ಕರ್ಣಬಂದು ಕರ್ಬಲದಲಿ ಪಾರ್ಥಾ
ವರ್ನಕಂಡು ಕದನಕ ನಿಂತ ಸು- ||ಪ||
ವರ್ಣಪೀಠ ಮದೀನ ಶಾರದಿ
ಪರ್ವ ಅಶ್ವನೇರಿದನೆಂತು ||ಅ.ಪ.||
ಭಾಪುರೆ ಅರ್ಜುನ ತಪ್ಪಿಸಿ ಹರಿತ
ವರ್ನ ಕೋಪ ತಿಳಿ ಕುರುಕ್ಷೇತ್ರದಲಿ
ಭಾಪುರೆ ನಿನ್ನನು ಹುಡಕುತ ಬಂದೆನು
ಛೇತಕಿ ಪಾತಕಿ ಕ್ಷತ್ರಿಯರಲ್ಲಿ ||೧||
ಹಸೇನಿ ಹುಸೇನಿ ಎರಡರ ಮಧ್ಯದಿ
ಬಂದು ಸಿಕ್ಕಿಯೋ ಸಮರದಲಿ
ಸಮ್ಮುಖದಿ ಕೇಶವನ ಸಹಾಯಕೆ
ಬಂದನು ಏಕಕಾಲದಲ್ಲಿ || ೨ ||
ಹ್ಯಾಂಗ ಮರಣ ತರಬೇಕೆನುತಲಿ ಹರಿ
ಬ್ಯಾಗ ಬ್ರಾಹ್ಮಣನ ರೂಪಾಗಿ
ಆಗ ಬಾಕಿಲಿಂದ ಬಗಿದು ಚಲ್ಲಿದನು
ಆರ್ಜುನ ಶರದಿ || ೩ ||
ವಸುಧಿಯೊಳಗ ಹೊಸದಾದ ರಿವಾಯತ
ಕರ್ಣಪರ್ವ ಐಸುರದಿ
ರಸಿಕರೆಲ್ಲರು ಕರ್ಬಲದಾಟಕ
ದಶದಿನ ಹಾಡಿರಿ ಸಂತೋಷದಿ
ಉಸುರಿದ ಮೊಹರಮ್ಮ ಹಬ್ಬದೊಳಗೆ
ಶಿಶುನಾಳಧೀಶನ ಹೆಸರುಗೊಂಡು ಪೇಳರಿ ಮುದದಿ ||೪|
*****