ಮೋಜ ನೋಡಿರಿ ಗಾಂಜಿಯಮಕಿನ
ತೇಜಿಯೇರಿದ್ಹಾಂಗ ಜುಲಾಸ್ತದ ಅಮಲಾ
ಈ ಜನರಿನ್ನೇನಿದು ಬಲ್ಲರು ದುರ್ಗುಣ ಮಾಡುವಂತಿರಲು
ಸಹಜವಾದ ಸದ್ಬೀಜದ ಮಹಿಜನವನದಲ್ಲು ಫಲವಾಗಿರಲು
ಶ್ರೀಜಗದೀಶನ ಪೂಜಿತ ಮುನಿಜನ ರಾಜೀವನ ಮೋಹಿಸಲು
ಸೋಜಿಗೆನಿಪ ಶುಭವಾದ ವೃಕ್ಷದಲಿ
ಜನಿಸಿದ ಈ ಮುಗುಳು ಚಿಗಿತು ಬೆಳದಿಹುದು ತೇಜಸು ಪುಷ್ಪಗೊಂಚಲ
ಗೊನಿ ಕೆಂಜಾಗಿನ ವರ್ಣದಲಿ ರಾಜಿಸುವದರಿಂದ ಕುಸುಮಾರ್ಗದ ಫಲ
ಕಾಮಿಸಿ ವ್ಯಾಳ್ಯಗಳು ರಾಜಯೋಗಿಗಳು
ನೈಜಾಮದ ಗೋದಾವರಿ ತೀರದ ಜಲದೊಳು ಮರ್ದಿಸಲು
ಶೋಭಿಪ ಸತ್ವ ರಜೋಗುಣ ತತ್ವದ
ತಪ್ಪಲ ಕೂಡಿರಲು ಗುಳಿಗಿಯಾಗಿರಲು
ಸಾಧುಸಂತರನಾದರಿಸುತ ನಿಜಬೋಧದಿ ಮುಳಗಿರಲು ||೧||
ಬೋಧಾಮೃತ ಸಾನಂದದಿ
ಸಾಧಕರು ಕೂಡಿ ಮೋದದಲಿ ನೋಡಿ
ಮೇದಿನಿ ಸ್ಥಲದಂತೆ ಆ ಕೃತಿಯನು ದಂಡಿಸಿದರು ತಿಂಡಿ
ಶೋಭಿಸಿ ಶರೀರ ಬುರುಡಿಗೆ ತನುವಿನ ಮೀರು
ಇದಕೆ ಜೋಡಿ ಜಲದಿ ಒಡಗೂಡಿ
ಶ್ರೀಧರ ಬ್ರಹ್ಮ ಸದಾಶಿವ ಮೂವರು ಆಧಾರವ ಮಾಡಿ
ಕ್ರೋಧಾದಿಗಳನ್ನು ಛೇದಿಸಿ ಜ್ಞಾನದ ಚಿಲುಮೆ-
ಯೊಳಗೆ ನೀಡಿ ಅಗ್ನಿಯನು ತೋಡಿ
ಈ ದಶವಾಯು ಬಿಗಿದು ಸುಷುಮ್ನನಾಳದೊಳಗೆ ಹೂಡಿ
ಆದಿ ಸದ್ಗುರುವಿನ ಕೈಯೊಳಗೊಪ್ಪುವ ನಾದಿನ
ಗುಡಗುಡಿ ಸೇದಿ ನಲಿದಾಡಿ
ಬಾಧಿ ದುರಿತ ಬಹು ಬಂಧನದ ಕರ್ಮವು ಶೋಧಿಸಿ ಈಡ್ಯಾಡಿ ||೨||
ಈ ಪರಿ ಮಹಿಮದ ರೂಪ ನಿರಾಲ
ಪರಂಜ್ಯೋತಿ ನಿರ್ಮಿಸಿದ ರೀತಿ
ಸ್ಥಾಪಿಸಿದನು ಶಿವನಾವ ಪರಲೋಕದ ಕಲ್ಪದ್ರುಮದ ಜಾತಿ
ಕಾಪುರುಷರು ಕುಹಕರಿಗೆ ಸಲ್ಲರು ತಾಪಸಿಯರಿಗೆ ಪ್ರೀತಿ
ತತ್ವದ ನಡತೆ ಸೋಹಂ ಪದಕೇರಿಸಿ ತಾಂ
ಪರವಸ್ತುವ ತೋರಿಕೊಡುವ ರೀತಿ
ಶಾಸ್ತ್ರ ನುಡಿತೈತಿ ಪಾಪರಹಿತ ಪಂಚಾಕ್ಷರಿ ಪಠಿಸುತ
ಜೀವ ಪವನ ಒತ್ತಿ ತ್ರಿಕೂಟದಲ್ಹತ್ತಿ
ತಾ ಚರಿಸ್ಯಾಡುತ ನೋಡಲು ಪಶ್ಚಿಮ ಚಕ್ರದೊಳಗೆ ಸುತ್ತಿ
ಭೂಪತಿ ರಾಜಗೋವಿಂದನ ಅರಮನಿ
ಹೊಳೆವ ಚಂದ್ರಕಾಂತಿ ಮೂಲ ಸಿದ್ಧಾಂತಿ
ಭಾಪುರೆ ಶಿಶುನಾಳಧೀಶನ ವರವಿಲೆ ನಾ ಪಡೆದೆನು ಮುಕ್ತಿ ||೩||
*****