ತಾವಾರು ಸ್ವಾಮಿ? ಈ
ಸಭಾಸ್ಥಳಕ್ಕೆ ಬಂದ ಕಾರ್ಯಾರ್ಥವೇನು ದೇವಾ?
ಪೇಳು ಪೇಳಯ್ಯಾ ದಿವ್ಯ ಪ್ರಭಾವಾ-
ಅಯ್ಯಾ ಸಾರಥಿ,
ಹೀಗೆ ಬರುವಂಥವನಾಗು
ಬಂದಾ ಪ್ರಭು.
ಬೈಟು Strong Coffee…
ಮತ್ತೂ ಹೀಗೆ ಬರುವಂಥವನಾಗು
ಹಾಗೇ ಒಂದು ಪ್ಯಾಕು ಚಾರ್‌ಮಿನಾರ್….
ಅಪ್ಪಣೆ ಪ್ರಭು.
ನಿನ್ನ ಇಷ್ಟಾರ್ಥವೇನು ಈಗ ಹೇಳಯ್ಯಾ ಭಾಗವತಾ
ನಾ ಬಲ್ಲೆ ನಿನ್ನ ಮನೋಗತಾ…
ಹಾಗಾದರೆ,
ಅಂಥವನೊಬ್ಬ ಇರುವುದಾದರೆ
ಇಂಥ ಪ್ರಶ್ನೆ ಕೇಳಬೇಕು ಯಾಕೆ?
ನನಗೇ ಗೊತ್ತಿಲ್ಲದ್ದು ಅವನಿಗೆ ಹೇಗೆ ತಿಳಿಯುತ್ತೆ?
Afterall ಅವನೂ ಇನ್ನೊಬ್ಬ ನನ್ನ ಹಾಗೇ ನಟ.
ಅವನ ಜೊತೆಯಲ್ಲಿ
ಕಾಫಿ ಕುಡಿಯುತ್ತಾ ಸಿಗರೇಟು ಸೇದುತ್ತಾ ಇರುವಾಗ
ಪ್ರಶ್ನೆ ಬರುತ್ತೆ-
ಮೋಡದ ಮಧ್ಯೆ ಖಾಲಿ ಇರುವ
ಆಕಾಶದ ಸ್ವಲ್ಪ ಜಾಗದಲ್ಲಿ
ಒಂದು ನಕ್ಷತ್ರ
ಎದ್ದು ಕಾಣುವ ಹಾಗೆ,
ನನಗೆ ಏನನ್ನಿಸುತ್ತೆ ಅಂತ ಯಾಕೆ
ಸ್ಪಷ್ಟವಾಗಿ ಗೊತ್ತಾಗಲ್ಲ ?
ಅಥವಾ
ಅನ್ನಿಸುವುದು ಏನಿದ್ದರೂ
ನನ್ನಲ್ಲೇ ಹೇಗೋ ಅನ್ನಿಸಿಬಿಟ್ಟು ಮುಗಿದು ಹೋಗಲು ಬಿಡದೆ
ಹೆಚ್ಚಾಗಿ ಬೇರೆಯವರಿಗೆ ತಿಳಿಯಲಿ ಅಂತಲೇ
ಅವರಿಗೆ ಅರ್ಥವಾಗುವ ಹಾಗೆ,
ಅವರು ಮೆಚ್ಚಿಕೊಳ್ಳುವ ಹಾಗೆ…
ಭೋಜನ ಕೂಟದಲ್ಲಿ ಟೇಬಲ್ಲಿನ ಮೇಲೆ
ಅಚ್ಚುಕಟ್ಟಾಗಿ ಅಡುಗೆ ಬಡಿಸಿಟ್ಟ ಹಾಗೆ…
ಮಾತಾಡಬೇಕು ಅನ್ನುವ
ತಳಮಳದಲ್ಲಿ ಅಸ್ಪಷ್ಟತೆ ಬರುತ್ತೋ? ಅಸಂಗತ ಆಗುತ್ತೋ?
ಮಾತಾಡದೆ ತಳಮಳ ಗೊತ್ತಾಗುವುದು ಹೇಗೆ?
ಅನ್ನಿಸಿದ್ದು ಮಾತಾಗುವುದಕ್ಕೆ ಮೊದಲೇ
ಬೇರೆಥರ ಅನ್ನಿಸುತ್ತಲ್ಲ?
ಅಮೀಬ ಆಗುತ್ತಲ್ಲ? ಮಾತಿನಗಿಡಕ್ಕೆ
ನಿಜದ ನೆಲ ಎಲ್ಲಿದೆ?
ನನಗೆ ಇನ್ನೊಬ್ಬರು ಬರೀ ಗೊತ್ತಾದರೆ ಸಾಲದು.
ಅವರ ಎದೆಯ ಒಳಗೆ
ರಕ್ತದ ಕೊನೆಯ ಹನಿಯ ಕೆಳಗೆ
ಅವರಿಗೂ ಗೊತ್ತಿಲ್ಲದ ಹಾಗೆ ಇರುವ
ಭಾವನೆಗಳ ರಹಸ್ಯಗಳು ನೋವುಗಳು
ನನ್ನ ಅಧೀನವಾಗಬೇಕು
ನಾನು ಎಲ್ಲರಿಗೂ ಅನಿವಾರ್ಯವಾಗಬೇಕು
ಎಲ್ಲರ ನಿಜವಾದ ಮಾತಾಗಬೇಕು.
ಏನೇನೋ ಜ್ಞಾಪಕ ಬರುತ್ತದೆ.
ಆದರೆ ಯಾವ ನೆನಪಿನಲ್ಲೂ ಆ ಮಾತು,
ಮಾತಿನ ನೆಲ ಸಿಗಲ್ಲ.
ಆ ಮಾತು
ಆ ನೆಲ
ಯಾವುದು? ಎಲ್ಲಿದೆ?
ಎಲ್ಲರಿಗೂ ಗೊತ್ತಿರುವ
ನನ್ನ ಮಾತು, ಅವರ ಮಾತು,
ಮೊದಲಿಂದ ಇದ್ದೂ
ಯಾವಾಗಲೂ ಇರುವ ಮಾತು
ದೇವರ ಮಾತು, ದೇಶದ ಮಾತು
ನಿಜವಾದ ಮಾತು, ಅದನ್ನೆಲ್ಲ
ನಿಜ ಮಾಡುವ ನೆಲ
ಎಲ್ಲರ ಹಾಗೆ ನಾನೂ ಹುಡುಕುತ್ತಿದ್ದೇನೆ
(ಬೇಕಾದರೆ) ನೀವೂ ಬನ್ನಿ.
ಹುಡುಕುತ್ತೇವೆ ಎಂಬುದೂ ಭ್ರಮೆಯೋ ? ಏನೂ
ಮಾಡದೆ ಇರುವುದಕ್ಕೆ ನೆಪವೊ ?
ಈಈ
ಇಲ್ಲಿ ಸಮೃದ್ಧ ಸಸ್ಯಶ್ಯಾಮಲ
ಕಂದರಗಳಿವೆ. ಭವ್ಯ ನಾಗರಿಕತೆಯ
ಸಂಸ್ಕೃತಿಯ ಕೋಟ್ಯನುಕೋಟಿ
ಅಸ್ಥಿಪಂಜರಗಳನ್ನು ಈ
ಕತ್ತಲ ಕಣಿವೆಯಲ್ಲಿ ನೀವು
ಹೆಜ್ಜೆ ಹೆಜ್ಜೆಗೂ ಎಡವುತ್ತೀರಿ. ಹುಷಾರಾಗಿ ಬನ್ನಿ.
ಬನ್ನಿ.
ಇದು,
ಅಪರಂಪಾರ ಪಾರಾವಾರಿಧಿಯ ಪರಿಧಿ: ನೋಡಿ
ಸಮುದ್ರದ ದಡದಲ್ಲಿ
ಮರಳ ರಾಶಿ ಇದೆ.
ಅಂಥವರೇ ನಾವು ಇದ್ದೇವೆ,
ನಮಗೆ ಯಾವುದೂ ಭಯ ಇಲ್ಲ.
ಮರಳಿಗೆ ಸಮುದ್ರದ ಭಯವಿಲ್ಲ.
ಅಗೋ ಆ ದ್ವೀಪದ ಹತ್ತಿರ,
ಇಲ್ಲಿ ಬಂಡೆಗಳ ಹತ್ತಿರ,
ಆ ಹಳೆಯ ದೇವಸ್ಥಾನದ ಹತ್ತಿರ,
ನೀವು ಎಲ್ಲಾದರೂ ಹೋಗಿ
ಅಲೆ ಅಲೆ ಏಳುವ, ಮುರಿಯುವ, ಆರ್ಭಟಿಸುವ, ನೊರೆನೊರೆ
ಸುಮ್ಮನೆ
ಇರುವ ಸಮುದ್ರ
ಅವತ್ತಿನಿಂದ ಒಂದೇಸಮನೆ
ಇವತ್ತಿನವರೆಗೂ ಬೇಜಾರಿಲ್ಲದೆ
ಒಂದೇ ಗಂಭೀರ ಸಂಗೀತ ಹಾಡುತ್ತಿದೆ,
ಆ ಹಾಡಿಗೆ ಯಾರು ಯಾರು ಯಾರು
ಏನು ಏನೋ ಅರ್ಥಮಾಡುತ್ತಾರೆ,
ನನಗೆ ಕೆಲವು ಸಾರಿ ಸಾವು ಸಾವು ಅಂತ ಕೇಳಿಸುತ್ತೆ,
ಕೆಲವು ಸಾರಿ ಬೇಸರ ಬೇಸರ ಅನ್ನಿಸುತ್ತೆ,
ಕೆಲವು ಸಾರಿ ಅರ್ಥಗಳನ್ನೆಲ್ಲ ಒಳಗೊಂಡ ಯಾವುದೋ ಗೊತ್ತಾಗದ್ದು…
ಬೀಸುವ ತೆಂಗಿನ ಮರಗಳೂ, ಗರಿಗಳೂ,
ಸಮುದ್ರದ ಮೇಲೆ ಹಾರುವ ಪುಟಾಣಿ ಹಕ್ಕಿಗಳೂ, ಕಾಗೆಗಳೂ,
ಅದನ್ನೇ ಹೇಳುತ್ತವೆ.
ಹೆಣ್ಣಿನ ನಗು,
ಮಧ್ಯರಾತ್ರಿಯ ಬೊಗಳುವ ನಾಯಿ,
ಅಳುವ ಮಗು
ಎಲ್ಲಾ ಅದನ್ನೇ ಹೇಳುತ್ತವೆ.
ಕೊನೆಗೆ ಅಲ್ಲಿರುವ ಬಂಡೆ ಕೂಡ.
ಆದರೆ ನಮಗೆ ಭಯ ಇಲ್ಲ.
ನಮಗೆ ಕೊನೆ ಇಲ್ಲ.
ಅನಾದಿ ಅನಂತ ಅಗಣ್ಯ…
ಮರಳಿನ ಹಾಗೆ, ತಲೆ ಕೂದಲ ಹಾಗೆ,
ನಮ್ಮ ಅನ್ನಿಸಿಕೆಗಳ ಜೊತೆ ಭಾವನೆಗಳ ಜೊತೆ
ಚಿಂತೆಗಳ ಜೊತೆ ತುಂಬ ಚೆನ್ನಾಗಿ ಹೊಂದಿಕೊಂಡು ಬಿಟ್ಟಿದ್ದೇವೆ.
ಸಂಜೆ ಹೊತ್ತು
ಫ್ಯಾಕ್ಟರಿಗಳಿಂದ ಸಿನಿಮಾಗಳಿಂದ ಕ್ಲಬ್ಬುಗಳಿಂದ
ಗಿಜಿ ಗಿಜಿ ಗಿಜಿ ಜನ
ಅಭ್ಯಾಸವಾದ ರಸ್ತೆಯ ಮೇಲೆ
ಅಭ್ಯಾಸವಾದ ಹೆಜ್ಜೆ ಹಾಕುತ್ತಾ
ಮರಳುಗಾಡಿನ ಮರಳನ್ನೆಲ್ಲ ತಮ್ಮ ಎದೆಯಲ್ಲಿ ಹೊತ್ತಿರುವುದನ್ನು ಮರೆತು
ಟ್ರಾನ್ಸಿಸ್ಟರಿನ ಹಾಡು ಕೇಳುತ್ತಾ
ದಾರಿ ಪಕ್ಕದ ತಿಂಡಿ ವಾಸನೆಗೆ
ಸಂತೋಷವಾಗಿದ್ದೇವೆ ಅಂದುಕೊಂಡು
ಒಬ್ಬರು ಹೊರಬಿಟ್ಟ ಬಿಸಿ ಉಸಿರು
ಇನ್ನೊಬ್ಬರು ಒಳಗೆಳೆದುಕೊಳ್ಳುತ್ತಾ
ನಡೆಯುತ್ತೇವೆ.
ಆಕಾಶವಾಣಿಯ ಸುವಾರ್ತೆ
ಪೇಪರಿನ ಸಾಪ್ತಾಹಿಕ ಪುರವಣಿ
ಪ್ರಾಯೋಗಿಕ ಸಿನಿಮಾ
ನಮ್ಮ ಭವ್ಯ ಭವಿಷತ್ತಿನ ಭದ್ರ ಬುನಾದಿ
“ಸಾರ್, ನಮಸ್ಕಾರಾಸಾರ್. ನಾನು ಸಾರ್.
ಹಾಗೇ ತಮ್ಮನ್ನು ನೋಡಿಕೊಂಡು ಹೋಗಣ ಅಂತ ಬಂದೆ ಸಾರ್.
ನಮಗಂತೂ ತುಂಬಾ ಹೆಮ್ಮೆ ಸಾರ್.
ನಮ್ಮ ಜನದಲ್ಲೇ ತಮ್ಮ ಹಾಗೆ ಯಾರೂ ಹೆಸರುಗಳಿಸಲಿಲ್ಲ ಸಾರ್.
ತಾವು ನಮಗೆ ಒಂದು ಮಾತು ತಿಳಿಸಬೇಕಾಗಿತ್ತು ಸಾರ್.
ಮಂತ್ರಿಗಳು ನಮಗೆ ತುಂಬಾ ಬೇಕಾದವರು ಸಾರ್.
ಇವತ್ತು ರಾತ್ರಿ ಅವರು ನಮ್ಮ ಬಾರ್‌ಗೆ ಬರತಾರೆ.
(ತಾವೂ ಬನ್ನಿ) ಸಾರ್”…
ಆ
ಕಳಿಕೆ
ನೆಲಮಾಳಿಗೆಯ ಉಗ್ರಾಣದಿಂದ,
ಮುರಿದ ಬೀರ್ ಬಾಟಲುಗಳ ಮಧ್ಯದಿಂದ
ಬರಿಮೈ ಹೆಂಗಸರ ಚಿತ್ರಗಳ ನಡುವಿನಿಂದ,
ಚಿರಪರಿಚಿತ ಮಾತುಗಳ ದಿವ್ಯ ಸಾನ್ನಿಧ್ಯನಿಂದ
ಎದ್ದು ಬರುವ ಮನಸ್ಸಿಲ್ಲ.
All is right with the world. ನಾವು ಸುಖವಾಗಿದ್ದೇವೆ.
ಲೋಕಾಸ್ಸಮಸ್ತಾ ಸ್ಸುಖಿನೋಭವಂತು!
ಎಂಥ ಮುತ್ತಿನಂಥ ಮಾತು!
ಅಲ್ಲಿ ಕಾಣುತ್ತದಾ, ಬಂಡೆಯ ಬಿರುಕಿನ ನಡುವೆ ಇರುವ ಹಳದಿ ಹೂವು,
ಅನಾದಿಕಾಲದಿಂದ ಇದೆ.
ವೇದಗಳಲ್ಲಿ ಅದರ ಉಲ್ಲೇಖ ಇದೆ.
ವಿಶ್ವಕೋಶದಲ್ಲಿ ಅದರ ಮೇಲೆ ಲೇಖನ ಇದೆ.
ಅದರ ಹೆಸರು,
ಅದೇನೋ ಮರೆತಿದೆ, ಯಾವಾಗಲಾದರೂ
ನೋಡಿ ಹೇಳುತ್ತೇನೆ.
ಯಾವಾಗಲೋ
ನಮಗೆ ಯಾರಿಗೂ ಗೊತ್ತಿಲ್ಲದ ಹಾಗೆ
ಬಿಳೀ ಮೋಡ ದಟ್ಟವಾಗಿ
ನೇರಳೆಯಾಗಿ ಕಾಮನಬಿಲ್ಲು ಬಂದಿರುತ್ತದೆ.
ಇದ್ದಕ್ಕಿದ್ದ ಹಾಗೆ ಎಲೆಗಳೆಲ್ಲ ಉದುರಿ
ನೆಲದ ಮೇಲೆ ಗಾಳಿಗೆ ಉರುಳುತ್ತವೆ.
ಅದು ಯಾಕೆ ಹಾಗೆಲ್ಲ ಆಗಬೇಕು?
ಹೀಗೆ ಯಾಕೆ ಆಗಬಾರದು?
ಅದರ ಪಾಡಿಗೆ ಅದು ಇರುತ್ತೆ.
ಇನ್ನೂ ಏನೇನೋ ಇದೆ. ಯಾರಿಗೆ ಗೊತ್ತು.
ನಮ್ಮ ಪಾಡಿಗೆ ನಾವು ಇರುತ್ತೇವೆ.
“ಅರಿವಾಸೆಯೆ ಮಾಯಾ ಬಂಧ
ಇರುವುದೆ ಮುಕ್ತಿಯ ಆನಂದ
ಅರಿವಾಸೆಯ ಬಿಡು ಇರುವಾಸೆಯ ತೊಡು”
ಜೈ ಜೈ ಜೈ.
ಸುಮ್ಮನೆ ಇದ್ದು ನಿದ್ದೆ ಮಾಡುವ ಮೊಟ್ಟೆಗಳು.
ಒಳಗೆ ಒಳಗೇ
ನಾಲ್ಕು ಆರು ಹದಿನೆಂಟು ಆಗಿ
ಭಾಗಿಸಿ ಮತ್ತೆ ಭಾಗಿಸಿ
ವಿಶ್ಲೇಷಿಸಿ ಸಣ್ಣಗೋ
ಜೋರಾಗೋ
ನಮ್ಮ ಯೋಗ್ಯತೆಗೆ ತಕ್ಕ ಹಾಗೆ
ಕುದಿಯುತ್ತಿರುತ್ತೇವೆ.
ಬೋಳು ಸಮುದ್ರದ ಎದುರಿಗೆ
ನಾವೆಲ್ಲ ನೆರಳಿಗೆ ಬಾಯಾರುತ್ತೇವೆ.
ನಮಗೆ ಮಾತ್ರ ನೆರಳು ಬೇಕೇನೋ
ನೀರು ಬೇಕೇನೋ ಅನ್ನುವ ಹಾಗೆ
ನಮ್ಮನ್ನು ಮಾತ್ರ ಭೂತಗನ್ನಡಿಯಲ್ಲಿ ನೋಡಿಕೊಂಡು
ನಮ್ಮ ನಮ್ಮ ಗಾಯಗಳನ್ನು ನಾನೇ
ರಣಹದ್ದಿನ ಹಾಗೆ ಕುಕ್ಕಿಕೊಂಡು
ನಮ್ಮಂಥವರ, ಬೇರೆಯವರ ಕರುಣೆಯ ಭಿಕ್ಷೆಯಾಚಿಸುತ್ತಾ,
ಅವರಿಗೆ ನಾವು ದಾನಮಾಡುತ್ತಾ,
ನೋವಿನ ಹೆಮ್ಮೆಯಿಂದ ಬೀಗುತ್ತಾ ಇರುತ್ತೇವೆ.
ಜೀವನವೇ ಒಂದು ದೊಡ್ಡ ಗಾಯ,
ಅಹ! ಮುತ್ತಿನಂಥ ಮಾತು!
ನಮಗೆ ನೆರಳು ತಂದವರನ್ನೆಲ್ಲ
ಇಹಪರ ಸೌಖ್ಯಸಾಧನಕ್ಕಾಗಿ
ಕೊಂದು ಗೋಡೆಯ ಕ್ಯಾಲೆಂಡರು ಮಾಡಿಕೊಂಡಿದ್ದೇವೆ.
ಸಮುದ್ರ ಏನನ್ನೂ ಉಳಿಸಲ್ಲ.
ಆದರೂ ಯಾರಾದರೂ ಹೊಸದಾಗಿ ನೆರಳು ತರಲಿ
ತರಲಿ ಎಂದು ಸುಮ್ಮನೆ ಪ್ರಾರ್ಥನೆ ಮಾಡುವುದು.
ಈಈಈ
ಆಗ ಸಾಯಂಕಾಲ
ದೇವರ ಎದುರಿಗೆ
ನಾವು ಮೊದಲು ಮುತ್ತಿಟ್ಟಾಗ,
…ತಲೆಗೆ ಕನಕಾಂಬರ ಮುಡಿಸಿ…
ನಾವೇ ಹಿಮಾಲಯ
ಹಿಂದೂಸಾಗರ ಎಲ್ಲಾ ಆಗಿದ್ದು ನೆನಪಿದೆಯಾ?
ಉದ್ವೇಗದಲ್ಲಿ ಆಡಿದ
ಪ್ರೇಮದ ಮಾತು ನೆನಪಿದೆಯಾ?
ನ ಜಾತು ಕಾಮಃ ಕಾಮಾನುಪಭೋಗೇನ ಶ್ಯಾಮತಿ.
ಈ ಹಾಳಾದ ಅಲೆಗಳು ಉರುಳುತ್ತ
ಉರುಳುತ್ತ ನೆನಪುಗಳು ಭಾವನೆಗಳು
ಹೂವಿನ ದಳಗಳ ಹಾಗೆ ಉದುರಿಹೋಗುತ್ತವೆ.
ನಾವು ಕುಳಿತ ರೈಲು ಕಂಬಿ ಹೇಗೆ ಬದಲಾಯಿಸುತ್ತೆ
ಅಂತ ನಮಗೆ ಗೊತ್ತೇ ಆಗಲ್ಲ.
ಅಲೆಗಳು ಉರುಳುತ್ತ ಉರುಳುತ್ತ
ನಮ್ಮ ಮುಖದ ಜಮೀನಿನ ಮೇಲೆ
ಕಾಲನ ನೇಗಿಲು ನಲವತ್ತು ಸಾರಿ ಉತ್ತಿರುತ್ತದೆ
ಇನ್ನೂ ಅಷ್ಟು ಸಾರಿ ಉಳುತ್ತದೆ.
ಯಾವುದನ್ನು ಮರೆಯಬಾರದಾಗಿತ್ತೋ
ಅದನ್ನು ಮರೆತು ಬಿಟ್ಟೆವು ಅಂತ ಆಗ ಅನ್ನಿಸುತ್ತೆ.
ಎಲ್ಲಾ ಅನುಭವಗಳು ತಿರುಗಿ ಇನ್ನೊಂದುಸಾರಿ
ಸರಿಯಾಗಿ ಆಗಲಿ ಅನ್ನಿಸುತ್ತೆ.
ಅವನು ಯಾರೋ ನೆರಳು ತರುತ್ತಾನಂತೆ
ಅವನನ್ನು ಕರೆಯೋಣ.
ಕರೆಯುವ ಮಾತು ಮುಂದಿನವರಿಗೆ ಹೇಳೋಣ.
ಮಧ್ಯೆ ಎಲ್ಲೂ ತುಂಡಾಗದ ಸಂಗೀತದ ಹಾಗೆ
ಅಖಂಡಿತವಾಗಿ ಬದುಕುವುದನ್ನು ಕಲಿಸು ಬಾ.
ನಮ್ಮ ದಿನಗಳನ್ನು ಸಿಗರೇಟಿನ ಹಾಗೆ ಸುಡುತ್ತಿರುವಾಗ,
ಪೋಲೀಸಿನವನು ಮಾತ್ರ ತೋರಿಸುವ ದಾರಿಗಳನ್ನು
ಗುರುತು ಹಿಡಿಯುತ್ತಿರುವಾಗ,
ಮಾತಿನ Trafic Light ಗಳ ನಡುವೆ
ಎಲ್ಲಿಗೆಂದು ತಿಳಿಯದೆ
ಗಂಟೆಗೆ ಎಪ್ಪತ್ತು ಮೈಲಿ ವೇಗದಲ್ಲಿ ಹಂಚಿಹೋಗುತ್ತಿರುವಾಗಲೇ
ನೀನು ಬರಬೇಕು,
ತಪ್ಪು ಮಾಡಿದಾಗ ಚರ್ಮ ಸುಲಿಯಲು ಚಾಟಿ ಹಿಡಿದು,
ಅತ್ತಾಗ ಕುಡಿಯಲು ಹಾಲು ಬಟ್ಟಲು ಹಿಡಿದು ಬಾ.
ಸರಿಯಾದ ಪ್ರಶ್ನೆ ಕೇಳಲು ಹೇಳಿಕೊಡು.
ಹಗಲಿನಲ್ಲಿ ಸಂಜೆಯಲ್ಲಿ ನಿದ್ರೆಯಲ್ಲಿ ಎಚ್ಚರದಲ್ಲಿ
ನಮ್ಮ ಕೆಲವರ ಮನಸ್ಸಿನಲ್ಲಾದರೂ
ಏನು ಅಂತ ಗೊತ್ತಾಗದೆ ಏನೋ ಇದೆ ಅನ್ನಿಸಿ
ಅಸ್ಪಷ್ಟವಾಗಿ ಭಯಂಕರವಾಗಿ ಒತ್ತುತ್ತಿರುವ ಮಾತನ್ನು
ಸ್ಪಷ್ಟವಾಗಿ Imprint ಮಾಡು.
ನಿನ್ನ ಗುರುತು ಹಿಡಿಯಲು ಸಮುದ್ರದ ಮೇಲೆ ನಡೆದು ಬಾ.
ಬರುವಾಗ ನಿನೇ ಶಿಲುಬೆಯಂಥಾದ್ದು ಏನಾದರೂ ಒಂದು ತಂದುಬಿಡು.
ನೀನು ಇರುವಾಗ ಇದು ನಂದನವನ ಆಗುತ್ತೆ.
ನಿನ್ನ ನಾವು ಕಳಿಸಿದ ಮೇಲೆ ಮತ್ತೆ ಮರಳು ಗಾಡು ಆಗುತ್ತೆ.
ಮತ್ತೆ ನಿನ್ನಂಥವನು ಇನ್ನೊಬ್ಬ ಬರುತ್ತಾನೆ.
ಆದರೆ ನಾವು ಮಾತ್ರ ಹೀಗೆ ಇರುತ್ತೇವೆ
ಹೋಗುತ್ತಾ
ಸಾಯಲ್ಲ ಅಂದುಕೊಳ್ಳುತ್ತಾ
ಸಾಯುತ್ತಾ
ಹುಡುಕುತ್ತಾ ಹುಡುಕುತ್ತಾ
ನಮ್ಮೊಳಗೆ ಕಳೆದದ್ದನ್ನು
ಹೊರಗೆ ಹುಡುಕುತ್ತಾ
ಸಿಕ್ಕಿದಾಗ ಮತ್ತೆ ಕಳೆದುಹಾಕುತ್ತಾ
ನಿನ್ನಂಥವರ ಕನಸು ಕಾಣುತ್ತಾ
Tomorrow to fresh woods & pastures new ಅಂದುಕೊಂಡು ಇಲ್ಲೇ ಹೀಗೇ ಇರುತ್ತೇವೆ.
ಈ ಸಭಾ ಸ್ಥಳಕ್ಕೆ ಬಂದ ಕಾರ್ಯಾರ್ಥವೇನು? ಏನು?
*****