ಟ್ರ್ಯಾಜಿಡಿಯ ಬಹಳ ಮುಖ್ಯವಾದ ಅಂಕವೆಂದರೆ ಆರನೆಯ ಅಂಕ.
ರಂಗಮಂಚದ ಪುನರುಜ್ಜೀವನ.
ವಿಗ್ಗು, ಡ್ರೆಸ್ಸುಗಳನ್ನು ಸರಿಮಾಡಿಕೊಳ್ಳುವುದು,
ಎದೆಗೆ ಚುಚ್ಚಿದ ಚೂರಿಯನ್ನು ಕೀಳುವುದು,
ಕತ್ತಿಗೆ ಬಿಗಿದ ನೇಣು ಹಗ್ಗತೆಗೆಯುವುದು,
ಪ್ರೇಕ್ಷಕರಿಗೆ ಮುಖ ತೋರಿಸಲೆಂದು
ನಾಟಕದಲ್ಲಿ ಬದುಕಿದವರೊಡನೆ ಸತ್ತರೂ ಎದ್ದು ನಿಲ್ಲುವುದು.
ಪ್ರೇಕ್ಷಕರಿಗೆ ನಾಯಕರ ವಂದನೆ
ಸತ್ತನಾಯಕಿ ತನ್ನ ಬಿಳಿಯ ಕೈಯನ್ನು
ಎದೆಯ ಗಾಯಕ್ಕೆ ಮರೆಯಾಗಿ ಇಟ್ಟುಕೊಳ್ಳುತ್ತಾಳೆ.
ನೇಣಿಗೆ ಸಿಕ್ಕ ಕೊರಳು ಬಾಗಿ ನಮಿಸುತ್ತದೆ.
ಪ್ರೇಕ್ಷಕರಿಗೆ ಎಲ್ಲರ ನಮಸ್ಕಾರ…
ದುಷ್ಟತನ ಸಭ್ಯತೆಯ ಕೈ ಹಿಡಿಯುತ್ತದೆ.
ಶೂಲಕ್ಕೇರಿದವನು ಕೊಂದವನ ನೋಡಿ ನಗುತ್ತಾನೆ.
ಕ್ರಾಂತಿಕಾರಿ, ಇಷ್ಟೂ ಕೋಪವಿಲ್ಲದೆ,
ನಿರಂಕುಶನ ಬಳಿ ಸಾರಿ ಬೆನ್ನ ಮೇಲೆ ಕೈ ಇಡುತ್ತಾನೆ.
ಚಿನ್ನದ ಬಣ್ಣದ ಚಪ್ಪಲಿ ಅನಂತತೆಯತ್ತ ಹೆಜ್ಜೆಹಾಕುತ್ತದೆ.
ಬೀಸುತಿರುವ ಕೈಯಲ್ಲಿನ ಹ್ಯಾಟು ನೀತಿಯನ್ನು ಗುಡಿಸಿಹಾಕುತ್ತದೆ.
ನಾಳೆ ಮತ್ತೆಹೊಸದಾಗಲು ಎಲ್ಲ ಸಿದ್ಧ.
ಮೂರು, ನಾಲ್ಕನೆಯ ಅಂಕದಲ್ಲಿ ಮೊದಲು ಸತ್ತವರೆಲ್ಲ
ಒಬ್ಬರ ಹಿಂದೊಬ್ಬರು ಸಾಲಾಗಿ ಬರುತ್ತಾರೆ.
ಇಷ್ಟೂ ಸುಳಿವಿಲ್ಲದಂತೆ ಮಾಯವಾಗಿದ್ದವರು
ಪವಾಡವೆಂಬಂತೆ ಕಾಣಿಸಿಕೊಳ್ಳುತ್ತಾರೆ.
ಈ ಕ್ಷಣಕ್ಕಾಗಿಯೇ ಅವರೆಲ್ಲ
ಕಾಸ್ಟ್ಯೂಮು ತೆಗೆಯದೆ ಮೇಕಪ್ಪು ಅಳಿಸದೆ
ತಾಳ್ಮೆಯಿಂದ ಕಾಯುತ್ತಾ ಮರೆಯಲ್ಲಿ ನಿಂತಿದ್ದರಲ್ಲ
ಅದು ನನ್ನ ಮನಸ್ಸನ್ನು ಕರಗಿಸಿಬಿಡುತ್ತದೆ.
ಪರದೆ ಇಳಿಯುತ್ತಾ
ಇನ್ನೇನು ನೆಲ ಮುಟ್ಟುವ ಮೊದಲು
ಕಣ್ಣಿಗೆ ಒಂದಿಷ್ಟು ಕಾಣುತ್ತದಲ್ಲ
ಅದು ನಿಜವಾದ ರಸಾನುಭವ :
ಉದುರಿದ ಹೂವೆತ್ತಿಕೊಳ್ಳಲು ಆತುರದಿಂದ ಚಾಚುವ ಕೈ,
ಬಿದ್ದ ಕತ್ತಿ ಎತ್ತಿಕೊಳ್ಳಲು ಚಾಚುವ ಇನ್ನೊಂದು ಕೈ.
ಅದೃಶ್ಯವಾದ ಮೂರನೆಯ ಕೈ
ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತದೆ
ನನ್ನ ಕತ್ತು ಹಿಸುಕುತ್ತದೆ.
*****
ಮೂ: ವಿಸ್ಲಾವ ಝ್ಯಿಂಬೋಸ್ಕ