ಚತುಷ್ಪದಿ
ಸಾಧ್ಯವಿಲ್ಲವು ಪರೀಕ್ಷೆಯೊಳನಗೆ ಜಯವು; |
ವಿದ್ಯಾಪರೀಕ್ಷಕರಿಗಿಲ್ಲವೈ ದಯವು||
ಆರು ವರ್ಷಗಳಿಂದ ಪೋಗುವೆನು ನಾನು; |
ದೂರ ಗುಡ್ಡಕೆ ಬರಿದೆ ಮಣ್ಣ ತುಂಬಿದೆನು. ||
ತೋರಲಿಲ್ಲವು ಪರೀಕ್ಷೆಯೊಳು ಜಯವಿನ್ನು |
ನೀರೊಳಗೆ ಹೋಮ ಗೈದಂತದುದೇನು? ||೧||
ನೊಸಲ ಪೊರೆಯಾಯ್ತು ಪಾಠದ ಭಾರ ಚಿಂತೆ, |
ಹಸಿವು ನೀರಡಿಕೆಯಿರದಾ ವೊಂಟೆಯಂತೆ, ||
ಉಸುಬೆಂಬ ಜೀವಕಾಲದಿ ನಡೆದು ಮುಂತೆ, |
ಬಸವಳಿದು ಬರಿದೆ ಸೇರ್ದೆನು ಪರಿಕೆ (೧) ಸಂತೆ. ||೨||
ಆಟಗಳ ಬರಿದೆ ನಾನಾಡದೇ ಬಿಟ್ಟು, |
ಪಾಟದಲಿ ಬಯಲಾಗಿ ಪೂರ್ಣ ಮನವಿಟ್ಟು, ||
ಮೂಟೆ ಹೊರುವಾ ಎತ್ತಿನೊಲ್ ನಿದ್ದೆಗೆಟ್ಟು, |
ಓಟವೋಡಿದೆ. ನೋವ್ಲಿದ್ ಕಣ್ಣುಕಟ್ಟು! ||೩||
ಹಲವು ಪುಸ್ತಕಗಳನ್ನು ಪರರೊಡನೆ ಬೇಡಿ, |
ಕೆಲವನ್ನು ಕೊಂಡೆನೈ ಹಣವನು ಬಿಸಾಡಿ, ||
ಕಲಿತೆನಾನೆಲ್ಲವನು ಪೂರ್ಣ ಮನಮಾಡಿ, |
ಗೆಲಲಿಲ್ಲವಿದು ಪರೀಕ್ಷೆಯ ಮಂತ್ರಮೋಡಿ! ||೪||
ತಂದೆ ಮನೆಯನ್ನು ಬಿಟ್ಟು, ಪರರ ಕೂಳುಂಡು, |
ಚೆಂದದಾ ಸತಿಯ ನೋಡದೆ ಸಾಸಗೊಂಡು, ||
ಬಂದು ಕಲಿತುದುದೆಲ್ಲ ಇಂಗ್ಲೀಷು ಬಂಡು |
ಸಂದ ಸಂಬಳವು ಸರಕಾರಕ್ಕೆ ದಂಡು! (೨) ||೫||
ನೆನೆಯದಿರ್ದೆನು ಸ್ನಾನಜಪಯೋಗವೆಲ್ಲ; |
ಮನೆಯ ಹಬ್ಬವ ಬಿಟ್ಟರೂ ಸಾಗಲಿಲ್ಲ; ||
ಅನುಜನಿಗೆ ಮದುವೆಯಾಗಲು ಪೋಗಲಿಲ್ಲ; |
ವನಿತೆ ಬಳೆದಾಗ ಸುಖದನುರಾಗವಿಲ್ಲ. ||೬||
ಮರುಗುವನು ಗುರು ನಾನು ಬಹುಮೂರ್ಖನೆಂದು, |
ಹುರುಳಿಲ್ಲ (೩) ವೆನುತ ಹೀನಿಪರು ಜನರಿಂದು. ||
ಬರಿದೆ ಹಣ ತಿಂದೆನೆಂದಾ ತಂದೆ ನೊಂದು, |
ಜರೆಯುವನು, ಜಾರುವುದು ಸ್ತ್ರೀಪ್ರೇಮಬಿಂದು. ||೭||
೧ ಪರೀಕ್ಷೆ ಎಂಬ ಸಂತೆ
೨ ಜುರುಮಾನೆ
೩ ಸತ್ವ
*****