ಸಂತೆಯಲಿ ಕಿಷ್ಕಿಂದೆ ಯಾರಿದ್ದಾರೆ
ಯಾರಿಲ್ಲ ತುಳಿಸಿಕೊಂಡ ದಾರಿಯ
ಮೈಯಲ್ಲ ಗಾಯ ಮತ್ತು ತಲ್ಲಣಗಳು
ಸೋಜಿಗದ ವಾರೆ ನೋಟಗಳು
ತಕ್ಕಡಿ ಹಿಡಿದು ತೂಗುವರ ಕೈ ಸೋಲು.
ಬರುತ್ತಾರೆ ಎಲ್ಲರೂ ಈ ನೆಲದಲ್ಲಿ
ಕಾಲೂರಿ ವ್ಯಾಪಾರ ವಹಿವಾಟು
ವರ್ತಮಾನಕ್ಕೆ ಬೇಕು ಬೆಳಕಾದ ಇತಿಹಾಸ
ಶಕ್ತಿ ಇದ್ದವರು ಇಲ್ಲದವರು ಅವರವರೇ
ನಡೆಯುವ ತ್ರಾಣ ರಂಗದಲಿ ಬರೀ ಗೌಜು.
ಬೀಜಕ್ಕಳಿದ ಆಕಾಶದ ಹನಿ
ಬೆಟ್ಟವಿಳಿದು ಬಂದ ಗಾಳಿ ಬಲದಂಡೆ
ಹರಿಯುವ ನದಿ ಮೈ ಮರೆತು ಕ್ರಿಯೆ
ಕ್ಷಣಕ್ಕೆ ಕದ ಝಣಝಣ ಹಣ ಹರಿವು
ಹರಿದ ಮಾತುಗಳು ಅರ್ಥದಲಿ ಪರಾಭವ.
ಎಲ್ಲೆಲ್ಲೋ ಹುಟ್ಟಿದ ಭಾವ ಹರಿದು ಬಂದ
ಸಾಗಿ ಬಂದ ದಾರಿಯೇರು ಕರ್ಮಕ್ಕೆ ಕೆಲಸ
ಮುಟ್ಟಲಾಗದ ಹಿಮಾಲಯ ಎತ್ತರ
ಗುಡಿಸಲ ಮುಂದೆ ತೇಲಿದ ಕಂದೀಲು
ಕಾರುಬಾರು ಮಣ್ಣ ಮಡಿಕೆ ತುಂಬ ಬೀಜಗಳು.
ಕಾಯುವ ಕಳವಳಿಸುವ ನೋಯುವ
ಲೋಕಾಲೋಕ ತುದಿಗಾಲಲಿ ನಿಂತು
ಮಂತ್ರ-ತಂತ್ರ ಯುದ್ಧಗಳ ಮೇಳ
ಆಟಿಕೆ ಹೂಡಿದದಾಳ ಮುಗ್ಗರಿಸಿದ ಹೊಸಿಲು
ಚಿಂತೆ ಕಲಿಸಿದ ಆಧುನಿಕ ಪರಾಭವ
ಯಾರಿಗೂ ಯಾರೂ ಗೊತ್ತಿಲ್ಲ ಶಬ್ದಗಳ ಸಂತೆಯಲಿ.
*****