ವಚನ ಸಂಪತ್ತು

ಜೀವನದ ನೆನಹುಗಳ ಮನದಿ ಮೆಲುಕಾಡಿಸಲು
ನೀನಿತ್ತ ವಚನಗಳ ನುಡಿಗೆಕುಲುಕಾಡಿಸಲು ||

ವಚನ ದೇಗುಲದಲ್ಲಿ ಕಂಗೊಳಿಸುತಿದೆ ಶಿಲ್ಪ
ವಚನವೊಂದರಲಿ ಕಂಡುಬರುತಿದೆ ಕಲ್ಪ ||

ವಚನವೆಂದರೆ ಒಂದು ಗೊಂಚಲಿನ ಸವಿದ್ರಾಕ್ಷಿ
ನುಡಿನುಡಿಗು ರಸದುಂಬಿ ಬೀಗಿನಿಂತಿದೆ ಸಾಕ್ಷಿ||

ಕನ್ನಡದ ಪುಣ್ಯವದು ಹಣ್ಣಿಬಂದಿಹ ಕಾಲ
ಕನ್ನಡ ವಾಣಿ ಮನದಿಂಬುಗೊಂಡಿಹ ಕಾಲ ||

ಮಾತಿಗೆಟುಕದ ಭಾವ ಶಬ್ದದಲಿ ತುಂಬಿಟ್ಟು
ಚಿನ್ನರನ್ನಗಳಾಸ್ತಿ ಹರಸಿರುವೆ ನಮಗಿಟ್ಟು||

ನಿನ್ನ ಬಾಯಲಿ ನುಡಿಯು ಶ್ರೀಮಂತವಾಗಿತ್ತು
ನಿನ್ನ ಸಹವಾಸದಲಿ ನುಡಿಗೆ ಮೈ ಬೀಗಿತ್ತು ||

ತಲೆದಡವಿ ತಣಿಸಿತ್ತು ವಚನಾರ್ಥ ತಂಗಾಳಿ
ಮೈದಡವಿ ಸುಖಿಸಿತ್ತು ಸ್ವಚ್ಛಂದ ಸುಳಿಗಾಳಿ ||

ವಚನಗಳ ಬಿರುಗಾಳಿ ಒಮ್ಮೆ ಹುಡಿಯೋಡಿಸಿತು
ಒಮ್ಮೆ ಸುಟ್ಟುರಿಗಾಳಿ ದುರ್ಗಂಧವಡಗಿಸಿತು ||

ಮನೆಮನವ ತಟ್ಟಿತ್ತು ಸೊಡರು ಬೆಳ್ ಬೆಳಕಾಗಿ
ಮನಮನವ ತಟ್ಟಿತ್ತು ಮುದ್ದಿಡುವ ಶಿಶುವಾಗಿ ||

ದಿವ್ಯಲೋಕದ ಭಾವ ನೆಲಕಿಳಿಸಿ ತಂದಿತ್ತು
ಭವ್ಯರೊಳು ಸಲಿಗೆ ಸಲ್ಲಾಪಗಳಿಗಿಂಬಿತ್ತು ||

ವಚನದಲಿ ಹುದುಗಿರುವ ಪರುಷಮಣಿ ಬಲಗೊಂಡು
ಕಬ್ಬುನಕೆ ತಗಲಿ ಹೊನ್ನಾಗಿಸುವ ಪರಿಯೊಂದು ||

ನಿನ್ನ ವಚನವು ಹಾಲಹೊಳೆಯಾಗಿ ಹರಿದಿತ್ತು
ತೀರದಲಿ ಸಕ್ಕರೆಯ ಮಳಲಾಗಿ ಹರಹಿತ್ತು ||

ತವರಾಜದಂಥ ಕೆಸರಾಗಿತ್ತು ತಳದಲ್ಲಿ
ಸವಿದಿನಿಸು ರಸಿಕನಿಗೆ ಹರಿದೋಡಿ ಸವಿದಲ್ಲಿ ||

ಅನುಭಾವದೆಸಕಿನಲಿ ತುಂಬಿತ್ತು ಹೆಜ್ಜೇನು
ಹದವರಿತು ಸವಿಯೆ ಸಂಜೀವ ಸುಧೆ ಹೆಚ್ಚೇನು ||

ಮಾತುರೀತಿಗಳಲ್ಲಿ ಭಾವದಲಿ ಮಿಗಿಲಾಗಿ
ಶಾಶ್ವತದ ಸಾಹಿತ್ಯವೆನಿಸಿತ್ತು ಮುಗಿಲಾಗಿ

ಕಳೆದುಹೋದವು ಇಂದು ಎಂಟು ಶತಮಾನಗಳು
ಅಚ್ಚಳಿಯದುಳಿದಿಹವು ಮೈಗೊಂಡ ಹೊನ್ನುಗಳು ||

ಚಿಕ್ಕ ಮೂರುತಿಗಿಹುದು ಬಿತ್ತರದ ಘನಕೀರ್ತಿ
ಮಾತು ಮಾತಿಗು ಮಿಂಚಿ ಕಣ್ಕುಕ್ಕಿಸುವ ರೀತಿ ||

ಸಾಹಿತ್ಯ ಶಾರದೆಯ ಸಿರಿಮುಡಿಗೆ ಹೂವಾಗಿ
ಸತ್ತಿರುವರೆದೆ ಸೇರಿ ಕಳೆಯಿಡುವಕಾವಾಗಿ ||

ಅನುದಿನವು ಹೊಗರೇರಿ ಹೊಳೆಯುವದು ಈ ವಚನ
ಚಣಚಣವು ತಣಿಸುತಿದೆ ಅನುಭಾವದೀ ರಚನ ||

ವಚನ ಸುಂದರಿಯಲ್ಲ ಮನಸೆಳೆವ ನಲ್ಗೂಸು
ಎಂತು ಮುದ್ದಿಸಲದನು ಮನಕಾಗುವದು ಲೇಸು ||

ಸವಿದು ಮೆಲುಕಾಡಿಸಲು ಅರ್ಥ ಸ್ವಾರಸ್ಯವಿದೆ
ಎಣಿಸಿ ಯೋಚಿಸಿದಲ್ಲಿ ಬುದ್ಧಿ ವೈಶಾಲ್ಯವಿದೆ ||

ಕನ್ನಾಡ ಈ ಬೆಳೆಯು ಅಕ್ಷಯದ ಸಂಪತ್ತು
ಅಟ್ಟುಣ್ಣ ಬಲ್ಲವಗೆ ನೆತ್ತಿಗನ್ನವದಾಯ್ತು ||

ಯಾವ ಮನ್ವಂತರಕು ಈ ವಚನ ಕಲ್ಪತರು
ಕಳೆಯುವದು ಮಾನವನ ಬೆಕ್ಕಸದ ನಿಟ್ಟುಸಿರು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾರತ ಕರ್ಮವು ತೀರಿದ ಬಳಿಕ
Next post ಗೋಡ್ರು ಮುನ್ಸಿಕಂಡ್ರೋ ಎನಿಮಿ ಮಟಾಷ್

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…