಿಗಳನ್ನು ದಮನಿಸುವ ಮತ್ತು ಮೇಲುಸ್ತರದವರನ್ನು ವೈಭವೀಕರಿಸುವದರೊಂದಿಗೆ ಸ್ವಜನಪಕ್ಷಪಾತದಿಂದ ಹಾಲುಮನಸ್ಸಿನ ಮಕ್ಕಳ ನಡುವೆ ಗೋಡೆ ಎಬ್ಬಿಸುತ್ತಿದ್ದ. ನಿಂತ ನೀರಿನಂತಿದ್ದ ಅವನಿಗೆ ತನ್ನ ಕುಲಸ್ಥರೆಂದರೆ ಉತ್ಕಟ ಅಭಿಮಾನ, ಪ್ರೀತಿ, ತಮ್ಮ ಮೇಧಾವಿತನ ಹುಟ್ಟಿನಿಂದಲೇ ಬಂದದ್ದು. ತಮ್ಮ ಚತುರಮತಿಯಿಂದಲೇ ಈ ಭೂಮಿ ಉಸಿರಾಡುವುದೆಂದು ಅವರು ಮತ್ತೆ ಮತ್ತೆ ಮಾತಾಡಿ ಸಮರ್ಥಿಸಿಕೊಳ್ಳುವನು.
ದಲಿತ ಹುಡುಗನೊಬ್ಬ ತನ್ನ ಅಗಾಧ ಪ್ರತಿಭೆಯಿಂದ ಅವರ ಕಣ್ಣು ಕುಕ್ಕಿದ್ದ. ಶಿಕ್ಷಕ ತೀವ್ರ ತಳಮಳ ಅನುಭವಿಸುತ್ತಿದ್ದ. ಆ ಹುಡುಗ ಕಳೆದ ಜನ್ಮದಲ್ಲಿ ತಮ್ಮ ಕುಲಸ್ಥನೆ ಆಗಿರಬೇಕು ಅಥವಾ ಹುಟ್ಟುವಾಗ ಅಕಸ್ಮಿಕವಾಗಿ ಏರು ಪೇರಾಗಿರಬಹುದು ಎಂಬ ಅನುಮಾನದಿಂದ ಅವನನ್ನು ಗಮನಿಸುತ್ತಿದ್ದ. ಅವನು ತನ್ನನ್ನು ಕೀಳರಮೆಯಿಂದ ಕಾಣುತ್ತಿರುವ ಸೂಕ್ಷ್ಮವನ್ನು ಬದಿಗಿಟ್ಟು ಗುರು ಎಂಬ ಪೂಜ್ಯ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಿದ್ದ ಹುಡುಗ ಗೌರವದಿಂದ ನಮಸ್ಕರಿಸುತ್ತಿದ್ದ.
ಹುಡುಗನಿಗೆ ಊರ್ಧ್ವಮುಖಿಯ ತುಡಿತ. ಅದರ ಫಲವಂತಿಕೆಗಾಗಿ ಹಗಲಿರುಳು ಶ್ರಮಿಸುವನು. ಆದರೆ ಶಿಕ್ಷಕನ ಕ್ಷುದ್ರ ಮನಸ್ಸು ಪ್ರತಿಯೊಂದು ಪರೀಕ್ಷಗಳಲ್ಲಿ ಹುಡುಗನ ಪ್ರತಿಭೆಗೆ ಕಾಲ್ತೊಡಕಾಗುತ್ತಲೆ ಇತ್ತು. “ನೀನು ನೆಲದ ಮೇಲೆ ತೆವಳುವ ಬಸವನ ಹುಳದಂತೆ ಹುಡುಗ, ನಿನಗೆ ಗರಿಗಳು ಮೂಡುವುದಿಲ್ಲ ಆಕಾಶದಲ್ಲಿ ಹಾರಾಡುವ ಕನಸು ಕಾಣಬೇಡ” ಎಂದು ಪದೆಪದೇ ಅವನನ್ನು ಅವಮಾನಿಸುವನು.
ಕೊನೆಗೂ ಆ ಶಿಕ್ಷಕನ ನೀಚ ಪರಿಧಿಯಿಂದ ಹುಡುಗ ಪಾರಾದ. ಶಿಕ್ಷಕನೂ ಆ ಹುಡುಗನನ್ನು ಮರೆತ. ಆ ಶಿಕ್ಷಕ ಮಾತುಗಳನ್ನು ಸವಾಲಾಗಿ ಸ್ವೀಕರಿಸಿದ ಹುಡುಗ ಕಷ್ಟಪಟ್ಟು ಓದಿದ. ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾದ. ಅಷ್ಟು ಹೊತ್ತಿಗೆ ಆ ಶಿಕ್ಷಕ ಬೇರೊಂದು ಶಾಲೆಯ ಮುಖ್ಯಾಧ್ಯಾಪಕನಾಗಿ ನಿವೃತ್ತಿಯ ಅಂಚು ತಲುಪಿದ್ದ.
ಸಾಹೇಬರು ಅಚಾನಕ್ಕಾಗಿ ಶಾಲೆಗೆ ಭೇಟಿಕೊಟ್ಟರು. ಅಲ್ಲಿನ ಅಸ್ತವ್ಯಸ್ತ ಪರಿಸರವನ್ನು, ಹುಡುಗರ ಅಶಿಸ್ತನ್ನು, ತರಗತಿಗಳ ದುರ್ಭಾಗ್ಯವನ್ನು, ಶಿಕ್ಷಕರ ಭಂಡತನವನ್ನು ಗಮನಿಸಿ ಮುಖ್ಯಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡರು. ಅವರು ಸಾಹೇಬರೆದುರಿಗೆ ಕೈ ಮುಗಿದುಕೊಂಡು ನಿಂತಿದ್ದರು. “ನೀವು ನನಗೆ ಕಲಿಸಿದ ಗುರುಳು. ನನಗೆ ಕೈ ಮುಗಿಯಬಾರದು” ಎಂದು ಅವರನ್ನು ಕುರ್ಚಿಯ ಮೇಲೆ ಕುಳ್ಳಿರಿಸಿ ತಮ್ಮ ಪರಿಚಯ ಮಾಡಿಕೊಟ್ಟಿದ್ದರು ಸಾಹೇಬರು.
ಅವರನ್ನು ದಿಟ್ಟಿಸಿ ನೋಡುತ್ತಿದ್ದಂತೆ ಶಿಕ್ಷಕನಿಗೆ ಹಸಿಹಸಿ ನೆನಪು. ಅವನ ಪ್ರತಿಭೆಯನ್ನು ಕುಗ್ಗಿಸುತ್ತಿದ್ದರ ನೆನಪು. “ನಿಮಗೆ ಋಣಿಯಾಗಿರುವೆ ಗುರುಗಳೆ. ನಿಮ್ಮ ಪುಣ್ಯದಿಂದ ಈ ಬಸವನ ಹುಳುವಿಗೆ ಗರಿ ಮೂಡಿದವು” ಎಂದರು ಸಾಹೇಬರು. ಶಿಕ್ಷಕನ ತಲೆ ತಗ್ಗಿತು.
*****