‘ಆಕ್ಟೋಪಸ್’ ಎನ್ನುವ ಪದವೇ ‘ದೈತ್ಯ ಮೀನು’ ಎಂಬ ಅರ್ಥ ಸೂಚಿಸುತ್ತದೆ. ಆದರೆ ನಾವು ತಿಳಿಸುಕೊಂಡಷ್ಟು ಅಪಾಯಕಾರಿ ಪ್ರಾಣಿಯಲ್ಲ ಅದು. ‘ಆಕ್ಟೋಪಸ್’ ಎನ್ನುವುದು ಎಂಟು ಕಾಲುಗಳು ಎಂಬರ್‍ಥ ಕೊಟ್ಟರೂ ಅದು ಹೊಂದಿರುವು ಎಂಟು ತೋಳುಗಳನ್ನು ಸೂಚಿಸುತ್ತದೆ. ಇವುಗಳಿಗೆ ‘ಟೆಂಟ್ಯಾಕಲ್ಸ್’ ಎಂದು ಕರೆಯುತ್ತಾರೆ. ಇವುಗಳ ತುದಿಯಲ್ಲಿ ಕೊಕ್ಕಿನಂತಹ ಬಾಯಿಯಿದೆ.
ಒಟ್ಟು ೧೫೦ ಪ್ರಭೇದಗಳ ಆಕ್ಟೋಪಸ್‌ಗಳಿವೆ. ಸಾಮಾನ್ಯವಾಗಿ ಆಕ್ಟೋಪಸ್‌ಗಳು ಎಲ್ಲಾ ಸಮುದ್ರಗಳಲ್ಲಿರುತ್ತವಾದರೂ ಉಷ್ಣವಲಯದ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಸಿಸುತ್ತವೆ. ಕೆಲವು ಜಾತಿಯ ಆಕ್ಟೋಪಸ್ಗಳು ೮೦೦ ಮೀಟರ್‌ನಿಂದ ೫ ಕಿಲೋಮೀಟರ್‌ವರೆಗಿನ ಆಳವಾದ ನೀರಿನಲ್ಲಿ ವಾಸಿಸಿದರೆ ಕೆಲವು ನೀರಿನ ಮೇಲ್ಮೆ ಬಳಿಯೇ ವಾಸಿಸುತ್ತವೆ. ಅವುಗಳ ಗಾತ್ರ ಸಾಮಾನ್ಯವಾಗಿ ೧೦ ಸೆಂ.ಮೀ.ನಷ್ಟಿರುತ್ತದೆ. ಕೆಲವು ೧೦ ಸೆಂ.ಮೀ. ನಷ್ಟಿದ್ದರೆ ಇನ್ನೂ ಕೆಲವುಗಳ ಗಾತ್ರ ೧ ರಿಂದ ೮ ಫೂಟುಗಳಷ್ಟಿರುತ್ತದೆ. ಆಕ್ಟೋಪಸ್ಗಳ ಮೂಲ ಬಣ್ಣ ಕೆಂಪು ಮಿಶ್ರಿತ ಬೂದುಬಣ್ಣ ಅಥವಾ ಚುಕ್ಕೆಗಳಿಂದ ಕೂಡಿದ ಬೂದುವರ್‍ಣ.
ಆಕ್ಟೋಪಸ್ ದೇಹ ವಿಚಿತ್ರವಾದುದು. ಉಬ್ಬಿದ ಚೀಲದಂತೆ ದೇಹ, ಸುತ್ತಲೂ ಟೆಂಟ್ಯಾಕಲ್ಸ್‌ಗಳು. ಇವು ಶಕ್ತಿಯುತವಾಗಿ ‘ಸಕರ್‍ಸ್’ (ಹೀರು ಬಟ್ಟಲು)ಗಳನ್ನು ಹೊಂದಿವೆ. ಆಹಾರವನ್ನು ಬಂಧಿಸಿ ಬಾಯಿಯೊಳಕ್ಕೆ ತುರುಕಲು ಇವು ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ೯ ಕೆ.ಜಿ. ತೂಕವಿರುವ ಆಕ್ಟೋಪಸ್ ನೂರಕ್ಕಿಂತಲೂ ಹೆಚ್ಚು ಸಕರ್‍ಸ್‌ಗಳನ್ನು ಹೊಂದಿರುತ್ತವೆ. ಅಲ್ಲದೆ ೨೫ ಕೆ.ಜಿ.ಯಷ್ಟು ಭಾರ ಎಳೆಯುವ ಸಾಮರ್‍ಥ್ಯ ಹೊಂದಿರುತ್ತವೆ.
ದಿನದ ಸಮಯದಲ್ಲಿ ತಳದ ಸಂದುಗಳಲ್ಲಿ ಅಡಗಿ ಕೂತು ರಾತ್ರಿಯಲ್ಲಿ ಆಕ್ಟೋಪಸ್‌ಗಳು ಬೇಟೆಗಾಗಿ ಹೊರಬರುತ್ತವೆ.
ಆಹಾರ
ಸಂಧಿಪದಿ ಮತ್ತು ಜಿಂಗ (ಕ್ರ್‍ಯಾಬ್) ಅದರ ಪ್ರಿಯವಾದ ಆಹಾರ. ಸಾಮಾನ್ಯ ಗಾತ್ರದ ಆಕ್ಟೋಪಸ್‌ವೊಂದು ದಿನಕ್ಕೆ ಒಂದೂವರೆ ಡಜನ್‌ಗಳಷ್ಟು ಆಹಾರ ಕಬಳಿಸುತ್ತದೆ. ಬಲಿ ಕಾಣಿಸಿತೆಂದರೆ, ಹಿಡಿದು ಬಾಯಿಗೆ ತರುವಲ್ಲಿ ಟೆಂಟ್ಯಾಕಲ್ಸ್‌ಗಳು ಸಹಾಯ ಮಾಡುತ್ತವೆ. ಗಟ್ಟಿ ಚಿಪ್ಪಿನಂತಹ ಪ್ರಾಣಿಗಳು (ಉದಾ: ಬಸವನಹುಳು) ಸಿಕ್ಕರೆ ಅದು ತನ್ನ ನಾಲಿಗೆ (ರ್‍ಯಾಡುಲಾ) ಯಿಂದ ಚಿಪ್ಪಿಗೆ ರಂಧ್ರ ಕೊರೆದು ವಿಷತೂರಿಸಿ ಭಕ್ಷಿಸುತ್ತದೆ. ಗಿಣಿಯಂತಹ ಕೊಕ್ಕು ಆಹಾರ ಸಿಕ್ಕರೆ ಪುಡಿಪುಡಿ ಮಾಡಿ ಬಯಿಯೊಳಕ್ಕೆ ಸೇರಿಸುತ್ತವೆ.
ಸಂತಾನಾಭಿವೃದ್ಧಿ
ಸಂತಾನಾಭಿವೃದ್ಧಿಯ ಕಾಲದಲ್ಲಿ ಹೆಣ್ಣು-ಗಂಡು ಆಕ್ಟೋಪಸ್ಗಳು ತಾಸುಗಟ್ಟಲೆ ಒಂದಾಗುತ್ತವೆ. ಗಂಡು ಆಕ್ಟೋಪಸ್‌ನ ತೋಳೊಂದು ತೆಳ್ಳಗೆ ಚಮಚೆಯಾಕಾರದ ತುದಿ ಹೊಂದಿದ್ದು, ವೀರ್‍ಯಾಣುಗಳನ್ನು ಹೆಣ್ಣಿಗೆ ವರ್‍ಗಾಯಿಸಲು ಸಹಾಯ ಮಾಡುತ್ತದೆ. ತದನಂತರ ಹೆಣ್ಣು ಸಂದಿನಲ್ಲಿ ಸೇರಿಕೊಂಡು ಸುಮಾರು ೧೦,೦೦೦ ಕ್ಕಿಂತಲೂ ಹೆಚ್ಚಿನ ಅಕ್ಕಿಕಾಳಿನ ಗಾತ್ರದಷ್ಟು ತತ್ತಿಗಳನ್ನಿಡುತ್ತದೆ. ತತ್ತಿಗಳು ಒಡೆದು ಮರಿಗಳಾಗುವವರೆಗೆ ಅದು ಏನನ್ನೂ ತಿನ್ನದೇ ತತ್ತಿಗಳ ಆರೈಕೆಯಲ್ಲಿ ನಿರತವಾಗುತ್ತದೆ. ಅವುಗಳ ಮೇಲೆ ನೀರನ್ನು ಚಿಮುಕಿಸುತ್ತ ಸ್ವಚ್ಫವಾಗಿಡುವುದಲ್ಲದೇ, ವೈರಿಗಳಿಂದ ಅವುಗಳನ್ನು ರಕ್ಷಿಸುತ್ತದೆ. ಹೆಣ್ಣು ಆಕ್ಟೋಪಸ್‌ಗೆ ಅದೇ ಮೊದಲ ಮತ್ತು ಕೊನೆಯ ಪ್ರಸವ. ನಂತರ ಅದು ಸಾಯುತ್ತದೆ! ಆಕ್ಟೋಪಸ್‌ನ ಮರಿಗಳು ಅತ್ಯಂತ ಚಿಕ್ಕವಾದರೂ ಆಕ್ಟೋಪಸ್ನ ಎಲ್ಲ ಗುಣಲಕ್ಷಣಗಳನ್ನು ಹೊಂದಿದವಾಗಿರುತ್ತವೆ.
ಆಕ್ಟೋಪಸ್ ಅಪಾಯಕಾರಿಯೇ?
‘ಆಕ್ಟೋಪಸ್ ಹಿಡಿತ’ ಎಂಬ ನುಡಿಯಂತೆ, ಆಕ್ಟೋಪಸ್‌ಗಳ ಕೈಗೆ ಸಿಕ್ಕರೆ ಮುಕ್ತಿಯೇ ಇಲ್ಲ ಎಂಬ ಭಾವನೆ ನಮ್ಮಲ್ಲಿ ಹುಟ್ಟಿಕೊಂಡಿದೆ. ಅವು ಮಾನವನಿಗೆ ಯಾವ ಅಪಾಯವನ್ನೂ ಉಂಟುಮಾಡುವುದಿಲ್ಲ. ಮನುಷ್ಯನನ್ನು ಬಂಧಿಸಿ ರಕ್ತ ಹೀರುವಂತೆ ಭಯಾನಕವಾಗಿ ಚಿತ್ರಿಸುವುದು ಉತ್ಪ್ರೇಕ್ಷೆ. ಅವು ಅಂತಹ ಭಯಾನಕ ಪ್ರಾಣಿಗಳೇನಲ್ಲ. ಮನುಷ್ಯ, ಹಾವು ಮತ್ತು ಮೀನುಗಳಿಗೆ ಅವು ಆಗಾಗ ಬಲಿಯಾಗುವುದೇ ಇದಕ್ಕೆ ಸಾಕ್ಷಿ. ಆಕ್ಟೋಪಸ್ಗಳ ವಶದಲ್ಲಿ ಮನುಷ್ಯ ಸಿಕ್ಕಿಬಿದ್ದ ವರದಿಗಳೂ ಇದ್ದಿರಬಹುದು. ಬೃಹತ್ ಗಾತ್ರದ ಆಕ್ಟೋಪಸ್‌ಗಳಿಂದ ಹಾಗಾಗಿರಬಹುದು. ಅವು ಅಪಾಯಕಾರಿ ಎಂಬ ಮಾತೂ ಅಲ್ಲಗಳೆಯುಂತಿಲ್ಲ!
*****
(ಆಧಾರ)