ಜಾರತ ಕರ್ಮವು ತೀರಿದ ಬಳಿಕ
ಆರಿಲ್ಲದೋಯಿತು ಐಸುರ ಕೊಳಕ ||ಪ||
ಮಾರನೋಮಿಗೆ ಕೂಡಿ ಬಂದಿತು
ಆರಿಗ್ಹೇಳಲಿ ತೀರಲರಿಯದು
ಮೂರು ಪುರವನು ನಾಶಮಾಡಿತು
ಘೋರತರದಲಾವಿಯ ಹಬ್ಬ ||೧||
ಶುದ್ದಚಂದ್ರನ ಕಿರಣವು ಸೋಂಕಿ
ಎದ್ದು ಭೂಮಿಗೆ ಗುದ್ದಲಿ ಹಾಕಿ
ಸದ್ಯಕಿದು ವೇದಾಂತ ಶಾಸ್ತ್ರದ
ಮಧ್ಯದಲಿ ಹುಡಿಕ್ಯಾಡಿ ನೋಡಿಕೋ
ಬುದ್ಧಿವಂತರಿಗೆ ತಿಳಿಯತಕ್ಕದ್ದು
ಚೋದ್ಯವಾದಕ್ಷರ ಪದದಲಿ ||೨||
ಪಾಪಾತ್ಮರಿಗೆ ಫಕೀರನು ಖೋಡಿ
ಕೆಂಪು ಕರದು ಹಸಿರು ಹಾಕಿ ಲಾಡಿ
ರೂಪ ತಪ್ಪಿಸಿಕೊಂಡು ಲೋಕದಿ
ಮನಿ ಮನಿಯ ತಿರಕೊಂಡು ತಿಂದರೆ
ಈ ಪದವಿ ಹ್ಯಾಂಗ ಸಿಕ್ಕೀತೋ
ಭೂಪ ಶಿಶುನಾಳಧೀಶ ಸಾರಿದ ||೩||
*****