ಕೆಲವೊಮ್ಮೆ ನಾನು ಭಾವಿಸುವೆನು
ಮರುಭೂಮಿಯೊಂದನು ಅದರೊಳಗೆ
ಸರೋವರವೊಂದ ನಿರ್ಮಿಸುವೆನು
ನೋಡಿದರೆ ನೀರು ಕನ್ನಡಿಯಷ್ಟು ನಿರಾಳ
ಅಲ್ಲಿ ಆಕಾಶಕ್ಕೆ ಎತ್ತರದಷ್ಟೆ ಆಳ
ಆಚೀಚೆ ಕಣ್ಣಳತೆಯುದ್ದಕೂ ಬರಿ ಮಳಲು
ದಿನದಿನವು ಬದಲಾಗುತ್ತ ನಿನ್ನೆ ನೋಡಿದ್ದು
ಇಂದು ಕಾಣಿಸದೆ ಇಂದಿರದಲ್ಲಿ ನಾಳೆ
ಮೂಡುತ್ತ-ಇಷ್ಟೊಂದು ಮಳಲ ಹಾದು
ಅಸಾಧ್ಯ ಯಾರೂ ನನ್ನ ಹುಡುಕುವುದು
ಹೀಗೆಂದು ಡೇರೆಯನೂರಿ ಹೊರಗಿಳಿದು
ತಾಳೆಬಾಳೆಗಳ ನಡುವೆ ಓಡಾಡಿ ಅಹಹಾ ಎಂದು
ರಾತ್ರಿಯಾಗುತ್ತಲೇ ಬೆಂಕಿ ಕಾಯಿಸುತ ಕುಳಿತರೆ
ಎಲಲ! ಕುಳಿತಿದ್ದಾರೆ ಅನೇಕ ಮಂದಿ ಸುತ್ತ
ನನಗಿಂತ ಹಿಂದೆಯೇ ಬಂದವರು ಇತ್ತ!
*****