ಕೂಡಲೇ ಏನಾದರೂ ಮಾಡಬೇಕು…
ಇದಿಷ್ಟು ನಮಗೆ ಗೊತ್ತು.
ಅದಕ್ಕಿನ್ನೂ ಕಾಲ ಬಂದಿಲ್ಲ.
ಈಗ ತಡವಾಗಿದೆ.
ನಮಗೆ ಗೊತ್ತು.
ನಾವು ತಕ್ಕಮಟ್ಟಿಗೆ ಅನುಕೂಲಸ್ಥರು
ಹೀಗೇ ಬದುಕುತ್ತೇವೆ
ಇದರಿಂದೆಲ್ಲಾ ಏನೂ ಫಲವಿಲ್ಲಾ,
ನಮಗೆ ಗೊತ್ತು.
ನಮಗೆ ಗೊತ್ತು, ತಪ್ಪು ನಮ್ಮದೇ.
ಬೈಯುವುದಾದರೆ ತಪ್ಪು ನಮ್ಮದಲ್ಲ
ತಪ್ಪು ನಮ್ಮದಲ್ಲ ಅಂತಲೇ ಬೈಸಿಕೊಳ್ಳುವ ತಪ್ಪು ನಮ್ಮದೆ.
ನಮಗೆ ಗೊತ್ತು, ನಮಗೆ ಸಾಕಾಗಿ ಹೋಗಿದೆ.
ಸುಮ್ಮನೆ ಬಾಯಿಮುಚ್ಚಿಕೊ೦ಡಿರುವುದು ಒಳ್ಳೆಯದು.
ಆದರೆ ನಾವು ಸುಮ್ಮನಿರುವುದಿಲ್ಲ.
ನಮಗೆ ಗೊತ್ತು. ನಮಗೆ ಗೊತ್ತು.
ನಿಜವಾಗಿ ಯಾರಿಗೂ ಹೆಲ್ಪುಮಾಡಲು ಸಾಧ್ಯವಿಲ್ಲ, ನಮಗೆ ಗೊತ್ತು.
ಯಾರೂ ನಮಗೆ ಸಹಾಯಮಾಡಲು ಬರುವುದಿಲ್ಲ ನಮಗೆ ಗೊತ್ತು.
ಗೊತ್ತು, ಗೊತ್ತು.
ನಮಗೆ ಗೊತ್ತು, ನಾವು ಪ್ರತಿಭಾವಂತರು, ನಾವು ಜಾಣರು.
ಇಲ್ಲ ಅಥವ ಏನೂ ಇಲ್ಲ ಅನುವುದರಲ್ಲಿ
ಒಂದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನಮಗಿದೆ, ಗೊತ್ತು.
ಈ ಸಮಸ್ಯೆಯನ್ನು ಆಳವಾಗಿ ಪರಿಶೀಲಿಸಬೇಕೆಂದು ನಮಗೆ ಗೊತ್ತು.
ಟೀಗೆ ಒಂದೂವರೆ ಚಮಚ ಸಕ್ಕರೆ ಬೇಕು,
ನಮಗೆ ಗೊತ್ತು, ಗೊತ್ತು.
ಶೋಷಣೆಯ ಬಗ್ಗೆ ನಮಗೆಲ್ಲಾಗೊತ್ತು.
ನಾವು ಸದಾ ಶೋಷಣೆಯ ವಿರೋಧಿಗಳು.
ಸಿಗರೇಟಿನ ಬೆಲೆ ಜಾಸ್ತಿಯಾಗಿದೆ,
ನಮಗೆ ಗೊತ್ತು.
ದೇಶ ಸುಂಕಷ್ಟಕ್ಕೆ ಸಿಲುಕಿದೆ ಎಂದು ನಮಗೆ ಚೆನ್ನಾಗಿ ಗೊತ್ತು.
ನಾವು ಹೇಳಿದ ಮಾತು, ಮಾಡಿದ ಊಹೆ ಎಂದೂ ತಪ್ಪುವುದಿಲ್ಲ.
ಆದರೆ ಮಾತು ಊಹೆ ಎರಡೂ ವ್ಯರ್‍ಥ.
ಎಲ್ಲಾ ಬರೀ ಮಾತು.
ನಮಗೆ ಗೊತ್ತು.
ತಗ್ಗಿ ಬಗ್ಗಿ ನಡೆದರೆ ಉಪಯೋಗವಿಲ್ಲ.
ಆದರೂ ತಗ್ಗಿ ಬಗ್ಗಿನಡೆಯುತ್ತೇವೆ.
ನಮಗೆ ಗೊತ್ತು, ಗೊತ್ತು.
ಇದೆಲ್ಲಾ ಹೊಸತೂ ಅಲ್ಲ, ವಿಶೇಷವೂ ಅಲ್ಲ.
ಈ ಲೈಫು ವಂಡರ್‍ಫುಲ್ಲು, ನಮಗೆ ಗೊತ್ತು,
ಲೈಫು ಅಂದರೆ ಇಷ್ಟೆ, ನಮಗೆ ಚೆನ್ನಾಗಿ ಗೊತ್ತು.
ಇದೆಲ್ಲಾ ನಮಗೆ ಚೆನ್ನಾಗಿ ಗೊತ್ತು ಅಂತ
ನಮಗೆ ಗೊತ್ತು
ಅಂತ ಗೊತ್ತು,
ಗೊತ್ತು.
*****
ಮೂಲ: ಹ್ಯಾನ್ ಮ್ಯಾಗ್ನೆಸ್ ಎನ್‍ಜೆನ್ಸ್‍ಬರ್‍ಗರ್