ಆನಂದಪ್ಪ ಆ ಶಹರದ ಹೃದಯಭಾಗದಲ್ಲಿ ಮನೆ ಕಟ್ಟಿಸಲು ಶುರು ಮಾಡಿದ. ಅಲ್ಲಿನದು ಬಹು ಮೌಲ್ಯದ ಬಯಲು ಜಾಗೆ. ಅದು ಅವನಿಗೆ ಬಳುವಳಿಯಾಗಿ ಸಿಕ್ಕಿತ್ತು.
ಆನಂದಪ್ಪ ಒಬ್ಬ ಇಂಜಿನಿಯರ್. ಸರಕಾರಿ ಹುದ್ದೆಯಲ್ಲಿದ್ದ. ತಾನು ಕಟ್ಟಿಸುವ ಮನೆ ಭೂಮಿಯ ಮೇಲಿನ ಸ್ವರ್ಗಧಾಮದಂತಿರಬೇಕೆಂದು ಕನಸು ಕಂಡಿದ್ದ. ಅವನ ಕೈ ಕೆಳಗಿನ ನಾಲ್ಕಾರು ಜನ ಇಂಜಿನಿಯರ್‌ಗಳು ಆ ಕನಸಿನ ಸಾಕಾರಕ್ಕಾಗಿ ಸತತವಾಗಿ ಪರಿಶ್ರಮಿಸತೊಡಗಿದ್ದರು.
ಕೆಲವು ಕಂಟ್ರಾಕ್ಟರರು ಆನಂದಪ್ಪ ಹೇಳದಿದ್ದರೂ ಮನೆಯ ಕಟ್ಟಡಕ್ಕೆ ಬೇಕಾಗುವಷ್ಟು ಕಬ್ಬಿಣ, ಸಿಮೆಂಟು, ಕಲ್ಲು, ಉಸುಕು, ಕಿಟಕಿ, ಬಾಗಿಲು ಪೂರೈಸಿದ್ದರು. ಗೌಂಡಿಗಳು ತಮ್ಮ ಶ್ರಮದ ಬೆವರನ್ನು ಕಟ್ಟಡಕ್ಕೆ ಹನಿಸುತ್ತ ಬಹಳ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದರು.
ಹಣ ಎಷ್ಟು ಖರ್ಚಾದರೂ ಚಿಂತೆಯಿಲ್ಲ. ಮನೆ ಮಾತ್ರ ಸುಂದರವಾಗಿರಬೇಕೆಂದು ಇಂಜಿನಿಯರ್ ಪತ್ನಿ ಪದೆ ಪದೆ ಹೇಳುತ್ತಿದ್ದಳು. ಅವಳ ಮನಸ್ಸಿಗೆ ಬೇಸರವೆನಿಸಿದರೆ ಕಟ್ಟಡವನ್ನು ಕೆಡವಿ ಹಾಕಲಾಗುತ್ತಿತ್ತು. ಇಂಜಿನಿಯರಿಂದ ಶುಕ್ರದೆಸೆ ಅನುಭವಿಸಿದ್ದ ಕಾಂಟ್ರಾಕ್ಟರರು ಒಂದು ಚಕಾರ ಶಬ್ದ ಆಡದೇ ಅವಳ ನಿರ್ದೇಶನಗಳನ್ನು ಪಾಲಿಸುತ್ತಿದ್ದರು.
ಕೊನಗೂ ಮನೆ ತಯಾರಾಯಿತು. ಎಂಥ ಅಪರೂಪದ ಮನೆ ಅದು!
ಒಳ-ಹೊರ ಗೋಡೆಗಳಿಗೆ ಸಂಗಮವರಿ ಕಲ್ಲುಗಳನ್ನು ಹೊರಿಸಲಾಗಿತ್ತು. ನೆಲದ ಹಾಸುಗಲ್ಲುಗಳಲ್ಲಿ ನಡೆದಾಡುವವರ ಪ್ರತಿಬಿಂಬ ಕಾಣಿಸುತ್ತಿತು. ತೇಗ-ಗಂಧದ ಕಿಟಕಿ, ಬಾಗಿಲುಗಳು ಹೊಸ ವಿನ್ಯಾಸದೊಂದಿಗೆ ಮನಮೋಹಕವಾಗಿದ್ದವು. ಮನೆ ನೋಡಿದವರೆಲ್ಲ ಬೆರಗುಗೊಂಡು ಅದ್ಭುತ! ಎಂದು ಬಣ್ಣಿಸುವರು.
ಅಂತೂ ಆ ಮನೆ ಗೃಹ ಪ್ರವೇಶಕ್ಕೆ ಸಿದ್ಧಗೊಂಡಿತು.
ಇಂಜಿನಿಯರ್ ಪತ್ನಿ ಮೂಹೂರ್ತ ಗೊತ್ತುಪಡಿಸಲು ಕಾರು ಹತ್ತಿ ಜೋಯಿಸರ ಮನೆಗೆ ಹೋದಳು. ತಿರುಗಿ ಬರುವಾಗ ರಸ್ತೆಯ ತಿರುವಿನಲ್ಲಿ ಕಾರು ಅಪಘಾತಕ್ಕೀಡಾಗಿ ಆಕೆ ಸ್ಥಳದಲ್ಲಿಯೇ ಅಸುನೀಗಿದ್ದಳು. ಹೆಂಡತಿಯ ಸಾವಿನ ಸುದ್ದಿ ಕೇಳಿದ್ದೆ ತಡ ಇಂಜಿನಿಯರ್ ಸಾಹೇಬರು ಹಠಾತ್ತನೆ ಹೃದಯಾಘಾತಕ್ಕೆ ಕುಸಿದು ಬಿದ್ದರು.
ಆ ಚೆಂದದ ಮನೆಯಲ್ಲಿ ಬದುಕುವ ತೀವ್ರ ತುಡಿತವಿದ್ದ ಗಂಡ-ಹೆಂಡತಿ ತಣ್ಣಗೆ ಸ್ಮಶಾನದ ಮಣ್ಣಲ್ಲಿ ಮಲಗಿದರು. ಮನೆಯನ್ನು ಹೊಗಳಿದ ಜನರೆ “ಇದು ಗೃಹದೋಷದ ಪ್ರಭಾವ!” ಎಂದರು.
*****