ಮುಗಿಲೊಡೆದು ಹಾಡ್ಯಾವು ಮೊಗ್ಗೊಡೆದು ನೋಡ್ಯಾವು
ಕೇಳುವಿಯ ಈ ಕೂಗು ಓ ತಂದೆಯೇ
ಕಡಲು ಆರತಿಯೆತ್ತಿ ಮುಗಿಲು ಮಲ್ಲಿಗೆ ಸುತ್ತಿ
ನೋಡುವಿಯು ಈ ಕೂಸು ಓ ತಂದೆಯೇ
ನೀಲಬಾನಿನ ಹಕ್ಕಿ ಬಾನಿನಾಚೆಯ ಚುಕ್ಕಿ
ಅಪ್ಪಯ್ಯ ಅಪ್ಪಯ್ಯ ಎಂದಿರುವವು
ತೆಂಗೆಲ್ಲಾ ತಲೆದೂಗಿ ಬಾಳೆ ಜೋಗುಳ ಹಾಡಿ
ಬಾರಯ್ಯ ತಾರಯ್ಯ ಹಾಡಿರುವವು
ಜೊಂಡು ಜೋಪುಡಿ ಬೇಡ ಪುಂಡಿ ಪಡುವಲ ಬೇಡ
ಹುಳಿ ಇರಲಿ ಸಿಹಿ ಇರಲಿ ನೀನಿರಲಿ ಬಾ
ನಾ ನಿನ್ನ ಬಳಿ ಇರಲಿ ನೀನನ್ನ ಎದೆಗಿರಲಿ
ಮುಪ್ಪಿರಲಿ ಸುದ್ದಿರಲಿ ಸದ್ದಿರಲಿ ಬಾ
ಅತ್ತರೂ ನಿನಕೂಟ ನಕ್ಕರೂ ನಿನಕೂಟ
ಬಾರಯ್ಯ ನನ್ನಯ್ಯ ತಾರಯ್ಯ ತಾ
ಉಳಿದರೂ ನಿನಕೂಟ ಅಳಿದರೂ ನಿನಕೂಟ
ಓ ಅಯ್ಯ ದೇವಯ್ಯ ಬಾರಯ್ಯ ಬಾ
*****