ಪ್ರಿಯ ಸಖಿ,
ಏಳೆಂಟು ವರ್ಷ ಹುಡುಗಿಯೊಬ್ಬಳು ಆಟಕ್ಕಾಗಿ ಇರುವೆಗಳನ್ನು ಕೊಂದು ಸಣ್ಣ ಡಬ್ಬಿಯೊಂದರಲ್ಲಿ ಸಂಗ್ರಹಿಸಿಡುತ್ತಿದ್ದಾಳೆ. ಇದನ್ನು ಕಂಡ ಅವಳ ತಂದೆಗೆ ಸಿಟ್ಟುಕ್ಕಿ ಬಂದು ಅವಳ ಕೈಗಳೆರಡನ್ನೂ ಕಿಟಕಿಗೆ ಕಟ್ಟಿ ದಿನವಿಡೀ ನಿಲ್ಲಿಸಿದ. ಕಟ್ಟು ಬಿಚ್ಚಿದ ನಂತರ ಯಾವುದೇ ಪ್ರಾಣಿಗಾದರೂ ಹಿಂಸೆ ಮಾಡುವುದು ಎಂತಹಾ ಪಾಪವೆಂದು ತಿಳಿಹೇಳಿದ. ಆ ಕ್ಷಣಕ್ಕೆ ಹುಡುಗಿಗೆ ಅಪ್ಪನ ಮೇಲೆ ಕೋಪ ಬಂದರೂ ಪ್ರಾಣಿ ಹಿಂಸೆ ಪಾಪವೆಂಬ ಪಾಠವನ್ನು ಅವಳು ಬದುಕಿನುದ್ದಕ್ಕೂ ಮರೆಯಲಿಲ್ಲ. ಪ್ರಾಣಿಯನ್ನು ಹಿಂಸಿಸುವ ಮನಸ್ಸಾದೊಡನೆ ಅಂದು ತಂದೆ ತನ್ನ ತಪ್ಪಿಗೆ ನೀಡಿದ ಶಿಕ್ಷೆಯೂ ನೆನಪಾಗುತ್ತಿತ್ತು ಅವಳಿಗೆ. ಹಾಗೇ ಇನ್ನೊಂದು ಸಂದರ್ಭ ಕುಖ್ಯಾತ ಕಳ್ಳನೊಬ್ಬನ ವಿಚಾರಣೆ ನಡೆಯುತ್ತಿತ್ತು. ನೀನು ಕಳ್ಳತನ ಮಾಡಲು ಮೂಲ ಕಾರಣರ್‍ಯಾರು ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಅದಕ್ಕೆ ಕಳ್ಳ ನನ್ನ ತಾಯಿ ಎಂದ. ನ್ಯಾಯಾಧೀಶರಿಗೆ ಆಶ್ಚರ್ಯವಾಯಿತು. ಯಾವ ತಾಯಿ ತನ್ನ ಮಗನಿಗೆ ಕಳ್ಳತನ ಮಾಡೆಂದು ಹೇಳುಕೊಡುತ್ತಾಳೆ ಎಂದು ಕೊಳ್ಳುತ್ತಾ ಹೇಗೆ ? ಎಂದರು. ಅದಕ್ಕೆ ಆ ಕಳ್ಳ, ಚಿಕ್ಕಂದಿನಲ್ಲಿ ಅಮ್ಮ ಬೀದಿಯಲ್ಲಿ ಎತ್ತಿಕೊಂಡು ಹೋಗುವಾಗ ತಪ್ಪೆಂದು ಅರಿಯದೇ ಪಕ್ಕದಲ್ಲಿ ಬಾಳೆಹಣ್ಣು ಬುಟ್ಟಿಯಿಂದ ಕೊಂಡು ಹಾದುಹೋಗುತ್ತಿದ್ದವನಿಂದ ಒಂದು ಬಾಳೆಹಣ್ಣು ಕದ್ದೆ. ನನ್ನ ತಾಯಿ ಅದಕ್ಕೇ ಏನೂ ಹೇಳಲಿಲ್ಲ. ತಿನ್ನು ಎಂದಳು. ಅಂದು ಅವಳು ನನಗೆ ಎರಡೇಟು ಬಿಗಿದು ನೀನು ಮಾಡಿದ್ದು ತಪ್ಪೆಂದು ತಿಳಿ ಹೇಳಿದ್ದರೆ ನಾನಿಂದು ಇಷ್ಟು ದೊಡ್ಡ ಕಳ್ಳನಾಗಿರುತ್ತಿಲೇ ಇಲ್ಲ ಎಂದ.
ಪ್ರಿಯ ಸಖಿ, ಎರಡೂ ಸಂದರ್ಭಗಳನ್ನೂ ಸೂಕ್ಷ್ಮವಾಗಿ ಅರ್ಥೈಸಿಕೊಂಡರೆ ಸಣ್ಣ ತಪ್ಪಿಗೂ ಕೂಡ ಬದುಕಿನಲ್ಲಿ ಒಂದು ಮಹತ್ವವಿದೆ ಎಂದು ಅರ್ಥವಾಗುತ್ತದೆ. ಸಾಮಾನ್ಯವಾಗಿ ನಾವು ಸಣ್ಣ ತಪ್ಪುಗಳನ್ನೆಂದೂ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಅದೇನು ದೊಡ್ಡ ಅಪರಾಧವೇ? ಮುಂದೆ ಈ ತಪ್ಪು ಮಾಡದಿದ್ದರಾಯಿತು. ಅಥವಾ ತಪ್ಪುಗಳಾಗ್ತಾ ಇರ್ತಾವೆ. ಅದೇನು ಶಿಕ್ಷೆಯಿಂದಲೇ ಸರಿಹೋಗಬೇಕೆ? ಎಂದುಕೊಳ್ಳುತ್ತೇವೆ. ಆದರೆ ಸಣ್ಣ ತಪ್ಪಿಗೆ ನಾವು ನೀಡಿದ ಕ್ಷಮೆ ಕೂಡ ಮುಂದೆ ಬೃಹದಾಕಾರವನ್ನು ತಾಳಬಹುದೆಂಬುದು ಕಳ್ಳನ ಪ್ರಸಂಗದಿಂದ ತಿಳಿಯುತ್ತದೆ. ಹಾಗೇ ಸಣ್ಣ ತಪ್ಪಿಗೂ ನೀಡಿದ ಶಿಕ್ಷೆಯಿಂದ ಮತ್ತೆಂದೂ ಅಂತಹ ತಪ್ಪು ಸಣ್ಣದಿರಲಿ, ದೊಡ್ಡದಿರಲಿ ಶಿಕ್ಷೆ ಅನಿವಾರ್ಯ ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಇದು ಬೇರೆಯವರ ವಿಷಯಕ್ಕೆ ಮಾತ್ರವಲ್ಲ ನಮ್ಮ ವಿಷಯಕ್ಕೆ ಕೂಡ ನಮ್ಮಿಂದ ಸಣ್ಣ ತಪ್ಪಾದರೂ ನಮಗೆ ನಾವೇ ಅದಕ್ಕೆ ಶಿಕ್ಷೆ ವಿಧಿಸಿಕೊಳ್ಳಬೇಕು. ಹೀಗಾದಾಲೇ ನಾವು ತಪ್ಪುಗಳಿಂದಲೂ ಪಾಠ ಕಲಿಯಲು ಸಾಧ್ಯ. ಇದೇನು ಸಣ್ಣ ತಪ್ಪು ಬಿಡು. ಎಂದು ನಮ್ಮನ್ನು ನಾವೇ ಕ್ಷಮಿಸಿಕೊಂಡರೆ ಅದನ್ನೆಲ್ಲ ಮರೆತುಬಿಡುತ್ತೇವೆ. ಆ ತಪ್ಪಿನಿಂದ ಏನನ್ನೂ ಕಲಿಯುವುದೇ ಇಲ್ಲ. ಮುಂದೆ ಪಶ್ಚಾತ್ತಾಪ ಪಡಲೂ ಸಾಧ್ಯವಿಲ್ಲದಂತಹ ದೊಡ್ಡ ತಪ್ಪುಗಳು ಈ ಸಣ್ಣ ತಪ್ಪಿನ ಅಡಿಪಾಯದ ಮೇಲೆಯೇ ಆಗುತ್ತಾ ಹೋಗುತ್ತವೆ. ಸಖಿ, ಮಕ್ಕಳಿಗೆ, ಬದುಕಿನ ಮೌಲ್ಯಗಳ ಕುರಿತು ಒಂದು ಶಿಸ್ತುಬದ್ಧ ಚೌಕಟ್ಟು ಹಾಕಿಕೊಡಲು ಸಣ್ಣ ತಪ್ಪುಗಳನ್ನು ಗಮನವಿಟ್ಟು ನೋಡಿ ತಿಳುವಳಿಕೆ ಹೇಳುವುದು, ಕೆಲವೊಮ್ಮೆ ಶಿಕ್ಷೆ ನೀಡುವುದು ಅನಿವಾರ್ಯವಾಗಿರುತ್ತದೆ. ಹಾಗೇ ನಾವೇ ಮಾಡಿದ ತಪ್ಪುಗಳಿಗೂ ಸಹ ಶಿಕ್ಷೆ ವಿಧಿಸಿಕೊಂಡು, ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾ ಮಾಡಿದ ತಪ್ಪನ್ನು ಎಂದಿಗೂ ಮರೆಯದೇ ಮುಂದೆ ದೊಡ್ಡ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುವುದು ಜಾಣರ ಲಕ್ಷಣ ಅಲ್ಲವೇ?
*****