Home / ಲೇಖನ / ಪತ್ರ / ಪೂರ‍್ಣಿಮ – ೯

ಪೂರ‍್ಣಿಮ – ೯

ಜೀವ ಸ್ನೇಹಿತೆ,

ಇಂದೇನು ಬರೆಯಬೇಕೆಂದು ತಲೆಕೆರೆದುಕೊಂಡಾಗ, ನೀನು ಒಂದೆರಡು ವರುಷಗಳ ಹಿಂದೆ, ಕಾಲೇಜಿನ ವಿದ್ಯಾರ್ಥಿನಿಯಾಗಿ ಜೊತೆಗೆ ಮಕ್ಕಳ ತಾಯಿಯಾಗಿ ಓದುತ್ತಿದ್ದಾಗ ಮೈಸೂರಿನಿಂದ ಬರೆಯುತ್ತಿದ್ದ ಪತ್ರದ ರಾಶಿಯನ್ನು ಹರವಿಕೊಂಡೆನು. ಕೈಗೆ ಸಿಕ್ಕಿದ ಪತ್ರವೊಂದರಲ್ಲಿ ನಿನ್ನ ಬಿಸಿಯುಸಿರಿನ ಬಿಸಿಯು ನನಗೆ ತಟ್ಟಿತು.

“ಹೂವು ಬಾಡದ ಮುನ್ನ ಬಿಸಿಲಿಗೆ ಅದು ಕುಗ್ಗಿ ಹೋಗುವ ಮೊದಲು ಗಾಳಿಗೆ ಅದರ ಪಟಲಗಳು ಮುದರಿಕೊಳ್ಳುವ ಮುಂಚೆ, ಅವರಿವರ ಕಣ್ಣಿನ ಕಿಚ್ಚು ಅದಕ್ಕೆ ಬೀಳುವ ಮುನ್ನವೇ ಪುಷ್ಪವನ್ನು ಎದೆಗೊತ್ತಿ ಎದೆಯಲ್ಲಿ ಮುಚ್ಚಿಟ್ಟುಕೊಳ್ಳಬೇಕು.”

ಮೇಲಿನ ಈ ಒಂದು ದೊಡ್ಡ ವಾಕ್ಯದಲ್ಲಿ ನಿನ್ನಲ್ಲಿನ ಭಾವನೆಯ ಐಸಿರಿಯನ್ನೂ ಅದನ್ನು ಹೊಂದಲಾಗದಿದ್ದುದಕಾಗಿ ಬಂದ ನೋವಿನ ಉರಿಯನ್ನೂ ತುಂಬಿರುವಿ. ಪತ್ರ ಹಳೆಯದಾದರೂ ಶಬ್ದಗಳು ಓದಿದಷ್ಟು ಹೊಸದಾಗುತ್ತಿವೆ; ಹರಿತವಾಗುತ್ತಿವೆ. ನಾನಂದು ಈ ಪತ್ರಕ್ಕೆ “ಬೇಡವೆಂದವರಾರು? ಪುಷ್ಪದ ಪ್ರತಿಯೊಂದು ಎಸಳೂ ಅದರ ಕಮ್ಮನೆಯ ಪರಿಮಳದ ಅಣು ವೊಂದೊಂದೂ ನಿನಗಾಗಿಯೇ ಮೀಸಲು” ಎಂದು ನಿನಗೆ ಸಮಾಧಾನದ ಪತ್ರವನ್ನು ಬರೆದ ನೆನಪು. ಆದರೆ ಆ ಪತ್ರ ಈಗ ಹೊಸದಾಗಿ ಬಂದಿತೇನೋ? ಈಗೇನು ಉತ್ತರ ಕೊಡಲಿ? ಹಳೆಯ ಉತ್ತರದಲ್ಲೇ ಔಚಿತ್ಯವಿದ್ದರೂ, ಅದನ್ನು ಕೊಟ್ಟ ಮೂರು ವರುಷಗಳ ನಂತರ ಕೊಡಬಹುದಾದ ಉತ್ತರವೆಂತೆಂಬುದನ್ನು ನಾನು ಇತ್ತೀಚೆಗೆ ಬರೆಯುತ್ತಿರುವ ಪತ್ರಗಳಿಂದ ನೀನು ಊಹಿಸಿಕೊಂಡಿರುವೆ. ಪ್ರೇಮವಾರಿಲ್ಲ, ಬಯಕೆ ಮುಗಿದಿಲ್ಲ. ಆದರೆ ಜೀವನದ ನಲುಗಾಟ, ಕೊರಗಾಟ, ಜಂಜಾಟ ಇವು ಸ್ವರದ ಇಂಪನ್ನು ಕೆಡಿಸಿವೆ; ಭಾವನೆಯ ಪಂಪನ್ನು ಸೊರಗಿಸಿವೆ. ಆದರೂ ಆಗಾಗ, ನೀನು ಮೊನ್ನೆ ಮೊನ್ನೆ ಉಪದೇಶಿಸಿದಂತೆ ಲೋಕವಿರುವ ಎದೆತನವು ಬರುವುದು. ಆಗ ಉಮರಖಯಾಮನ ಧೈರ್ಯ, ಆವೇಶ ಬಂದು “ಬಾ ತುಂಬು ಬಟ್ಟಲಲಿ ಮಧುವನು; ನಾಳೆ ಎಂಬೆಯೋ? ನಾಳೆ ಸೇರುವುದು ನೂರ್ಕೋಟಿ ನಿನ್ನೆಗಳ ಜೊತೆಗೆ ಆ ಅವನ ಹಾಡು ನನ್ನ ಕಂಠಕ್ಕೆ ಬಂದಾಗ, ಮಧುರ ಬೀರುವ ಹೊನ್ನ ಹೂವು ನೀವೆಂದು ನೀನು ನನ್ನನ್ನು ಸಂಬೋಧಿಸಿ ಬರೆಯುತ್ತಿದ್ದ ಹೆಸರು ಚೆನ್ನೆನಿಸಿ ಹೃದಯವು ಅರಳುವುದು. ಆದರೆ, ನಿನ್ನ ಇಂದಿನ ನಿಸ್ಸಹಾಯಕ ಜೀವನವನ್ನು ನೆನಿಸಿ ಕೊಂಡಾಗ ಈ ಮಾತಿನಲ್ಲಿ ನನ್ನನ್ನು ಅಣಕಿಸುವ ಅಣಕ ಕಾಣುವುದು.

ತಾಳು, ಇನ್ನೊಂದು ಪತ್ರವನ್ನು ಹುಡುಕಿ ನೋಡುವನು. ಅದರಲ್ಲೇನಾದರೂ ಸಮಾಧಾನ ಸಿಕ್ಕುವುದೇ ಎಂದು. ಈಗ ಕೈಗೆ ಸಿಕ್ಕಿದುದು ನಾನು ನಿನಗೆ ಬರೆದ ಕಾಮನ ಹುಣ್ಣಿಮೆಯ ಬಣ್ಣನೆಯ ಪತ್ರ. ಇದನ್ನೋದಿ ನೀನು ಮರೆತಿರಬಹುದು. ಆದ್ದರಿಂದ ಆ ಪತ್ರವನ್ನು ಯಥಾವತ್ತಾಗಿ ಮತ್ತೆ ಇಲ್ಲಿ ಎತ್ತಿ ಬರೆಯುವೆನು. ಈಗ ಓದಿ ನೋಡು, ಇದರ ಪರಿಣಾಮವು ನಿನ್ನ ಪತ್ರವನ್ನೋದಿದಾಗ ಈಗ ನನಗಾದಂತೆಯೇ ನಿನಗೂ ಆಗುವುದಾದರೆ, ನಾವಿಬ್ಬರೂ ಇರುವ ಅಧ್ಯಾಯ ಎಷ್ಟನೆಯದು ಎಂಬುದನ್ನು ನಿರ್ಧರಿಸಿಕೊಳ್ಳಬಹುದು. ಆ ಪತ್ರ ಇಂತಿದೆ :-

“ಕಾಮನ ಹುಣ್ಣಿಮೆಯ ನೆನಪಿಗಾಗಿ ಬರೆಯುತ್ತಿರುವ ಪತ್ರವಿದು. ನಿನ್ನನ್ನು ಅಳಿಸುವುದಕ್ಕಲ್ಲ, ನಗಿಸುವುದಕ್ಕೆ, ನಿನ್ನೆ ರಾತ್ರಿ ಹುಣ್ಣಿಮೆ ತಾನೆ? ಚಂದ್ರ ರೋಹಿಣಿಗೆ ರತಿಯ ವೇಷವನ್ನು ಹಾಕಿಕೊಂಡು ಅನಂಗನಾದ ಮನ್ಮಥನ ದೇಹದಲ್ಲಿ ಹೊಕ್ಕು, ಅವನ ವಿಹಾರಕ್ಕೆಲ್ಲ ಎಡೆಸಿಗದೆ ನನ್ನ ಶಯ್ಯಾಗಾರದ ಅಥವಾ ವಿರಹದ ಗುಹೆಯ ಪಕ್ಕದಲ್ಲಿರುವ ಮೈದಾನಕ್ಕೆ ಬಂದನು. ಸರಿರಾತ್ರಿ, ನಿಶ್ಯಬ್ದವೆಂದು ಆತಬಂದನು. ನನ್ನ ಕಿಟಕಿ ತೆರೆದಿದ್ದಿತು. ನಾನು ಕಣ್ಣು ಮುಚ್ಚಿರಲಿಲ್ಲ. ಆದರೂ ಮತಿಗೆಟ್ಟ ಚಂದ್ರನಿಗೆ ನಾಚಿಗೆ ಇನಿತಿರಲಿಲ್ಲ. ರೋಹಿಣಿಯ ಸೊಂಟಕ್ಕೆ ಕೈ ಹಾಕಿದನು. ಹರಿಣಿಯನ್ನೂ ಜೊತೆಯಲ್ಲೇ ಕರೆದು ತಂದಿದ್ದನು. ಇವನ ಹೆಜ್ಜೆಯ ತಾಳಲಯಕ್ಕೆ ಸರಿಯಾಗಿ ಹೆಜ್ಜೆಯ ಇಂಚರಕ್ಕೆ ಹೊಂದಿಕೊಳ್ಳುವಂತೆ ರೋಹಿಣಿಯ ಹೊಂದೊಡುವುಗಳ ಶಬ್ದಕ್ಕೆ ಸರಿಯಾಗಿ ಈ ಹರಿಣಿ ಕುಣಿದು, ನಲಿವುದನ್ನು ಕಲಿತಿದ್ದಿತು. ನಾನು ಒಂದೆರಡು ನಿಮಿಷ, ಬಿಟ್ಟ ಕಣ್ಣುಗಳಿಂದಲೇ ನೋಡಿದೆ. ದಿಟ್ಟತನ ಹೆಚ್ಚು ಬಂದಿತು. ತಾಳು, ಮತ್ತೊಂದು ಹುಣ್ಣಿಮೆಗೆ ಇಲ್ಲಿಗೆ ಬಂದಿಯೋ ಜೋಕೆ. ನನ್ನ ವಿರಹವಡಗಿ ವಿಹರಿಸುವ ಉದ್ಯಾನವಿದಾಗುವುದು. ನೀನು ಬಂದರೆ ಚಂದ್ರ, ನಿನಗೆ ಅರ್ಧಚಂದ್ರ ಪ್ರಯೋಗವಾದೀತೆಂದು ತಿಳಿಸಿದೆನು. ಆಗ ಚಂದ್ರ ನನಗೆ ಹೀಗೆಂದು ಉತ್ತರ ಕೊಟ್ಟನಲ್ಲಾ “ನಾಳೆ ನಾಳೆ ನನ್ನ ಸುಖ ಎಂದಂದುಕೊಂಡೆ. ನಿನ್ನ ಯೌವನವೆಲ್ಲಾ ಅಡಗಿತು. ನನ್ನ ಹಾಗೆ ನಿನಗೆ ಚಿರ ಯೌವನವಿದೆಯೇ? ನಾವು ಅಮರರು, ನೀನು? ನಾಳೆ ನಿನ್ನದೆಂದು ಹೇಗೆ ಗೊತ್ತು?” ಎಂದಂದನು. ಅದಕ್ಕೆ ನಾನುತ್ತರವಾಗಿ ‘ಯಮನನ್ನು ಗೆದ್ದ ಸಾವಿತ್ರಿಯಂತಹ ಸುದತಿ ನನಗಿರುವಾಗ ನಾಳೆ ಏಕೆ ಕಾಲವೆಲ್ಲವೂ ನನ್ನದೇ ಎಂದು ಜಂಭ ಕೊಚ್ಚಿದೆ. ಅದಕ್ಕೆ ರೋಹಿಣಿ ತನ್ನ ಮೋರೆದಿರುವಿದಳು. ಬಾನಲ್ಲ ಇವನೇನು ಬಲ್ಲ ಸೊಗದಾನಂದವನ್ನು, ಹೊತ್ತೇಕೆ ಕಳುಹುವುದು. ಬೆಳಗಿನ ಜಾವವಾದರೆ ದೇವತೆಗಳು ಸ್ನಾನಕ್ಕೆ ಹೊರಡುವರು. ಅವರು ಬರುವ ಮುನ್ನವೇ ಕಾಮನ ಹುಣ್ಣಿಮೆಯನ್ನಾಚರಿಸೋಣ” ಎಂದು ಚಂದ್ರನನ್ನು ದರದರನೆ ಎಳೆದುಕೊಂಡು, ರೆಕ್ಕೆಯಿಲ್ಲದೆಯೇ ಹಾರಿಬಿಟ್ಟರು. ರೆಕ್ಕೆಯಲ್ಲಿ ಅಡಗಿಸಿಕೊಂಡು ಗಗನವನ್ನು ಚುಂಬಿಸಲು ರೋಹಿಣಿ ನೆಗೆದುಬಿಟ್ಟಳು. ಸ್ತ್ರೀಯರು ಮೃದು ಹೃದಯಿಗಳೇ, ನೀನೇ ಹೇಳು, ನನ್ನ ಸ್ಥಿತಿ ನೋಡಿ, “ಅಯ್ಯೋ ಪಾಪ” ಎಂದು ಮರುಗಿದ್ದರೆ ಅವಳಿಗೇನು ಭಾರವಾಗುತ್ತಿತ್ತು? ಸ್ತ್ರೀಯರು ಕುಸುಮ ಕೋಮಲೆಯರಾದರೂ ಸ್ವಾರ್ಥಕ್ಕೆ ನಿಂತಾಗ ವಜ್ರದಷ್ಟು ಕಠಿಣರೂ ಹೌದು.

ಚಂದ್ರನು ನಡು ಆಗಸದಲ್ಲಿ ಯಾರಿಗೂ ಹೆದರದೆ, ಲಜ್ಜೆ ಬಿಟ್ಟು ಗೆಜ್ಜೆ ಕಟ್ಟಿದ ರೋಹಿಣಿಯೊಂದಿಗೆ ನರ್ತಿಸುತ್ತಿದ್ದನು. ಅಷ್ಟು ದೂರದಲ್ಲಿ ಅಷ್ಟು ಎತ್ತರದಲ್ಲಿದ್ದ ಚಂದ್ರಮನ ಕಣ್ಣು ನನ್ನ ಕೊಠಡಿಯ ಕಿಟಕಿಯ ಮೇಲೆ ಪುನಃ ಬಿದ್ದಿತು. ರೋಹಿಣಿಯ ದೃಷ್ಟಿಯೂ ಚಂದ್ರಮನ ದೃಷ್ಟಿಯನ್ನೇ ಹಿಂಬಾಲಿಸಿತು. ಇಬ್ಬರು ನೋಡುವರು; ಅಟ್ಟಹಾಸದಿಂದ, ದಿಟ್ಟವಾಗಿ ಗಟ್ಟಿಯಾಗಿ ನಕ್ಕು ನಲಿವರು, ನನ್ನ ಮುಖವನ್ನು ನೋಡಿ. ರೋಹಿಣಿ ತನ್ನ ಕಣ್ಣನ್ನು ಮುಂಚಾಚಿ ಕೊಠಡಿಯನ್ನೆಲ್ಲಾ ಹುಡುಕಿದಳು ನನ್ನ ರೋಹಿಣಿ ಎಲ್ಲಿರುವಳೆಂದು? ನೋಡಿ, ಹುಡುಕಾಡಿದ ಮೇಲೆ ನನ್ನ ಕಡೆಗೆ ಕೇಕೆ ಹಾಕಿದಳು. ಚಂದ್ರನು ಈ ಕೇಕೆಯೊಂದಿಗೆ ಕಿರುನಗೆಗೂಡಿಸಿದನು. ನನಗೆ ಕೋಪ ಬಹು ಬಂದಿತು. ಚಂದ್ರ ರೋಹಿಣಿಯರ ಕಡೆಗೆ ತಲೆ ಎತ್ತಿ, ತಾಳು ಚಂದ್ರ ನಗಬೇಡ, ನಾಳೆ ಹುಣ್ಣಿಮೆ, ಒಂದು ದಿನವುಳಿದಿದೆ; ನಿನ್ನ ಬಾಳಿನ ಸುಗ್ಗಿ. ಆ ಮೇಲೆ ಅದು ಕುಗ್ಗಿ ಕುಗ್ಗಿ ರೋಹಿಣಿಯ ಹಿಗ್ಗೆಲ್ಲ ಮದುರುವುದೆಂದು ಕೂಗಿಕೊಂಡೆನು. ಅದಕ್ಕೆ ಆತನೆಂದ ಓ ವಿರಹಿ ಇಂದು ನಮ್ಮದು. ಈಗ ಪಡೆದ ಸುಖ ನಮ್ಮದು. ನಾಳೆ ಹುಣ್ಣಿಮೆ. ಇನ್ನೊಂದು ಪಕ್ಷವು ನಮ್ಮ ಬಾಳಿನ ಕತ್ತಲು, ಅದರಿಂದ ಇಂದು ನಮಗೆ ‘ಕಾಮನ ಹುಣ್ಣಿಮೆ.’ ನಿನ್ನ ವೈರಾಗ್ಯ ಸಾಕು; ನಾಳೆ ನನ್ನದು; ನಾಳಿನ ಸುಖಕ್ಕಾಗಿ ಇಂದಿನ ತ್ಯಾಗ, ಎಂದು ದಿನಗಳನ್ನು ಎಣಿಸಿ ಕುಳಿತಿರುವ ನೀನು ಬಹು ಬುದ್ಧಿವಂತ ಎಂದು ಬುದ್ಧಿ ಹೇಳಿ ರೋಹಿಣಿಯ ಬಗಲಿಗೆ ಕೈ ಸೇರಿಸಿ ಮತ್ತಷ್ಟು ಹುರುಪಿನಿಂದ ಕಾಮ ರತಿಯರಂತೆ ಕುಣಿಯ ಹತ್ತಿದನು. ಘಂಟೆ ಗಟ್ಟಲೆ ಕುಣಿದನು. ನನಗೆ ನಟ್ಟ ಕಣ್ಣುಗಳಾಗುವರೆಗೂ ಕುಣಿದನು. ನನ್ನೆದೆ, ವಿರಹದಿಂದ ಬೆಂದಷ್ಟೂ ಅವನ ಕುಣಿತ ಕೇಕೆ, ಹಾಡು, ಇವು ಕಳೆಗೊಂಡವು. ಕೊನೆಗೆ ಮದವೇರಿದ ಚಂದ್ರಮನ ಕಣ್ಣಿಗೆ ಬಟ್ಟೆ ಕಟ್ಟುವಂತೆ ನನ್ನ ಕಿಟಕಿಯ ಕದವನ್ನು ಮುಚ್ಚಿ ಬಿಟ್ಟೆನು. ಆಗ ರೋಹಿಣಿಗೆ ಬಲು ಆನಂದವಾಯಿತು. ಬತ್ತಲೆಯಾಗಿ ಕುಣಿಯಲು, ನನ್ನ ಹೊರತು ಉಳಿದ ಜಗತ್ತು ಆನಂದದಿಂದ ನಿದ್ರಿಸುತ್ತಿತ್ತು. ಚಂದ್ರ ರೋಹಿಣಿಯರ ಮಧು ಚಂದ್ರನನ್ನು ನಾನೊಬ್ಬ ಈಪ್ಸಿತ ನಯನದಿಂದ ನೋಡುತ್ತಿದ್ದೆನು. ನಾನು ಕದ ಮುಚ್ಚಿದ ಮೇಲೆ ರೋಹಿಣಿ ಚಂದ್ರ ಇಬ್ಬರೇ ಉಳಿದರು. ಸ್ವಚ್ಛಂದ ಕ್ರೀಡೆಗೆ ಇದನ್ನೆಲ್ಲ ಇಷ್ಟು ಹೊತ್ತಿನವರೆಗೆ ಚಿತ್ರಗತವಾಗಿ ನೋಡುತ್ತಿದ್ದ ನನ್ನ ರೋಹಿಣಿಗೆ ಉಸಿರು ಬಂದಿತು. ಮೆಲ್ಲ ಮೆಲ್ಲನೆ ಮೆಲುನಗೆಯಾಡಲಾರಂಭಿಸಿದಳು. ಕೈಯ ಬಳೆಗಳನ್ನು ಮುಂದಳ್ಳಿ ತುಸು ಸದ್ದು ಮಾಡಿದಳು. ಈ ಸದ್ದು ನನ್ನ ಎದೆಯುರಿಗೆ ಮತ್ತಷ್ಟು ತುಪ್ಪವನ್ನು ಸುರಿಸಿತು. ಚಂದ್ರನೂ ರೋಹಿಣಿಯೂ ಅದೃಶ್ಯರಾಗಿ ಬಂದಿರುವರೆ ಎಂದು ದೀಪ ಹಿಡಿದು ಕೊಠಡಿಯ ಸುತ್ತೆಲ್ಲ ನೋಡಿದೆನು. ಇಲ್ಲ ಯಾರೂ ಇಲ್ಲ. ಹಾಗೆಯೇ ದೀಪವನ್ನು ಸ್ವಲ್ಪ ಮೇಲೆತ್ತಿ ನೋಡಿದೆನು, ನಗುತಿಹಳು ನನ್ನಾಕೆ. “ಇದೋ ಬನ್ನಿ ಬನ್ನಿ, ಚಂದ್ರಮನ ಮೇಲೇಕೆ ಸಿಟ್ಟು ರೋಹಿಣಿಯ ಕಂಡೇಕೆ ಕಣ್ಣುರಿ?” ಎಂದು ಕಣ್ಣಿನಲ್ಲಿ ಕರೆಯಲಾರಂಭಿಸಿದಳು, ನನ್ನ ಚಿತ್ರಗತ ಸಖಿ. ಎದೆಯುಬ್ಬಿತು. ಆದರೆ ಚಂದ್ರ ನನ್ನ ಕೋಪಕ್ಕೆ ಹೆದರಿಯೋ ಅಥವಾ ರೋಹಿಣಿಯಿಂದ ಜಿತನಾಗಿಯೋ ಮೇಲೆ ಮೇಲಕ್ಕೆ ಓಡುತ್ತಿದ್ದ. ರೋಹಿಣಿ ಅವನ ಮೇಲು ಸೆರಗಿನಲ್ಲಿ ಅವಿತು ಕೊಂಡಿದ್ದಳು. ಛಳಿಗೆ ಹೆದರಿ ನಾನು ವಿಜಯಗರ್ವದಿಂದ ನನ್ನ ಸಖಿಯು ಕಡೆಗೆ ತಿರುಗಿ ಅವಳ ಬಲಕ್ಕೆ ಬಾಗಿದೆ, ಅವಳ ಸ್ವರಕ್ಕೆ ನನ್ನ ಸ್ವರ ಕೂಡಿ, ಪೂರ‍್ಣೀ ಪರೀಕ್ಷೆಯನ್ನು ಬಿಟ್ಟು ಬಂದೆಯಾ? ಹೋಗಲಿ ಬಾ. ನಾಳೆ ನಮ್ಮದಲ್ಲ ಎಂದು ಬಿಗಿದಪ್ಪಲು ಕೈಗಳೆರಡನ್ನು ಅಗಲವಾಗಿ ತೆರೆದೆನು. ದೂರದಲ್ಲಿಯೇ ನಿಂತು ನಗುತ್ತ ನಾನಿನ್ನೂ ವ್ರತಧಾರಿ; ನನ್ನ ವ್ರತ ಮುಗಿಯಲು ಒಂದು ಮಾಸವಿದೆ. ನನ್ನನ್ನು ಮುಟ್ಟಬೇಡಿ, ಇಲ್ಲಿಂದಲೇ ನೋಡಿ ತೃಪ್ತಿ ಪಡೆಯರಿ ಎಂದು ಅಣಕವಾಡಿ ಪುನಃ ಚಿತ್ರಗತವಾಗಿ ಉಸಿರಿಲ್ಲದವಳಾಗಿ ಕೈ ಕಾಲು ಕಟ್ಟಿದ ಖೈದಿಯಂತೆ ಗಾಜಿನ ಚೌಕಟ್ಟಿನಲ್ಲಿ ಅಡಗಿಬಿಟ್ಟಳು. ನಿರ್ದಯಿ ಎಂದಾಕೆಯನ್ನು ಶಪಿಸಿ, ಶಪಿಸುತ್ತಲೇ ಇಡೀ ರಾತ್ರಿಯನ್ನು ಕಳೆದೆನು. ಇದು ನನ್ನ ರಾತ್ರಿಯ ವೈಭವ ಇಂತಿದೆ ನನ್ನ ರಾತ್ರಿಗಳು”

ಅಂದೇನು, ಈಗಲೂ ನನ್ನ ರಾತ್ರಿಯು ಅಂತೆಯೇ. ಆ ಪತ್ರದಲ್ಲಿ ಬರೆದಂತೆಯೇ ಇವೆ. ಆಗ ಸಹಿಸಿಕೊಳ್ಳಲು ಸಹನೆ ಈಗಿನಷ್ಟು ಬಂದಿರಲಿಲ್ಲ. ಈಗ ಬರತೊಡಗಿದೆ; ನಿನಗೋ?

ಇತಿ ನಿನ್ನವನೇ,
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...