ಪ್ರೀತಿಯ ಗೆಳೆಯಾ,
ಈ ಸಂಜೆ ಒಂದೆರಡು ಹನಿ ಮಳೆಬಿತ್ತು. ಅದು ಪೂರ್ತಿಯಾಗಿ ಮನಸ್ಸನ್ನು ತೋಯಿಸಲಿಲ್ಲ. ಹೊತ್ತು ಕಂತುವ ಮಬ್ಬು ಮನಸ್ಸಿಗೂ ಗೌಂವ್ ಎನ್ನುವ ಏಕಾಂಗಿತನವನ್ನು ಎದೆಯೊಳಗೆ ಸುರಿದು ಬಿಡುತ್ತದೆ. ಗೋಡೆಗಳು ಮಾತನಾಡುವದಿಲ್ಲ. ತಬ್ಬಿ ಬೋರೆಂದು ಅಳಬೇಕೆಂದರೆ ತೆಕ್ಕೆಗೆ ಸಿಗುವದಿಲ್ಲ. ಖಾಲಿಮನೆಯ ಖಾಲಿಗೋಡೆಯಲ್ಲಿ ಮನೆಯ ಯಾರ ಭಾವ ಚಿತ್ರವೂ ಇಲ್ಲ. ಬರೀ ಗುಲಾಬಿ ಬಣ್ಣ. ಮುಂಗಾರಿನ ಯಾವ ಮುನ್ಸೂಚನೆಯೂ ಇಲ್ಲ. ಒಮ್ಮೆ ಜೋರಾಗಿ ಗಾಳಿ ಬಂದು ಭೋರೆಂದು ಮಳೆ ಸುರಿದರೆ ಭೂಮಿ ಮನಸ್ಸು ತಣ್ಣಗಾದೀತು. ಕೆಲವು ಮಾತುಗಳು, ಒಣಹವೆ ಒಂಥರಾದಗೆ ಜೀವನವನ್ನು ಅಸ್ತವ್ಯಸ್ತ ಮಾಡಿ ಬಿಡುತ್ತದೆ. ಆಗ ಆತಂಕ ಸಂಜೆಗಳು ಯಾಕೋ ಒಜ್ಜೆಯಾಗುತ್ತವೆ. ಇಂತಹ ಮಬ್ಬಿನಲ್ಲಿ ನಾನು ಏನೋನೋ, ಹೊಸತುಡಿತಕ್ಕಾಗಿ, ಹೋರಾಟದಲ್ಲೂ ಯಾವುದೋ ಹೊಸ ಹರವಿಗಾಗಿ ತುಡಿಯುತ್ತೇನೆ. ಇದು ನನ್ನ ಸಾವಿನ ಹಾಸಿಗೆಯಲ್ಲಿ ಹುಟ್ಟಿದ್ದು. ಝಲ್ಲನೆ ಚಿಗುರಬೇಕೆಂಬ ಬಯಕೆ. ಒಳಗೊಳಗೆ ಜೀವಜಲ ತುಂಬಿಕೊಳ್ಳುವ ಹುನ್ನಾರ. ಈ ಕತ್ತಲ ಮೂರು ಸಂಜೆಯ ಮೋಡದ ನೆರಳಲ್ಲೂ ಅಮ್ಮನ ಮುಖ ತೇಲುತ್ತವೆ. ಅವಳ ಹೆರಿಗೆ ನೋವು ಮೆತ್ತಗೆ ನನ್ನಲ್ಲಿ ಇಳಿಯುತ್ತದೆ. ಆತಂಕದ ಅಲೆಗಳು ಮೈಯಲ್ಲಾ ಕಂಪಿಸುತ್ತವೆ. ಇದು ಬಕುದುವ ಬರವಣಿಗೆಗೆ ಸೃಜನಶೀಲತೆ ಅಲ್ಲವೇ ದೋಸ್ತ.
ನೀನು ಏನಾಗ ಬಯಸುತ್ತಿಯೋ ಅದು ನಿನಗೆ ಸಿಗುತ್ತದೆ. ಸಿಗುವಲ್ಲಿ ಹುಡುಕಾಟ ಇರುತ್ತದೆ. ಹುಡುಕಾಟದಲ್ಲಿ ಪ್ರೀತಿಯ ಎಳೇಕಾಡುತ್ತವೆ. ಹೀಗೆ ಅನುಭವದ ಪಟ್ಟಿಗಳ ಮೇಲೆ ದಾರದ ಲಡಿನೇಯ್ಗೆ ನೇಯುತ್ತದೆ. ಒಂದು ನೇಯ್ಗೆಯಲ್ಲಿ ಎಷ್ಟೊಂದು ಕೈಗಳಿವೆ. ಮನಸ್ಸುಗಳಿವೆ. ನಾವು ಇನ್ನೊಬ್ಬರಿಗೆ ಹಂಚಿದ ಪ್ರೀತಿಯಿಂದ ನಮ್ಮ ಬದುಕನ್ನು ಸಹನೀಯವಾಗಿ ಮಾಡುವುದು ಸಾಧ್ಯ. ನನ್ನ ಎಲ್ಲಾ ಸ್ನೇಹದ ಸ್ಪರ್ಶಗಳೂ ಹೊಸದಾಗಿ ಕಂಡು ಒಳಗೊಳಗೆ ರೂಪಾಂತರ ಶಕ್ತಿ ಒಂದು ಗೂಡಿ ಪರಿವರ್ತನೆಯಲ್ಲಿ ಮರುದಿನದ ಸೂರ್ಯ ಉದಯಿಸುತ್ತಾನೆ. ಬಾಹುಬಲಿ ಬುದ್ಧನ ವಿಗ್ರಹಗಳು ಎಷ್ಟು ಸಲ ನೋಡಿದರೂ ಹೊಸದಾಗಿಯೇ ಕಾಣುತ್ತವೆ ಅಲ್ಲವಾ? ಅಂತರಂಗದ ಕಣ್ಣಲ್ಲಿ ಒತ್ತಿದ ಭಿತ್ತಿ ಚಿತ್ರಗಳು, ಅನುಭವಗಳು, ನೇರ ಸುಖ ಎಲ್ಲವೂ ಸಮುದ್ರವಾಗುತ್ತದೆ. ಸಮುದ್ರವಾಗುವುದು, ಭೂಮಿ ಆಗುವದಕ್ಕಿಂತ ಸುಲಭ ಯಾಕೆಂದರೆ, ಎಲ್ಲವೂ ಯಾವ ಭೇದ ಭಾವಗಳಿಲ್ಲದೇ ಒಡಲ ಕಡಲ ಸೆಳೆತಕ್ಕೆ ಒಳಗಾಗಿ ಬಿಟ್ಟಾಗ, ನಾನು ತುಂಬಿದ ಸಮುದ್ರದ ದಂಡೆಯಲ್ಲಿ ಕುಳಿತಾಗ ಅಲೆ ಅಲೆಗಳಲ್ಲಿ ರಿಂಗಣಿಸುವ ನಾದ ಮನಸ್ಸಿನ ಚಿಪ್ಪಿನಲ್ಲಿ ಮುತ್ತು ಹುಟ್ಟಿಸುತ್ತದೆ. ನೀನು ನೆನಪಾಗುತ್ತಿ, ಸಮುದ್ರ ನನಗೆ ಯಾವಾಗಲೂ ಅಮ್ಮನ ಹಾಗೆ ಕಾಣುತ್ತದೆ. ಅಮ್ಮನ ಮೃದುತ್ವ, ಕಠೋರತೆ, ತಬ್ಬುವ ಕಕ್ಕುಲತೆ, ವಿಸ್ಮಯತೆ, ನಿಗೂಢತೆ ಎಲ್ಲವೂ ಸಮುದ್ರದಲ್ಲಿ ಬಿಂಬಿಸುತ್ತವೆ. ಬದುಕಿನ ನಾಜೂಕತೆಯನ್ನೂ ಅಮ್ಮ ಹೇಗೆ ಹುಟ್ಟಿಸುತ್ತಾಳೋ, ಹಾಗೆ ಸಮುದ್ರ ಕೂಡಾ, ಇದೇನಿದು ಭೋರಿಡುವ ಸಮುದ್ರ ಹೇಗೆ ನಾಜೂಕುಗಳನ್ನು ಕಲಿಸುತ್ತದೆ ಅಂತ ನೀನು ನಗಬಹುದು. ನಿಜವಾಗಿ ಒಮ್ಮೆ ನೀರದ ಏಕಾಂತದಲ್ಲಿ, ಅದರ ಸಮುದ್ರ ನಾದವನ್ನು ಒಮ್ಮೆ ಎದೆಗಿಳಿಸಿಕೋ. ಎಂತಹ ಉತ್ಕೃಷ್ಟ ಸಂಗೀತ ನಿನ್ನಲ್ಲಿ ಹುಟ್ಟುತ್ತದೆ. ಒಮ್ಮೆ ಮರಳಲ್ಲಿ ಕಾಲಾಡಿಸು, ಎಂತಹ ಕಚಗುಳಿಗಳು ದೇಹದೊಳಕ್ಕೆ ಪ್ರವೇಶಿಸುತ್ತದೆ. ನೋಡು, ಒಮ್ಮೆ ಅಲೆಗಳನ್ನು ತಬ್ಬಿ ತೇಲು. ಆಗ ಎಷ್ಟೊಂದು ಅಹಂಕಾರಗಳು ಒಳತೋಟಿಯಿಂದ ಜಾರುತ್ತವೆ. ದೋಸ್ತ, ನೀನು ಕಳಕಳಿಯ ಮುನುಷ್ಯ. ನಿನ್ನಲ್ಲಿ ಇಂತಹ ಭಾವಗಳನ್ನು ಹಂಚಿಕೊಂಡರೆ ನಾನು ಹಗುರಾಗುತ್ತೇನೆ. ಚಪ್ಪಾಳೆ ತಟ್ಟಿ, ಸುಖಿಸಬಲ್ಲ ನಿರಾಳವನ್ನು ನಾವು ಎಲ್ಲಿ ಕಳೆದುಕೊಂಡಿದ್ದೇವೆ?
ನಾಜೂಕು ಮನಸ್ಸಿನ ವ್ಯಕ್ತಿಗಳು ವಿಕಾರ ಸಮಾಜದ ಹೊಡೆತದಲ್ಲಿ ನುಗ್ಗಾಗುತ್ತಾರೆ. ಈ ಎಲ್ಲಾ ಅಪಾಯಗಳನ್ನು ಎದುರಿಸಿ ನಮ್ಮ ಬರವಣಿಗೆ ಬೆಳೆಯಬೇಕು. ನಾವು ಬರೆದದ್ದು ಎಷ್ಟೊಂದು ಜನರಿಗೆ ತಲುಪುತ್ತದೆಯೋ ಗೊತ್ತಿಲ್ಲ. ಆದರೆ ಅಕ್ಷರಗಳನ್ನು ಖಾಲಿ ಹಾಳೆಯ ಮೇಲೆ ಬರೆದಾಗ ವಿಸ್ಮಯ, ಶ್ಯಾಣಾತನದ ಅಂಗಳ ನಮ್ಮದೆನಿಸುತ್ತದೆ. ಭರವಸೆ ಇಲ್ಲದೇ ಬರವಣಿಗೆ ಇರಬಾರದು. ಹೀಗೆ ಸೂಕ್ಷ್ಮ ಜನರ, ಸೂಕ್ಷ್ಮ ಒಳತೋಟಿ, ತೀವ್ರ ಸ್ಪಂದನ, ಒಂದು ಚೂರು ಪ್ರೀತಿ ಎಲ್ಲವೂ ಮಿಳಿತಗೊಂಡಾಗ ನಮ್ಮ ಬರವಣಿಗೆ ಆಶಾದಾಯಕವಾಗುತ್ತದೆ. ಯಾವದೊಂದು ವಿಷಯದ ಬಗ್ಗೆ ಬರೆಯುವುದು ಅಷ್ಟೊಂದು ಸುರಳಿತವಲ್ಲ ಅಂತ ಒಮ್ಮೊಮ್ಮೆ ನಮಗೇ ಅನಿಸುವುದು ಉಂಟು. ವಿಷಯ ಗ್ರಹಣ ತಪ್ಪಾಗಿ ಅರ್ಥೈಸಿದೆಯೋ, ಎಲ್ಲಾ ಸ್ಪಂದದ ನಿಲುವೋ, ಗ್ರಹಿಕೆಯ ದಾರಿ ಸರಿಯಾಗಿಲ್ಲವೋ, ಯಾಕೆಂದರೆ ನಮ್ಮನ್ನು ಸುತ್ತವರಿದ ಮಜಾ ಮಾಡುವ ವಿಮರ್ಶೆಯ ಲೋಕ ಒಂದಿದೆಯಲ್ಲ, ನಮ್ಮ ಸುತ್ತಲೂ ಇದೇನು ವಿಮರ್ಶ, ಮನಸ್ಸು ಲೋಕ, ಸಮುದ್ರ ಸಂಜೆ ಕವಿತೆಗಳು ಅಂತ ಬೋರ ಬೋರಾಗಿ ಬರೆದಯುತ್ತಿದ್ದೇನೆ ಅಂದುಕೊಳ್ಳಬೇಡ. ಬೇಕಾಗಿದ್ದರೆ ಓದು, ಬೇಡವಾಗಿದ್ದರೆ ಪತ್ರ ಒಗೆದು ಬಿಡು, ನನಗೆ ಈ ಸಂಜೆ ಕೆಲಕ್ಷಣ ಬಿಡುಗಡೆಬೇಕಾಗಿದೆ. ಸಂಜೆಯ ವಿಹಲತೆ ಜರಿದು ಹೋಗಲು, ಈ ಅಸಾಯಕತೆ ಮಬ್ಬು ಹೊಗಲು ಒಮ್ಮೊಮ್ಮೆ ಸಂಗೀತ ಕೇಳುತ್ತೇನೆ. ಆದರೆ ಮನಸ್ಸು ಮಂಕಾದಾಗ ಸಂಗೀತವೂ ಮಂಕಾಗಿ ಇಳಿಯುತ್ತದೆ. ಏನೇ ಮಾಡಿದರೂ ತಪ್ಪಿಸಿಕೊಳ್ಳಲು ಸಾಧ್ಯವಾಗದಂತಹ, ನಿತ್ಯ ಜಗಲಿಗೆ ಬಂದು ಕುಳಿತುಕೊಳ್ಳುವ ಅಮಾಯಕ ಸಂಜೆಗಳು ಒಮ್ಮೊಮ್ಮೆ ಏನೆಲ್ಲಾ ಒತ್ತಡಗಳನ್ನು ಹೇರಿ ಜಗಳಕ್ಕೆ ಸಜ್ಜಾಗಿ ಬಿಡುತ್ತವೆ. ನಾನು ಬಡಪಾಯಿ ಅಂತ ಹೇಳಿದರೂ ಕ್ಷಣಗಳು ಸತಾಯಿಸುತ್ತವೆ. ಒಮ್ಮೊಮ್ಮೆ ನಮ್ಮೂರ ಬೆಟ್ಟ ಕೋಟೆ ಕೊತ್ತಳಗಳನ್ನು ಸುತ್ತಲು ಹೋಗುತ್ತೇನೆ. ನಮ್ಮೂರ ಜನ ಮೇಡಂಗೆ ತಲಿಸರಿ ಇಲ್ಲ. ಒಬ್ಬರೇ ಗುಡ್ಡದಾಗ ಅಡ್ಡಾಡಲಿಕ್ಕೆ ಹತ್ಯಾರ ಅಂತಾರೆ. ಕಲ್ಲುಗಳು ಎಷ್ಟೊಂದು ಕಥೆಗಳನ್ನು ಹೇಳಿದ್ದಾವೆ. ಸಂಜೆ ಹುಟ್ಟುವ ಬಂಡೆ ನೆರಳು ಕವಿತೆಯನ್ನು ಹುಟ್ಟುಹಾಕಿವೆ. ಬೆಟ್ಟಕ್ಕೆ ಬತ್ತಲಾಗಿ ನಿಂತು ಬಿಸಿಲು ಮಳೆಗೆ ಯಾವ ತಕರಾರೂ ಇಲ್ಲದೇ ತನ್ನ ಮೈಯನ್ನು ಒಡ್ಡುತ್ತದೆಯಲ್ಲ ನನ್ನೊಳಗೆ ವಿಸ್ಮಯ ಗಟ್ಟಿತನ ಹುಟ್ಟುಹಾಕುತ್ತವೆ ಗೆಳೆಯಾ. ಒಮ್ಮೆ ನಿನ್ನೊಂದಿಗೆ ನನ್ನ ಕಾಲುಗಳು ಕಟಕಟಸಪ್ಪಳ ಮಾಡಿ ಊದು ಕೊಳ್ಳದೇ ಇದ್ದರೆ ನಮ್ಮೂರು ಬೆಟ್ಟಗಳ ಮೇಲೆ ಸುತ್ತು ಹಾಕುವ ಆಸೆ. ಅದು ಇನ್ನು ಈ ಜನ್ಮದಲ್ಲಿ ಸಾಧ್ಯವಾಗದೋ ಏನೋ.
ನಿನೇಕೋ ಕಾವ್ಯವನ್ನು ಒಪ್ಪುವುದೇ ಇಲ್ಲ. ಯಾಕೆ ಒಮ್ಮೆ ನಮ್ಮೂರು ಚಹಾದಂಗಡಿಯ ಕಟ್ಟೆ ಮೇಲೆ ಕುಳಿತುಖಾರಾ ಚುರುಮುರಿ, ಮಿರ್ಚಿಭಜಿ ತಿಂದು ನೋಡು, ಕಣ್ಣಾಗ, ಮೂಗಿನಾಗ, ಬಾಯಾಗ ಬಳಬಳ ನೀರು ಸುರಿದು ಕವಿತೆ ಸಳಸಳ ಅಂತ ಮಂಡೆಯೊಳಗೆ ಹೊಳೆಯದಿದ್ದರೇ ಹೇಳು, ನಿನ್ನ ಐ.ಟಿ.ಬಿ.ಟಿ.ಯ ವಿಸ್ಮಯ ಬೆರಗಿಗಿಂತಲೂ ಅದ್ಭುತ ಬೆರಗು ಕವಿತೆಗಳಲ್ಲಿ ಕಾಣುತ್ತದೆ. ಯಾವ ಪವಾಡಗಳೂ ವಿಸ್ಮಯಗಳೂ, ಬೆರಗುಗಳೂ ನಮ್ಮನ್ನೂ ಕಾಡದಿದ್ದರೆ ನಮ್ಮ ಮೆದುಳು ಜಂಗು ಹಿಡಿಯುತ್ತದೆ. ರೋಗಗಳು, ಸಾವಿನ ನೆರಳು, ಬಳಲಿಕೆ, ಕೊರತೆಗಳು ಬದುಕಿನ ಬಯಲನ್ನು ಹಿರಿದು ಗೊಳಿಸುತ್ತದೆ. ಅಲ್ಲಿ ಸೋತು ಕಣ್ಣುಗಳು ಮನಸ್ಸುಗಳು ಹಸಿರಿಗಾಗಿ ತಹತಹಿಸುತ್ತವೆ. ಇದು ಸಂಜೆ ಸಮಯ ಕಳೆಯುವದಕ್ಕೆ ನಿನಗೆ ಬರೆದುದಲ್ಲ. ಇದು ದಿಕ್ಕೆಟ್ಟ, ಸಂಜೆಗಳೂ ಅಲ್ಲ. ಇದು ಮತ್ತೆ ಕತ್ತಲೆಯ ಮಬ್ಬುಕವಿದ ಏಕಾಂತದ ಗಾಳಿಯೊಂದಿಗೆ, ಇರಳು ಬಾನತುಂಬ ಚಿಕ್ಕಿಗಳ ಮಿಣಿಮಿಣಿಯ ತೋರಿಸುವ ಹಾಗೆ ಅಲ್ಲೊಮ್ಮೆ ಇಲ್ಲೊಮ್ಮೆ ಹಾಯುವ ವಿಮಾನಗಳ ಕೆಂಪು ದೀಪಗಳ ಹೊಳೆ ಹೊಳೆದು ಜಾರುವ ಕ್ಷಣಗಳ ಅಪರೂಪದ ಕ್ಷಣ. ಈ ಸಂಜೆಯ ಪ್ರಾರ್ಥನೆಯ ಕ್ಷಣಗಳು ನಿನ್ನ ದಣಿದ ಕಣ್ಣುಗಳಿಗೆ ತಂಪು ನೀಯಲಿ. ಮತ್ತೆ ಕನಸುತುಂಬಲಿ. ಸಂಜೆ ಟೇರಿಸ್ಸಿನಮೇಲೆ ಕುಳಿತು ನಾನು ಒಮ್ಮೊಮ್ಮೆ ಹಾರುವ ಹಕ್ಕಿಗಳ ಗುಂಪನ್ನು ಎಣಿಸುತ್ತೇನೆ. ಮತ್ತೆ ಹೇಗೆ ಒಂದೊಂದು ಚಿಕ್ಕಿಗಳು ಮೂಡುತ್ತವೆ. ಅಂತ ಪಿಕ್ಚರ್ ಫ್ರೇಮ್ನ ಮನಸ್ಸನ್ನು ಸಿದ್ಧ ಪಡಿಸಿಕೊಳ್ಳುತ್ತೇನೆ. ಎಲ್ಲ ಗ್ರಹಿಕೆಗಳು ಮೂಡಿದಾಗ ಒಮ್ಮೊಮ್ಮೆ ಕಥೆಗಳ ಸಾಲಾಗುತ್ತವೆ. ಮತ್ತೊಮ್ಮೆ ಕವಿತೆಗಳ ಸಾಲುಗಳು, ಕಳವಳದ ಸಂಜೆಗಳು ಸೃಜನವಾಗಬೇಕಾದರೆ ಮನಸ್ಸಿನ ಸಂವಹನಕ್ಕೆ ಗೆಳೆಯರು ಬೇಕು. ಗೆಳೆಯರೊಂದಿಗೆ ಮುಳುಗುವ ಸೂರ್ಯನನ್ನು ನೋಡುತ್ತ, ಹರಟುತ್ತ, ಕಾಫಿಕುಡಿಯುತ್ತ, ಹಾರುವ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತ, ತೇಲುವ ಮೋಡಗಳ ರಾಶಿಯಲ್ಲಿ, ಜಗತ್ತಿನ ಶ್ರೇಷ್ಠ ಚಿಂತಕರು ಚಿಂತನಗಳು ಹುಟ್ಟಿವೆ. ಉತ್ಕೃಷ್ಟ ಕವಿತೆಗಳು ಹೂವಿನ ಪಕಳೆಯ ಸುಗಂಧಿಯಲ್ಲಿ ಎಲ್ಲಾ ವ್ಯಥೆಗಳು ಕಥೆಯಾಗಿವೆ. ದೋಸ್ತ ಸಂಜೆ ಹೆಚ್ಚಾಗಿ ಎಲ್ಲಾ ಸ್ನೇಹಿತರು ಪರಿವಾರದವರು, ಗೂಡು, ಬೆಚ್ಚನೆ ಕಂಬಳಿ, ಜಾರುವ ಚಂಚಲತೆಗಳು, ದೇವರ ಮನೆಯ ನೀಲಾಂಜನದ ಬೆಳಕಿನಲ್ಲಿ ಬಿಂಬಿಸುತ್ತವೆ.
ನಿಮಗೆ ನಿಮ್ಮ ಕಂಪನಿಯ ಎಲ್ಲರಿಗೂ ಇಂತಹ ಸಂಜೆಗಳು ಪ್ರಸ್ತಾಪಕ್ಕೆ ಬರಲಿಕ್ಕಿಲ್ಲ. ನಿಮಗೆ ಜಗತ್ತಿನಲ್ಲಿ ಜನಸಾಮಾನ್ಯರೇ ಇಲ್ಲ, ಸಂಜೆಗಳೇ ಇಲ್ಲ, ಇದ್ದರೂ ನೀವೆಲ್ಲ ಹಿಮಾಲಯದ ತುದಿಯಲ್ಲಿ ನಿಂತವರಂತೆ ಕಾಣುತ್ತೀರಿ, ಓಣಿಯ ಮನೆಯಲ್ಲಿ ಕಂದೀಲು ಪಾವು ಒರಿಸಿ, ಚಿಮಣಿ ಎಣ್ಣೆ ಹಾಕಿ, ದೀಪ ಹಚ್ಚುವ ಮಹಿಳೆಯರನ್ನು, ಒಗೆಯುವ ಕಲ್ಲಿನ ಮೇಲೆ ಒಣ ಹಾಕುವ ಮಸಿ ಬಟ್ಟೆ, ಮಾಸಿದ ಬಳೆಗಳ ಚಿಕ್ಕಿಗಳು, ಅಂಗಳದ ತುಳಸೀ ಮುಂದೆ ಎಳೆದರಂಗೋಲಿ, ಸಾಸಿವೆ ಡಬ್ಬದಲ್ಲಿ ಇರಿಸಿದ ಚಿಲ್ಲರೆ, ಪುಟ್ಟ ಗೂಡಿನಲ್ಲಿ ಇರಿಸಿದ ಸೂಜಿದಾರ, ಮಾಸಿದ ಹನುಮಪ್ಪನ ಫೋಟೋ, ಗೂಟಕ್ಕೆ ಜೋತು ಬಿಟ್ಟ ಕೈ ಹೆಣಿಕೆಯ ಚೀಲ, ಚೀಲದಲ್ಲಿದ್ದ ರೇಶನ್ ಕಾರ್ಡು, ಲೈಟಬಿಲ್ಲು, ನಳದಬಿಲ್ಲು, ದಿನಸಿ ಬಿಲ್ಲು, ಯಾವುದೂ ನಿಮ್ಮ ಹವಾನಿಯಂತ್ರಿಕ ಕೋಣೆಯ ಕಂಪ್ಯೂಟರಿನಲ್ಲಿ ಕಾಣಿಸುವುದಿಲ್ಲ.
ಈ ಸಂಜೆ ಅರಳುವ ಅಕ್ಷರಗಳಲ್ಲಿ ಜಾಜಿ ಮಲ್ಲಿಗೆ ಹೂವಿನ ಕಂಪುಬಣ್ಣ ಇದೆ. ಮೆಲ್ಲಗೆ ಮರದ ತೂತಿನಲ್ಲಿ ಒಳಸೇರುವ ಗುಂಗಿಯ ನಾದವಿದೆ, ಗಲಿಬಿಲಿ ಗೊಂಡು ಹೊರಡ ಇರುವೆ ಸಾಲಿದೆ, ಗೋಡೆ ಮೇಲೆ ಕುಳಿತು ಲೊಚಗುಟ್ಟುವ ಹಲ್ಲಿಯ ಗಟ್ಟಿ ಧ್ವನಿ ಇದೆ.
ಓಣಿಯಲ್ಲಿ ಯಾರೋ ಸೇದಿಬಿಟ್ಟ, ಸಿಗರೇಟು ಹೊಗೆ ಹಾರುತ್ತಿದೆ. ಮತ್ತೆ ಛಂದದ ನಿನ್ನ ಮುಖ ತೇಲಿದೆ.
ನಿನ್ನ,
ಕಸ್ತೂರಿ
*****