ಮಹಾ ಅಂದರೆ ಮನುಷ್ಯ ಎಷ್ಟುಕಾಲ ಬದುಕುತ್ತಾನೆ?
ಸಾವಿರ ದಿನವೋ ಒಂದು ದಿನವೋ?
ಒಂದು ವಾರವೋ ಒಂದಷ್ಟು ಶತಮಾನವೋ?
ಸಾಯುವುದರಲ್ಲೆಷ್ಟು ಕಾಲ ಕಳೆಯುತ್ತಾನೆ?
‘ಅನಂತ ಕಾಲ’ ಅಂದರೆ ಎಷ್ಟುಕಾಲ?
ಈ ಯೋಚನೆಗಳಲ್ಲಿ ಮುಳುಗಿ
ಉತ್ತರ ಹುಡುಕಲು ಹೊರಟೆ.
ಹೋಗಿ ಮಹಾ ಗುರುಗಳನ್ನು ಕಂಡೆ.
ಅವರ ಪೂಜೆ ಆಚಾರಗಳೆಲ್ಲ ಮುಗಿಯಲೆಂದು ಕಾದೆ.
ಎಲ್ಲ ಮುಗಿಸಿ ದೇವರನ್ನೋ ದೆವ್ವವನ್ನೋ
ಕಾಣಲು ಹೊರಟರು ಅವರೆಲ್ಲ.
ನನ್ನ ಪ್ರಶ್ನೆ ಕೇಳಿ ಬೇಸತ್ತರು.
ಅವರಿಗೆ ತಿಳಿದದ್ದು ತೀರ ಸ್ವಲ್ಪ.
ಅವರು ಎಷ್ಟಂದರೂ ಮಠದ ಉಸ್ತುವಾರಿ ಅಧಿಕಾರಿಗಳು ತಾನೆ?
ಡಾಕ್ಟರುಗಳು ಕನ್ಸಲ್ಟೇಶನ್ನಿನ ನಡುವೆ ಬಿಡುವು ಮಾಡಿಕೊಂಡು
ನನ್ನ ಕೂರಿಸಿ ಮಾತಾಡಿದರು.
ಕೈಯಲ್ಲಿ ಕತ್ತರಿ, ಚೂರಿ;
ಮೈ ತುಂಬ ಔರೋಮೈಸಿನ್ ವಾಸನೆ.
ದಿನಕ್ಕಿಂತ ಮರುದಿನ ಹೆಚ್ಚು ಬ್ಯುಸಿ.
ಅವರ ಮಾತಿನಿಂದ ತಿಳಿದದ್ದು ಇಷ್ಟು;
ಮೈಕ್ರೋಬುಗಳ ಸಾವು ಮುಖ್ಯವಲ್ಲ…
ದಿನವೂ ಸಹಸ್ರಾರು ಸಾಯುತ್ತವೆ…
ಬದುಕಿ ಉಳಿದವು ವಿಕೃತಿಯ ಲಕ್ಷಣ ತೋರುತ್ತವಲ್ಲ ಅದೇ ಸಮಸ್ಯೆ.
ಭಯವಾಗಿ ಹೆಣ ಸುಡುವಲ್ಲಿಗೆ ಹೋದೆ.
ನದಿಯ ಪಕ್ಕದಲ್ಲಿ ಸುಡುತ್ತಾರೆ,
ಬಣ್ಣ ಬಳಿದ ಹೆಣಗಳು,
ಪುಟ್ಟ ಶರೀರಗಳು,
ಶಾಪದ ಪ್ರಭಾವಳಿ ಹೊತ್ತ
ಅರಸರ ಹೆಣಗಳು,
ವಾಂತಿ ಭೇಧಿ ಬಂದು ಸತ್ತ
ಸುಂದರಿಯರ ಶವಗಳು.
ಹೆಣಗಳ ಬೀಚು,
ನಡುವೆ ದಹನ ಪಾರಂಗತರು.
ಬಿಡುವು ಸಿಕ್ಕಾಗ ಅವರತ್ತ
ನನ್ನ ಪ್ರಶ್ನೆಗಳನ್ನು ಎಸೆದೆ.
‘ನಿನ್ನೊ ಸುಡುತ್ತೇವೆ ಬಾ’ ಅಂದರು.
ಅವರಿಗೆ ತಿಳಿದದ್ದು ಅದೊಂದೇ.
ನಮ್ಮೂರಿಗೆ ಬಂದರೆ ಸ್ಮಶಾನದವರು
ಹೆಂಡ ಹೀರುತ್ತಾ, ನಡುನಡುವೆ ಹೇಳಿದರು :
‘ಒಬ್ಬ ಒಳ್ಳೆ ಹುಡುಗಿಯನ್ನು ಹಿಡಿದುಕೋ
ಈ ಎಲ್ಲ ತರಲೆ ಮರೆತುಬಿಡು.’
ಇಷ್ಟು ಸಂತೋಷವಾಗಿದ್ದವರನ್ನು ನೋಡೇ ಇರಲಿಲ್ಲ.
ಬಾಟಲಿಯ ಮೇಲೆ ಬಾಟಲಿ
ಖಾಲಿ ಮಾಡುತ್ತಾ ಹಾಡಿದರು,
ಮತ್ತೇರಿದರು, ಮಹಾನ್ ಸಂಭೋಗ ಪರಿಣತರು.
ಮನೆಗೆ ಬಂದೆ. ಪ್ರಪಂಚವೆಲ್ಲ ಸುತ್ತಿ
ಮುದುಕನಾಗಿದ್ದೆ.
ಈಗ ಯಾರನ್ನೂ ಕೇಳುವುದಿಲ್ಲ.
ಆದರೆ ದಿನ ಕಳೆದಂತೆ ತಿಳಿಯುವುದು ಕಡಿಮೆಯಾಗುತ್ತಿದೆ.
*****
ಮೂಲ: ಪಾಬ್ಲೋ ನೆರುಡಾ