ಏಕೆ ಹುಡುಕಲಿ ನಿನ್ನ?
ಜಗಜ್ಜಾಹೀರವಾಗಿರಲು ನೀನು|
ಏಕೆ ಕಾಣಿಸುವುದಿಲ್ಲವೆನ್ನಲಿ
ಸರ್ವವ್ಯಾಪಿಯಾಗಿರುವ ನಿನ್ನ|
ಅಣುರೇಣು ತೃಣಕಾಷ್ಟದಲಿ, ಎಲ್ಲಂದರಲ್ಲಿ
ಸರ್ವಾಂತರ್ಯಾಮಿಯಾದ ನಿನ್ನ||
ನಿನ್ನ ಒಂದು ಈ ಭೂಅರಮನೆಯಲಿ
ಗಾಳಿ, ನೀರು, ಬೆಳಕು
ಶಕ್ತಿಯಾಗಿ ನಿರಂತರ ಚಲಿಸುತಿರಲು|
ಎಂದೋ ಅತಿಥಿಯಾಗಿ
ಬಂದು ಹೋಗುವ ನಾನು
ನಿನ್ನ ಅರಿಯಲು ಸಾಧ್ಯವೇ||
ಅನಂತ ಶತಮಾನಗಳ ಹಿಂದೆ
ನೀ ಸೃಷ್ಟಿಸಿರುವ ನಿನ್ನ ಕುರುಹುಗಳ
ಸರಿಯಾಗಿ ಅರಿಯದಲೆ
ನಿನ್ನ ಅಲ್ಲಗಳೆವುದು ನ್ಯಾಯವೇ?
ನೀನಿತ್ತ ಮತಿಯ ಉಪಯೋಗಿಸಿ
ನಿನ್ನ ಪ್ರಶ್ನೆಮಾಡುವುದು ಸರಿಯೇ||
ಕುರುಡನೊಬ್ಬ ಆನೆಯ ಕಾಲ ಮುಟ್ಟಿ
ಅದು ಕಂಬದಂತಿದೆ ಎಂದಂತೆ
ಪರಿಕಲ್ಪಿಸುವುದು ಸರಿಯೇ?
ನಿನ್ನನರಿಲುಬೇಕು ಅಂತರಂಗದ ಕಣ್ಣು,
ಸತ್ಯವನರಿಯುವ ಕಣ್ಣು||
ಚಂದ್ರ, ಮಂಗಳನ ಮೇಲೆ ಕಾಲಿರುಸಿದಕೆ|
ತಂತ್ರಜ್ಞಾನದಿ ಹಕ್ಕಿಯಂದದಿ
ಹಾರಾಡುವುದ, ಪ್ರಾಣಿಯಂತೆ ನೀರಲಿ
ಚಲಿಸುವುದ ಕಲಿತಿದಕೆ,
ಅಂತರಿಕ್ಷದಲಿ ಸಂಚರಿಸುವುದ
ಅರಿತಿರುವುದಕೆ
ದೇವರಿಲ್ಲವೆಂಬುದು ತರವೇ?||
ಕೋಟ್ಯಾನು ಕೋಟಿ
ಜೀವ ಜಂಗುಳಿಯ ಸೃಷ್ಟಿಸಿ
ಅನ್ನಾದಿಗಳನಿತ್ತು ಸಲಹುವ
ಆ ದೈವವ ಅಪಮಾನಿಸುವುದು
ನ್ಯಾಯವೇ, ಧರ್ಮವೇ ? ||
ಬೇಡ, ಹೆತ್ತತಾಯಿಯನೇ
ಶಂಕಿಸಿಸುವುದು ದೂಷಿಸುವುದು|
ತಾಯಿ ಎದೆಹಾಲು ಕುಡಿದು
ಬೆಳೆದಾದ ಮೇಲೆ,
ಅದು ನಿನ್ನೆಯದೊ ಇಂದಿನದೊ
ಎಂಬ ರಾಜಕೀಯತೆ||
ನೀ ಚಲಿಸುತ್ತಿರುವುದು
ನಿನ್ನ ಶಕ್ತಿಯಿಂದ ಎನ್ನುವುದಾದರೆ!
ಈ ಭೂಮಿ, ಈ ಬ್ರಹ್ಮಾಂಡ
ಸಹಾಸ್ರಾರು ವರುಷ ನಿರಂತರ
ಹೀಗೆ ಸಾಗುತ್ತಿರುವುದು
ಆ ದೈವದಶಕ್ತಿ ಇರುವುದರಿಂದಲೇ|
ಅನ್ಯತಾ ಕಾಲಹರಣವ ಮಾಡದಲೆ
ಅನ್ಯರ ಮಾರ್ಗದಲಿ ತೊಡಕಾಗದೆ
ನೀ ಬಂದ ಕಾರ್ಯ ಮುಗಿಸುವುದೇ ಲೇಸು||
*****