ನನ್ನೂರ ಬಾಲೆ
ರಸ ಕಾವ್ಯ ನವ್ವಾಲೆ
ಸಿಹಿ ನೀರ ತರಲೆಂದು ಅಂಗಳಕ ಇಳಿದಳಂದರೆ…
ಓಣಿಯ ಗಂಡು ಹೆಣ್ಣು ಒಟ್ಟಾಗಿ
ತೇಜಃ ಪುಂಜವು ಕಂಡಂತೆ
ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತ ನಿಲ್ಲುವರು.
ಅವಳೋ… ಕಂಡವರ ಕಣ್ಣುಗಳು ಕೆಟ್ಟದಿದು ಅನ್ನದ ಹಾಗೆ
ಸೂಕ್ಷ್ಮವಾಗಿ ಅತ್ತಿತ್ತ ನೋಡುತ್ತ
ಏನನ್ನೋ ಹುಡುಕುತ್ತ
ತೇಲುತ್ತ ನಡೆಯುವಳು ಚಾಣಾಕ್ಷಿ
ಒಳಗಿರುವ ಜೀವ
ಹೊರಗೆಲ್ಲೂ ಸುಳಿಯದಿರಲು
ಒಂದೆಳೆ ಕುಗ್ಗುವಳು ತರಳೆ
ಎಳೆ ಬಾಳೆ ಸುಳಿಗೆ ಬೆಂಕಿ ಝಳವು ಸೋಕಿದಂತೆ.
ಯಾಕಿಲ್ಲ ಯಾಕಿಲ್ಲ ವೆನುತಲಿ
ತನ್ನನ್ನು ತಾನೇ ಸಂಭಾಳಿಸಿ ಕೊಳುತಲಿ
ಸೇದೊ ಬಾವಿಯ ಸಾರುವಳು ಅಭಿಸಾರಿಕೆ.
ಮನಸಿಲ್ಲದ ಮನಸಿನಲಿ
ಆಗಲೂ ಅವಲೋಕನ ಮುಂದುವರಿಸಿ
ಕಂಠಕ್ಕೆ ಸರಕುಣಿಕೆ ಬಿಗಿವಳು
ಬಾವಿಯಲಿ ಇಳಿಬಿಟ್ಟು
ಗುಳು ಗುಳು ತುಂಬಿಸುವಳು ಕೊಡಗಳ.
ಕಲ್ಲು ಕಟ್ಟೆಯ ಪದ್ದಿಗೆ ತುಸುವೆ ಎಡ ಪಾದವ ತೂರಿಸಿ
ಹಾರುತ್ತ, ಹಾರುತ್ತ ಸೆಳೆಯುವಳು ಮೇಲೆ
ನೋಡುವ ಕಣ್ಣಿಗೆ ಹಬ್ಬವನು ತರುವಂತ ಲಾಸ್ಯದಲಿ
ಜಾನಪದ ಲೋಕದ ಐಸಿರಿ; ಕನ್ನಡ ಕುವರಿ.
ತುಂಬಿದ ಕೊಡದಂತ ಹುಡುಗಿ.
ತಲೆಯ ಮೇಲೊಂದು ಎಡದ ನಡುವಲ್ಲೊಂದು ಕೊಡವ
ಬಾಳೆ ಬಾಹುಗಳಲ್ಲಿ ಅವುಕಿ ಹಿಡಿದು
ಭಾರವನು ತೋಲಿಸುತ
ಹೆಜ್ಜೆಯನು ಹಾಕುವಳು ತ್ರಿಭಂಗಿ ಮುದ್ರೆಯಲಿ
ನನ್ನೂರ ಬೆಡಗಿನ ಬಿಡದಿ.
ಸಾಲದು ಎಂಬಂತೆ
ಹುಡುಕಿ ಹುಡುಕಿ ಮುತ್ತಿಟ್ಟ ಆ ತುಂಟ ಸೂರ್ಯ
ಮೂಗುತಿ ಮೇಲೆ ತುಳುಕಿದ ಹನಿಯೊಂದ
ಸುರ ಬಿಲ್ಲು ಮೂಡಿದವು.
ಅಂದಕ್ಕೆ ಮಕುಟವಿಟ್ಟಂತಾಯ್ತು.
ಮರೆಯಲ್ಲಿ ನಿಂತು
ಬಿಡದೆ ಎಲ್ಲವನು ಆಸ್ವಾದ ಮಾಡುತ್ತಿದ್ದ ಪೋರ
ಅಂತರಂಗದ ಚೋರ
ಇದುವೆ ಸಮಯವೆಂದ
ಛಂಗನೆ ಹೊರ ಜಿಗಿದು ಎದುರಿಗೆ ನಡೆದು ಬಂದ.
ಫಕ್ಕನೆ ಮಿನುಗಿದವು ಕಣ್ಣು
ಎದೆಯ ಸೆರಗು ಬೇರೆ ಸರಿದಿತ್ತು
ನಾಚಿ ರಂಗೇರಿ ಮುಖದಿರುವೆ
ತಾರಕದಲಿ ಮಿಡಿಯಿತು ಮಿದು ಹೃದಯದ ವೀಣೆ
*****