ಕತ್ತಲು ಕೋಣೆಯಲಿ ಬೆಳಕಿನ ಅಕ್ಷರಗಳು
ಮೌನ ಆವರಣದಲ್ಲಿ ಮಾತುಗಳ ಶಬ್ಧಗಳು
ಕತ್ತಲು ಬೆಳಕು ಮೌನ ಮಾತು ಎಲ್ಲವೂ
ಒಂದೇ ನಾಣ್ಯವಾದಾಗ, ಹುಡುಕುವುದು ಏನನ್ನೂ
ಗಾಯಕ್ಕೆ, ಸವರಿದ ಮೂಲಾಮಿನ ತಣ್ಣನೆ ಸ್ಪರ್ಶ
ಮರದಲ್ಲಿ ಚಿಗುರಿದ ಹಸಿರು, ಯಾತನೆಯಲ್ಲಿ
ಸಾವಿನ ಖುಷಿ, ಎಲ್ಲವೂ ಮಾಂತ್ರಿಕ ವಿರುದ್ಧ
ಅರ್ಥಗಳು ಒಂದರಲ್ಲೊಂದು ಬೆಸೆದಾಗ.
ಹೂವಿನ ಮಕರಂದ ಹೀರಿದ
ಚಿಟ್ಟೆ ಜೇನಿದಾಗ ಮತ್ತೆ ಹುಟ್ಟು ಸಾವು
ಎಲ್ಲ ಮುಗಿಯುವುದಿಲ್ಲ ನಾನು ನೀನು
ದೂರ ಸರಿದಾಗ ಯಾಕೆಂದರೆ ಭಿನ್ನ ಸಂವೇದನೆಗಳು
ಒಂದನ್ನೊಂದು ಆಕರ್ಷಿಸುತ್ತದೆ.
ಯುದ್ಧ ನಡೆದು ರಕ್ತ ಪಾತ ಹರಿದರೂ
ನದಿಗಳು ತಪ್ಪಲಲ್ಲಿ ಹರಿಯುತ್ತವೆ.
ಸಮುದ್ರದಲೆಗಳು ಉಕ್ಕುತ್ತವೆ ಸಂಘರ್ಷದಲ್ಲಿ
ಎಲ್ಲವೂ ನನ್ನವು ಅಂದಾಗ ಅದೆಲ್ಲವೂ
ನಿನ್ನದಾಗಿರುತ್ತವೆ, ಮರ-ಚಿಗುರು-ಮೋಡ ಮಳೆ ಹುಟ್ಟು-ಸಾವು.
ಎಲ್ಲಾ ಶಬ್ಧಗಳು ನಿಶಬ್ಧಗಳಾಗಿ ಪರಿವರ್ತನೆ
ಹೊಂದಿದರೂ ದಿನದ ಬೆಳಗು ರಾತ್ರಿಯ ಕತ್ತಲೆ
ವಾಸ್ತವ ದಿಕ್ಕುಗಳು ಬೇರೆ ಬೇರೆ ಕಡೆ ಇದ್ದರೂ
ಕ್ಷಣ ಕ್ಷಣಕ್ಕೆ ಬದಲಾಗುವ ಜೀವರಾಶಿ ಚಿಗುರಿ
ಮುರುಟಿ ಹುಟ್ಟಿ-ಸತ್ತು ಬಿಂಬ ಪ್ರೀತಿ ಬಿಂಬಗಳಾಗಿ
ಲೋಕ ತೇಲಾಡುವುದು ವಿರೋಧಗಳ ಹುಟ್ಟಿನಲಿ.
*****