೧೯೨೨ರಲ್ಲಿ ಪ್ರಕಟವಾದ “ದಿ ವೇಸ್ಟ ಲ್ಯಾಂಡ್” ಎಲಿಯಟ್ಗೆ ಅಪಾರ ಅಂತರಾಷ್ಟ್ರೀಯ ಮಟ್ಟದ ಪ್ರಸಿದ್ಧಿಯನ್ನು ತಂದುಕೊಟ್ಟ ಕೃತಿ. ೫ ವಿಭಾಗಗಳಲ್ಲಿ ವಿಸ್ತೃತವಾದ ಸಂಕೀರ್ಣ ಕವಿತೆ. ಮೊದಲ ಮಹಾಯುದ್ಧದ ಅವಧಿಯಲ್ಲಿನ ಯುದ್ಧದ ಕುರಿತ ಜಿಗುಪ್ಸೆ, ಭ್ರಮಾದೀನ ಬದುಕಿನ ಚಿತ್ರಣ ಕಟ್ಟಿಕೊಡುತ್ತದೆ. ದಂತಕಥೆಗಳ ಕೊಂಡಿಯೊಂದಿಗೆ ಬರಡು ಜೀವನದ ಹತಾಶೆ, ನೋವು, ಭಯ, ಒಣ ಬಯಕೆಗಳ ಸುತ್ತ ಹಣೆಯಲ್ಪಟ್ಟಿದೆ. ಅದರೊಂದಿಗೆ ಮಾನವ ಸಂಕುಲವನ್ನು ಹೊಸ ಆಶೋತ್ತರಗಳು ಬಯಕೆಗಳು ಕನಸುಗಳು ಹೇಗೆ ಕಾಡುತ್ತವೆ ಎಂಬುದನ್ನು ವಿಷದೀಕರಿಸುತ್ತದೆ. ಕವಿತೆ ಸಂಕೀರ್ಣ ಆದರೂ ಫ್ರೌಡಿಮೆಯಿಂದ, ಇಂಗಿತ ಉಲ್ಲೇಖಗಳಿಂದ, ವೈರುಧ್ಯಗಳ ಮೇಲಾಟಗಳಿಂದ ಕೆಲವೊಮ್ಮೆ ಓದುಗನನ್ನು ಇಲ್ಲವೇ ವಿಮರ್ಶಕ ಗೊಂದಲಕ್ಕೊಳಗಾಗಬಹುದು. ನಿಜವಾದ ಕಾವ್ಯದ ರಸಸ್ವಾಧಕ್ಕೆ ಭಂಗ ಉಂಟಾಗಬಹುದು. ವಿಮರ್ಶಕನ ಭೌದ್ದಿಕ ಸಾಮರ್‍ಥ್ಯದ ಮೇಲೆ ಕವಿತೆ ಆಳ ಅಗಲ ವ್ಯಕ್ತಗೊಳ್ಳುವುದು. ವೇಸ್ಟ್ ಲ್ಯಾಂಡ ಏಲಿಯಟ್ನ ಕವಿತಾ ಸಾಮರ್‍ಥ್ಯಕ್ಕೆ ಸವಾಲಾಗಿದೆ. ಜಾಗತಿಕ ನೆಲೆಯಲ್ಲಿ ಮಾನವನ ಸಂಕಷ್ಟಗಳು, ನೋವುಗಳು ಬಯಕೆಗಳು ಮೋಕ್ಷದ ಇಚ್ಛೆಗಳು ಹೀಗೆ ಎಲ್ಲವೂ ಕಾವ್ಯದ ಮೂಲಕ ಹೊರಹೊಮ್ಮಿದೆ. ನಂಬಿಕೆಯಿಲ್ಲದ ವಿಶ್ವಾಸಗಳಿಲ್ಲದ ಬದುಕಿನ ಬರಡುತನವನ್ನು ನಿರಸತೆಯನ್ನು ಪ್ರಸ್ತುತಪಡಿಸುತ್ತದೆ. ಕಾವ್ಯದ ಹೆಸರೇ ಸೂಚಿಸುವಂತೆ ಅದೊಂದು ಬಂಜರು. ಮೊದಲ ಭಾಗದಲ್ಲಿ “ದಿ ಬರಿಯಲ್ ಆಫ್ ದಿ ಡೆಡ್” ನಲ್ಲಿ ಕವಿ ಆಧುನಿಕ ಜಗತ್ತಿನ ಸಾವಿನ ದಾರಿಯನ್ನು ಹಲವಾರು ಪ್ರತಿಮೆಗಳ ಮೂಲಕ ಚಿತ್ರಿಸುತ್ತಾನೆ. ಬದುಕಿನ ತಳಮಳ ಹೊಸ ಜೀವನದ ಉಮ್ಮಳ ನೋವುಗಳನ್ನು ಅಕಾಲಿಕ ಬೇಸಿಗೆಯ ಮಳೆ ಹೇಗೆ ಲಿಲ್ಯಾಕ್ ಹೂವಿನ ದಾರುಣ ಸಾವಿಗೆ ಕಾರಣವಾಯಿತು ಎಂಬುದರೊಂದಿಗೆ ಪ್ರಾರಂಭಿಸುತ್ತಾನೆ. ಆಧುನಿಕಲೋಕದ ಸಾವಿನ ಹಂದರದೊಳಗಿನ ಬದುಕನ್ನು ಪ್ರತಿಮೆಗಳ ಮೂಲಕವೇ ತೆರೆದಿಡುತ್ತಾನೆ. ಪ್ರಾಪಂಚಿಕನಾದ ಕುಡುಕ ಯುವಕ ಹಾಗೂ ಮೇರಿ ಅವರ ಪ್ರೀತಿಯ ಡೋಲಾಯಮಾನ ಸ್ಥಿತಿ, ಅವರ ಸಂಭಾಷಣೆ, ಯಾಂತ್ರಿಕ ಬದುಕಿನಲ್ಲಿ ದುರ್‍ದೆಸೆಗಳ ಕಡಿಮೆ ಮಾಡಿಕೊಳ್ಳಲು ಆಗದ ಸ್ಥಿತಿಗತಿ, ಸಾವಿನ ಸಂಕೇತಗಳು ಹೀಗೆ. ಆ ಯುವಕ ಮತ್ತು ಆಕೆ ಮೇರಿ ಪ್ರಾಪಂಚಿಕ ಬದುಕಿನ ಎಲ್ಲ ವ್ಯಸನಗಳಿಗೆ ದ್ಯೋತಕವಾಗಿ ನಿಲ್ಲುತ್ತಾರೆ. ಅದಕ್ಕೆ ಸಂವಾದಿಯಾಗಿ Hyacinth ಹುಡುಗಿಯ ಅನುಭಾವಿ ಪ್ರೇಮ, ದೈವಿಕ ಪ್ರೇಮ. ಟ್ರಿಸ್ಥಾನ್ ಮತ್ತು ಐಸೋಲ್ಡ್ ಶುಧ್ಧ ಪ್ರೇಮದ ಉತ್ಕಟತೆ ಅಮರ ಪ್ರೇಮಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ.
ಎರಡನೆಯ ಭಾಗ “ಗೇಮ ಆಫ್ ಚೆಸ್”ದಲ್ಲಿ ಹೊಲಸು ವಾಸ್ತವಿಕತೆ ಸದಾ ಅರ್ಥಪೂರ್ಣ ಭೂತಕಾಲದ ಜೊತೆಗೆ ಇರುವುದು. ಪ್ರೇಮರಾಹಿತ್ಯದ ಆಧುನಿಕ ಜೀವನ ಶ್ರೀಮಂತ ಹೆಣ್ಣು ಹಾಗೂ ಕೆಲಸಗಾರ ಹುಡುಗಿಯ ಬದುಕು ತುಲನೆಗೆ ಒಡ್ಡುತ್ತವೆ. ಇತಿಹಾಸ ಕ್ಲೀಯೋಪಾತ್ರ ಆಕೆಯ ಮೋಹ ಹಾಗೂ ಆಂಗ್ಲ ದಂತಕಥೆಗಳಲ್ಲಿ ಕಾಣುವ ದುರಂತ ಬದುಕಿನ ಫಿಲೊಮೆಲ್ ನಮ್ಮ ಮುಂದೆ ತಂದು ನಿಲ್ಲಿಸುತ್ತಾನೆ ಏಲಿಯಟ್. ಗತ ಕಾಲದ ಜೀವನ ವಿಧಾನದಲ್ಲಿ ಮೋಹದ ಪರಾಕಾಷ್ಟೆ ಇತ್ತು. ಅಲ್ಲಿ ಪ್ರೀತಿಯ ವೈಭೋಗವಿತ್ತು. ಆದರೆ ಈಗಿನಂತೆ ಭಯ ಮತ್ತು ವಿಷಾದತೆ, ಉಪೇಕ್ಷೆಗಳು ಇರಲಿಲ್ಲ ಎಂಬುದನ್ನು ಕವಿಗೆ ಹೇಳಬೇಕಾಗಿತ್ತು. ಇಂದಿನ ಬದುಕು ಆಧುನಿಕತೆಯ ಚಪ್ಪರದೊಳಗೆ ನಿಷ್ರ್ಕೀಯ ಸಂವೇದನೆಗಳ ಸಂಬಂಧಗಳ ಗಣಿಯಾಗುತ್ತಿದೆ.
ಮೂರು ನಾಲ್ಕು ಐದನೇ ಭಾಗದಲ್ಲಿ ಕವಿ ಬೆಂಕಿ ನೀರು ಆಕಾಶಗಳನ್ನು ಪ್ರತಿಮೆಗಳನ್ನಾಗಿ ಬಳಸಿಕೊಳ್ಳುತ್ತಾನೆ. “ದಿ ಫೈರ್ ಸೆರಮನ್”ನಲ್ಲಿ ವೊರ್‍ಚೆಸ್ಟರ್ ಪುತ್ರಿಯರ ವೈವಾಹಿಕ ಬದುಕನ್ನು ಅದಕ್ಕೆ ವಿರುದ್ಧವಾಗಿ ಟೈಪಿಸ್ಟನ ಹಾಗೂ ಥೇಮ್ಸ ಪುತ್ರಿಯರ ಯಾಂತ್ರಿಕ ಪ್ರೀತಿಯನ್ನು ತುಲನೆ ಮಾಡುತ್ತಾನೆ. ಇಲ್ಲಿ ಕಾಲ ಥೇಮ್ಸ್ ನದಿಯನ್ನು ಸಂಕೇತಿಸುತ್ತದೆ. ಇಲ್ಲಿಯ ಪ್ರಮುಖ ಕಾವ್ಯ ಪ್ರತಿಮೆ ಎಂದರೆ ಅದು ಬೆಂಕಿ. ಆಸೆಯೆಂಬ ಬೆಂಕಿ ಹೇಗೆ ವಿದ್ವಂಷಕ್ಕೆ ಕಾರಣ ಎಂಬುದನ್ನು ಹೇಳಬೇಕಿತ್ತು. ಹಾಗಾಗಿ ಬುದ್ಧ ತನ್ನ ಶಿಷ್ಯರಿಗೆ ಆಸೆಯ ಬೆಂಕಿಯನ್ನು ಹುಡುಕಿ ತರುವಂತೆ ಹೇಳುತ್ತಾನೆ. ಕೊನೆಯಲ್ಲಿ ವಿಧ್ವಂಷಕ ಪ್ರೀತಿಗೆ ಉಪಕ್ರಮ ಪ್ರತ್ಯೌಷಧವಾಗಿ ಪ್ರೀತಿಯೆಂಬ ಉಜ್ವಲ ಬೆಂಕಿಯನ್ನು ಬುದ್ಧ ಮತ್ತು ಸೇಂಟ್ ಆಗಸ್ಟೀನ್ ಬೋಧಿಸುತ್ತಾರೆ. ಇಬ್ಬರೂ ಮೋಹವನ್ನು ನಿರಾಕರಿಸಿ, ಆತ್ಮೋನ್ನತಿಗೆ ದೈವಿ ಪ್ರೀತಿಯ ಅಗತ್ಯತೆಯನ್ನು ಪ್ರತಿಪಾದಿಸುತ್ತಾರೆ.
ನಾಲ್ಕನೆಯ ಭಾಗ “ಡೆತ್ ಬೈ ವಾಟರ್”ದಲ್ಲಿ ನೀರಿನ ಎರಡು ಮುಖಗಳನ್ನು ತೆರೆದಿಡುತ್ತದೆ. ಅದು ಬದುಕು ಹೌದು ಸಾವು ಹೌದು. ನೀರು ಬದುಕಿನ ಚಕ್ರಕ್ಕೆ ಸಂಕೇತ. ಉತ್ತೇಜನದ ಪ್ರೇರಕ. ಐದನೇ ಭಾಗದಲ್ಲಿ ಮೂರು ಸಂಗತಿಗಳ ಎತ್ತಿ ತೋರುತ್ತಾನೆ. ಅದು ದಾನ ನೀಡು, ಕರುಣೆ ತೋರು ಮತ್ತು ನಿಯಂತ್ರಿಸು. ಕವನ ಭರವಸೆದಾಯಕವಾಗಿ “ಶಾಂತಿ” ಪದದೊಂದಿಗೆ ಮುಕ್ತಾಯ ಗೊಳ್ಳುತ್ತದೆ. ವೇಸ್ಟ ಲ್ಯಾಂಡ ದೃಶ್ಯಾವಳಿಗಳ ಸರಣಿ. ಅಲ್ಲಿ ಕಾವ್ಯವಸ್ತುವಾಗಲೀ, ನಾಯಕನಾಗಲೀ ಮುಖ್ಯವಲ್ಲ. ಮೊದಲ ಕೆಲವು ಸಾಲುಗಳು ಬದುಕಿನ ಉಮ್ಮಳತೆ, ನೋವಿಗೆ ಸಾಕ್ಷಿಯಾಗುತ್ತವೆ. ಬೇಸಿಗೆಯ ಬಿರುಗಾಳಿಗೆ ಮನಸ್ಸಿಲ್ಲದೇ ಧರೆಗುರುಳಿದ ಸುಂದರ ಲಿಲ್ಯಾಕ್ ಹೂಗಳು ಬಾಡಿವೆ.
ಇಲ್ಲಿ ರೆಟೋರಿಕಲ್ ಡಿಸ್‍ಕಂಟಿನ್ಯೂಯಿಟಿ ತತ್ವವು ಪ್ರತಿಪಾದಿಸಲ್ಪಟ್ಟಿದೆ. ೨೦ ನೇ ಶತಮಾನದ ಪಾಶ್ಚಾತ್ಯ ಶ್ರೀಮಂತ ಆಧುನಿಕ ನಗರಗಳ ಭೋಗಲಾಲಸೆಯ ಸಂಸ್ಕೃತಿಗೆ ದೃಷ್ಟಾಂತವಾಗಿ ನಿಲ್ಲುತ್ತದೆ. ಬದುಕಿನ ಗುರಿ ಉದ್ದೇಶಗಳ ಜೊತೆಗೆ ಗೊಂದಲಗಳ ಗೂಡನ್ನು ಕಟ್ಟಿಕೊಂಡ ಆಧುನಿಕ ಪಟ್ಟಣಗಳ ಬದುಕು ಅದಕ್ಕೆ ವಿರುದ್ಧವಾಗಿ ಶಾಶ್ವತ, ಸುಂದರ ಪಾರಂಪಾರಿಕ ನಗರ ಜೀವನ ನಡುವಿನ ವೆತ್ಯಾಸಗಳ ಗುರುತಿಸುತ್ತ ಸಾಂಪ್ರದಾಯಿಕ ಬದುಕಿನ ಸಾರವನ್ನು ಎತ್ತಿಹೇಳುತ್ತದೆ.
ಕವಿತೆಯ ಮುಖ್ಯ ಆಕರ್ಷಣೆ ಎಂದರೆ ಕವಿತೆ ಒಂದೇ ವಿಷಯದ ಭಿನ್ನ ಮುಖಗಳ, ವೈರುಧ್ಯಗಳ ಪೊರೆಗಳನ್ನು ಬಿಚ್ಚುತ್ತಾ ಹೋಗುತ್ತದೆ. ಹಾಗೆಂದು ಬರೀಯ ಮೌಲ್ಯ ಕಳೆದುಕೊಂಡ ವಾಸ್ತವಿಕ ಪ್ರಸ್ತುತತೆ ಮತ್ತು ಆದರ್ಶಪ್ರಾಯವಾದ ಭೂತಕಾಲದ ನಡುವಿನ ವಿಭಿನ್ನತೆಗಳನ್ನು ಮಾತ್ರ ಕಟ್ಟಿಕೊಡುವುದಿಲ್ಲ. ಬದಲಿಗೆ ಕಲುಷಿತ ಕಲ್ಪನೆಗಳಿಗೂ ಜಾಗೃತಿ ಮೂಡಿಸುತ್ತದೆ. ನೈತಿಕ ಪರಿಶುದ್ಧತೆ ಮಹತ್ವ ಮತ್ತು ನೈತಿಕ ಅಧಃಪತನಗಳ ಹೀನಾಯ ಸ್ಥಿತಿಯತ್ತ ಕಣ್ಣುತೆರೆಸುತ್ತದೆ. ಮೂಲ ಕವಿತೆ ೮೦೦ ಸಾಲುಗಳಲ್ಲಿ ಬರೆಯಲ್ಪಟ್ಟಿದ್ದು ಎಜ್ರ ಪೌಂಡನ ಸಲಹೆಯಂತೆ ಏಲಿಯಟ್ ಅದನ್ನು ೪೩೩ ಸಾಲುಗಳಿಗೆ ಮಿತಿಗೊಳಿಸಿದನಂತೆ.
ಎಲಿಯಟ್ ಅಮೇರಿಕಾದ ಸೇಂಟ್ ಲೂಯಿಸ್ ಮಿಸ್ಸೋರಿಯಲ್ಲಿ ಜನಿಸಿದ ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದ್ದ ಸೇಂಟ ಲೂಯಿಸ ಮತ್ತು ಮಿಲ್ಟನ್ ಅಕಾಡೆಮಿಗಳಲ್ಲಿ ವಿದ್ಯಾಭ್ಯಾಸ ಪೂರೈಸಿ ಮುಂದಿನ ಶಿಕ್ಷಣಕ್ಕಾಗಿ ಹಾವರ್ಡ ವಿಶ್ವವಿದ್ಯಾಲಯಕ್ಕೆ ಸೇರಿದಂದಿನಿಂದ ಸಾಹಿತ್ಯದ ಗೀಳು ಬೆಳೆಸಿಕೊಂಡ. ಇಪ್ಪತ್ತನೇಯ ಶತಮಾನದಲ್ಲಿ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ನಾಟಕ, ಕಾವ್ಯ, ಸಾಹಿತ್ಯ ವಿಮರ್‍ಷೆ ಹೀಗೆ ದಶಕಗಳ ಕಾಲ ಎಲಿಯಟ್ ತನ್ನ ಛಾಪು, ಪ್ರಭಾವ ಹೊಂದಿದ್ದ. ೧೯೪೮ರಲ್ಲಿ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿಯನ್ನು ಬಾಚಿಕೊಂಡ.
*****