ಮನಸ್ಸಿನಾಳಕ್ಕೆ ಗಾಳ ಇಳಿಸಿ ಕಾಯುತ್ತ ಕೂತೆ
ಬಂದೀತು ಎಂದು ಕಥೆ, ಕಡೆಗೊಂದು ಮಿಡಿಗವಿತೆ.
ನಾ ಪಟ್ಟಕಷ್ಟ ಒಂದೊಂದನೇ ಕೆಳಕೆಡವಿ
ಮೆಟ್ಟಲಾಗಿಸಿ ಮೇಲೆ ಹತ್ತಿ ಕತ್ತಲ ಕಾಡು
ಕತ್ತಿಯಲಿ ಸವರಿ ಹೊರಬಂದ ಸಾಹಸ ನೆನೆದು
ರೋಮಾಂಚಗೊಂಡೆ. ಇದರೊಂದು ಆಸರೆ ಹಿಡಿದು
ಬಂದೀತು ಕಥೆ, ಕವಿತೆ ಎಂದು ಕಾದೇ ಕಾದೆ.
ಬರಲಿಲ್ಲ ಬಂತು ಸಣ್ಣಗೆ ಜೊಂಪು ತೂಕಡಿಕೆ !
ನಡುವೆ ಮೆಲ್ಲಗೆ ಎಲ್ಲೊ ಗಾಳವಲುಗಿತು. ಖುಷಿಗೆ
ಕೂಗಿ ಹಿಡಿದೆಳೆದೆ ಚುರುಕಾಗಿ ಗಾಳವ ಹೊರಗೆ.
ಬರಲಿಲ್ಲ ಭಾರ. ಬಲಬಿಟ್ಟು ಎಳೆದರೆ ಗಾಳ
ಬಂತು ಮೇಲಕ್ಕ ತುದಿಗಿತ್ತು ಕಾಗದಚೂರು
ಬಲು ಕುತೂಹಲದಿಂದ ಬಿಚ್ಚಿದೆ. ಕಾಗದದ ಒಳಗೆ ಬರೆದಿತ್ತು
‘ಸಾಹಸದ ಸೊಕ್ಕಿರಲಿ, ಮೊದಲು ಕಲಿ ಉಪಕಾರ ಸ್ಮರಣೆಯ ನಿಯತ್ತು.’
*****