ಹಾರುವ ವಿಮಾನ ಹಾಗೇ ಹದ್ದಾಗಿ ಹೋದರೆ ಗತಿ?
ಗಡಿ ರಕ್ಷಿಸಿಯಾಯಿತಲ್ಲ!
ತೊಟ್ಟ ಬಟ್ನೆಗಳೇ ಥಟ್ಟನೆ ಇಲ್ಲವೆನ್ನಿ
ಏಕಾಂತದಲ್ಲೆ ಮಾನವೆಲ್ಲ!
ಧವಳಪುರದಲ್ಲಿ ಇಂಥ ಆಟಂಬಾಂಬ್ ಅಲ್ಲದಿದ್ದರೂ
ಚಿನಕುರಳಿ ಸಿಡಿಯುತ್ತವೆ.
ಮಾಮೂಲು ಬದುಕಿನ ಒಂದು ಕೂದಲು ಕೊಂಕದಿದ್ದರೂ
ಬುದ್ಧಿಗೆ ಶೀರ್ಷಾಸನ ಮಾಡಿಸುವ
ಸಾವಿರ ಪವಾಡ ಜರುಗುತ್ತವೆ.
ಕಲ್ಯಾಣನಗರಿಯ ಕಾಲಿಗೇ
ಕೈಜೋಡಿಸಿ ನಿಂತಿದೆ ಧವಳಪುರ,
ಆಳುಕಾಳು ಅದ್ಧೂರಿ ಭವನ
ಚಟಿಕಿ ಸದ್ದಿಗೆ ಸುಳಿವ ಮಣ ಮಣ ಕಾಗದ ಹಣ;
ಖಾಯಿಲೆ ಮಗುವಿನ ತಾಯಿ
ಚುನಾವಣೆಗೆ ನಿಂತ ನಾಯಿ
ಮಾರ್ಕಿನ ತಿಮ್ಮಾಬೋವಿಯ
ಆಕಳಿಸಿದ ಅದೆ ಮಾರ್ಕಿನ ಬಾಯಿ;
ಮೈಲಿ ಕ್ಯೂ ಕಾರು
ಹೊಸಾ ಹೊಸ ಕಾಣಿಕೆ ಮಾಲು
ಸತಿಸುತ ಸರ್ವಿಸುಗಳ ಋಣ ಸಲ್ಲಿಸಿ
ಪಾದಪೂಜೆಗೆ ಕಾದ
ಕನ್ನಡ ಕವಿತಿಲಕಗಳ ಸೀನಿಯಾರಿಟಿ ಪ್ರಕಾರದ ಸಾಲು
ಭಜನೆ ಭಂಗಿಗೆ ಹಠಾತ್ ಪ್ರಾಪ್ತವಾಗಿ
ಕೂಗುತಿದೆ ಭಕ್ತಗಣ ಎತ್ತುಗೊರಳಲ್ಲಿ;
ಎಲ್ಲ ಮಿಥ್ಯ ನೀನೇ ಸತ್ಯ ಸಾಯಿ ಸೋ
ಇಲ್ಲ ಬಾಳಿಸೋ
ಧವಳಪುರದಲ್ಲಿ ದಿನದಿನವು ಭಾರಿಪವಾಡ;
ಹಾವಿಗೆ ಓಡುವ ಗರುಡ
ಕಾಯಿ ಒಡೆದರೆ ಒಳಗೆ ಪರಿಮಳಿಸುವ ಮರುಗ
ಮುಕ್ಕಣ್ಣನಾಗಿ ಮರಳಿದ ಹುಟ್ಟಾ ಕುರುಡ;
ಎಲ್ಲರ ಎದುರೆದುರೇ ಒನಕೆ ಚಿಗುರಿ
ತೆಂಗಿನ ಮರದಿಂದ ಬಾಳೇಹಣ್ಣು ಉದುರಿ
ತೆಂದು ಸುದ್ದಿ :
ಕರೆದ ಚಪ್ಪಲಿ ಶಾಲು ಖಾಲಿಹವೆಯಿಂದ
ಹಾಜರಿಯಾದದ್ದೇನೋ ಸ್ವಂತ ಬಾತ್ಮೀದಾರರ ವರದಿ.
ಮಂತ್ರಿಸಿದ ಬೂದಿ, ಪವಿತ್ರ ಖಾದಿ
ಬಡವರಿಗೆಂದೇ ಗಿರವಿಯಂಗಡಿ ತೆರೆದು
ಹಣ ಮರಳಿ ಪಡೆಯದ ಮಾರ್ವಾಡಿಯ ಗಾದಿ
ಎಲ್ಲ ಎಲೆ ಕಲೆಸಿ ಕೂತ ಆಧ್ಯಾತ್ಮದ ದಿಲ್ಲಿ ಈ ಜಾಗ
ಭಕ್ತಿಯಲ್ಲಿ ತಮ್ಮ ಸಲ್ಲಿಸಿಕೊಂಡ ಬಂಜೆಯರು
ಅಪವಾದವಿಲ್ಲದೆ ಫಲಿಸಿದ್ದಾರೆ ಇಲ್ಲಿ;
ಭದ್ರನಿಂತಿದೆ ಯೋಗಿಯ ಅಮೃತ ಹಸ್ತ
ಇಂದಿಗೂ ಭಕ್ತೆಯರ ಎದೆಯಾಳದಲ್ಲಿ.
ಇಲ್ಲಿ ಬಂದವರಲ್ಲಿ ಬಹಳ ಜನ ಕಳಿತವರು,
ಒಂದುದಿನ ತಡೆದಿದ್ದರೆ ಕೊಳೆತು ಹುಳಿಯುತ್ತಿದ್ದರು,
ಪೇಜು ಪ್ರೂಫಿಗೆ ಬಂದಿದ್ದಾರೆ ಈಗಾಗಲೆ;
ಅಲ್ಲಿ ತಲೆಕಟ್ಟು ಹಾಕಿ ಇಲ್ಲಿ ಹೊಕ್ಕಳು ಎಳೆದು ಉಲ್ಲಿ ಕೊಂಬುಸಿಗಿಸಿ
ಇಷ್ಟು ತಿದ್ದಿದರೆ,
ಅಚ್ಚಾಗಿ ಬೈಂಡಾಗಿ ಕೆಲಸ ಪೂರ್ತಿ ಖೈದಾಗಿ
ತಕ್ಕ ವ್ಯವಹಾರಕ್ಕೆ ಮುಕ್ತರೇ.
ಯುದ್ಧ ಪ್ರವಾಹ ಭಯಂಕರ ಭೂಕಂಪ,
ಹತೋಟಿ ದಾಟಿ ಬೆಳೆಯುವ ಭಾರತ ಜನಗಣ ರಂಪ
ಕ್ಕೆಲ್ಲ ಎಳ್ಳುನೀರು ಹಾಡಿ
ಧವಳಪುರದಲ್ಲಿ ಪಾದ ಹೂಡಿ
ಕಡಲೆಯಿಂದ ಹುರುಳಿ ಹುರುಳಿಯಿಂದ ಕಡಲೆ ತೆಗೆದು
ಕಡೆಗೆ ಎರಡೂ ಸಮವೇ ಉಳಿಯುವ ಜಾದು ನೋಡಿ
ಪುಳಕಿತ ಭಕ್ತವೃಂದ ಜಿಗಿದೆದ್ದು
ಜಯ ಹೇ ಜಯ ಹೇ ಎಂದು ಬೊಬ್ಬಿರಿದು-
ಆಹಾ!
ಎಲ್ಲಿದೆ ಸ್ವಾಮೀ ಇಂಥ ನಿರ್ಲಿಪ್ತತೆ!
ಮೋಕ್ಷಕ್ಕೆ ಒಂದೇ ದಿನ ಹಿಂದೆ ಸಾಧ್ಯ
ಈ ಪ್ರಶಾಂತತೆ.
*****