ಅದೊಂದು ಪುಟ್ಟ ಗ್ರಾಮ. ಅಲ್ಲಿನ ತರುಣ ಸಂಘವರು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸನ್ಮಾನಿತನಾದವನು ಹೆಸರಾಂತ ಕವಿ. ಅವನೂ ಅದೇ ಹಳ್ಳಿಯವನು. ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರಕಿಸಿಕೊಂಡಿದ್ದರಿಂದ ಊರ ಜನ ಪ್ರೀತಿ, ಅಭಿಮಾನದಿಂದ ಕವಿಯನ್ನು ಬರಮಾಡಿಕೊಂಡಿದ್ದರು. ಮತ್ತು ಸಂಭ್ರಮದಿಂದ ಕವಿಗೆ ಶಾಲು ಹೊದಿಸಿ, ಹಾರ ಹಾಕಿ, ಅಮೂಲ್ಯ ಕಾಣಿಕೆಯೊಂದಿಗೆ ಸನ್ಮಾನಿಸಿದ್ದರು.
ಸಮಾರಂಭದಲ್ಲಿ ಆರಂಭದಿಂದ ಕೊನೆಯತನಕ ಕವಿಯ ಸಾಹಿತ್ಯ ಕೃಷಿಯ ಕುರಿತು ಪ್ರತಿಯೊಬ್ಬರು ಮಾತನಾಡಿದರು. ಘನವಾದ ಶಬ್ದಗಳಿಂದ ಕವಿಯೂ ತನ್ನ ಕಾವ್ಯಕೃಷಿ ಕುರಿತು ಮಾತನಾಡಿದ. ಅವನು ವೇದಿಕೆ ಇಳಿದು ಬರುತ್ತಿದ್ದಂತೆ ಕಾತರದಿಂದ ಹತ್ತಿರ ಬಂದ ರೈತನೊಬ್ಬ “ಏ, ಕವಿ ನಂದು ಗುರ್ತು ಹತ್ತೇನೊ?” ಎಂದ. ಅವನ ಧ್ವನಿಯಲ್ಲಿ ಹುಂಬತನವಿತ್ತು. ಅದನ್ನು ಯಾವಾಗಲೋ ಕೇಳಿದ, ಅವನನ್ನು ಎಲ್ಲೋ ನೋಡಿದ ನೆನಪು. ಒಮ್ಮೆ ದಿಟ್ಟಿಸಿ ನೋಡಿ “ನೀವು ಯಾರು?” ಎಂದು ಘನಗಂಭೀರವಾಗಿ ಕೇಳಿದ ಕವಿ.
“ಈಗ ನೀ ದೊಡ್ಡ ಕವಿಯಾಗಿಯಪ್ಪ. ನನ್ನಂಥ ಹಳ್ಳಿಯಾಂವ ನಿನ್ಗೆ ನೆಪ್ಪ ಹ್ಯಾಂಗಾಗಬೇಕು. ನಾ ನಿನ್ನ ಕೂಡ ಗೌಂಟಿ ಸಾಲ್ಯಾಗ ಕಲ್ತಾಂವ” ಎಂದ ರೈತನನ್ನು ಒಂದು ಕ್ಷಣ ದಿಟ್ಟಿಸಿದವನೇ ಕವಿ “ನೀನು ಚೆನಮಲ್ಲು” ಎಂದ. “ಹೌದೋ ವಾಮನ” ಎಂದು ಹಿಗ್ಗಿಕೊಂಡ ರೈತ.
“ಹೌದೋ, ನಿನ್ನ ಮಂಜಾಳ ಹೋಗ್ಲಿ” ಎಂದು ಕವಿಯ ಬೆನ್ನಿಗೆ ಲಘುವಾಗಿ ಗುದ್ದಿ ನಕ್ಕ ರೈತ. “ನಿನ್ನೋಡಿ ಬಹಳ ದಿನಾ ಆತು” ಎನ್ನುತ್ತ ರೈತನೊಂದಿಗೆ ಹೆಜ್ಜೆ ಹಾಕಿದ ಕವಿ. ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕಿಕೊಳ್ಳುತ್ತ ಹಾದಿ ತುಳಿಯುತ್ತಿದ್ದಂತೆ ರೈತ ಕವಿಯನ್ನು ಕೇಳಿದ.
“ನಿಮ್ಮ ಜಮೀನಿನ್ಯಾಗ ಏನೇನು ಬೆಳೀತಿಯಪಾ ನೀನು?”
“ನಮ್ದು ಜಮೀನಽಽ ಇಲ್ಲ.”
“ಮತ್ತ ಕೃಷಿ ಮಾಡ್ತೀನಿ ಅಂತ ಭಾಸನದಾಗ ಹೇಳ್ದಿ. ನಿನ್ನ ಬಗ್ಗೆ ಮಾತಾಡಿದವರೂ ನಿನ್ನ ಕೃಷಿ ಬಗ್ಗೆ ಹೇಳಿದ್ರು” ಸೋಜಿಗ ವ್ಯಕ್ತಪಡಿಸಿದ ರೈತ.
“ನಂದು ಸಾಹಿತ್ಯ ಕೃಷಿ!” ಎಂದ ಕವಿ.
“ಅಂದ್ರ ಅದಕ್ಕ ಯಾವ ಬೀಜ ಬಿತ್ತಿ, ಯಾವ ಗೊಬ್ಬರ ಹಾಕ್ತಿ?” ಕುತೂಹಲವಿತ್ತು ರೈತನ ದನಿಯಲ್ಲಿ.
“ಬೀಜ ಇಲ್ಲ, ಗೊಬ್ಬರ ಇಲ್ಲ, ನೀರೂ ಇಲ್ಲದ ಕೃಷಿ ನಂದು”
“ಅದೆಂತ ಕೃಷಿನೋ ಮಾರಾಯ?”
“ಕಾವ್ಯ, ಕಥಿ, ಕಾದಂಬರಿ, ನಾಟಕ, ವಿಮರ್ಶೆ ಬರೀತೀನಿ.”
“ಅದರಿಂದ ನಿನಗೇನು ಲಾಭ?”
“ಹೆಸರು, ಕೀರ್ತಿ, ಪ್ರತಿಷ್ಠೆ, ಗೌರವ, ಸನ್ಮಾನ.”
“ಮತ್ತೆ ನಿನ್ನ ಸಂಸಾರಕ ಏನು ಮಾಡ್ತಿ?”
“ನಾನು ಕಾಲೇಜಿನ್ಯಾಗ ರೀಡರ್ ಇದ್ದೀನಿ.”
“ಅಂದ್ರ ದೊಡ್ಡ ಪಗಾರನಽಽ ಇರಬೇಕಲ್ಲ.”
“ಹೌದು.”
“ಬಂಗ್ಲೇನೂ ಕಟ್ಟಿಸಿರಬೇಕಲ್ಲ.”
“ಹೂಂ.”
“ಬಂಗ್ಲೆದಾಗ ಕುಂತು ಕಥಿ, ಕವನ ಬರೀತಿ ಅನ್ನು.”
“ಹೂಂ.”
“ಅದರಿಂದ ಉಪಯೋಗವೇನು?”
“ಜನರ ಮನಸ್ಸಿಗೆ ಆನಂದ, ಹಿತ.”
ಹೊಲ, ಬೀಜ, ಬೆವರು, ಫಲದ ತನ್ನ ಕೃಷಿಯನ್ನು ರೈತ ಕವಿ ಕೃಷಿಯೊಂದಿಗೆ ಸಮೀಕರಿಸಿಕೊಂಡು ಯೋಚಿಸಿದ. ಕೊನೆಗೆ ಕೇಳಿದ “ನಿನ್ನ ಕೃಷಿಯಿಂದ ಹಸಿದ ಹೊಟ್ಟೆಗೆ, ಕಷ್ಟದ ಜೀವನಕ್ಕೆ ಎಂತ ಉಪಯೋಗ ಆಗತ್ತೊ ವಾಮನ?”
ಕವಿ ದಿಙ್ಮೂಡನಾದ.
*******