ಹ್ಯಾಗೆ ಮಾಡಬೇಕ ಈಕಿ ಸೋಗ ನೋಡಿ ಸುಮ್ಮನೆ
ಹೋಗುವದಾಗವಲ್ಲದೈ ಸಾಂಬಾ
ಯೋಗಿ ಜನರಿಗೆ ಬಾಯ್ಗೆ
ಬೀಗ ಹಾಕಿದಳೆಂದು
ಕೂಗುತದ ವೇದಾಗಮ ತುಂಬಾ
ಬ್ಯಾಗದಿ ಶೃಂಗಾರವಾಗಿ
ಸಾಗಿ ಬಂದು ಸುಳಿದರೆ
ಮೇಘ ಮಿಂಚಿನಂತೆ ಮಾರಿಯ ಬಿಂಬಾ
ಈಗ ನೋಡುತಿರೆ ಈ
ಜಗದೊಳು ಮನುಜರ ಮನಸಿಜದೊರಿ ಭಾಗ್ಯದ ಕುಂಭಾ
ಲಾಗವಾಗಿ ಲಕ್ಷಣ ತೂಗುತದ ಯವ್ವನ
ನಾಗಲೋಕದ ಪದ್ಮಿನಿ ರಂಭಾ
ರಾಜದಿ ರಾಜೀವಮುಖಿ
ಸೋಗಿ ನೇತ್ರವನು ಕಂಡು
ಬ್ಯಾಗಿ ಹತ್ತಿತಲ್ಲೋ ಮನ್ಮಥ ಸಾಂಬಾ
ಬಗಿಬಗಿಯಲಿಂದ ಜಗಕಿಳಿದು ಜನದೊಳತಿ ಜಾಲಾ
ಒಗದಾಳೋ ವಿಟದ ಮನ ಕೀಲಾ
ಅಗಣಿತದಿ ಆದಳು ಸುಗುಣಾತ್ಮರಿಗೆ ಮೂಲಾ
ಮುಗುಳ್ನಗಿ ಮುರಕ ಮುದ್ದು ಲೀಲಾ
ಹಗಲಿರುಳು ಇವಳ ಆಳಾಪಹತ್ತಿ ಬೆಂಬಾಲಾ
ತಿರುಗಿದ ಋಷಿಗಳು ಶಿವ ಬಲ್ಲಾ
ಭೋಗ ಉಪರತಿ ಸೈ
ಯೋಗಿ ಸಂಪದ ಸುಖ
ಆಗದಾಂಗ ಆದಿತೆಂದೆದಿಗೆಂಬಾ || ೧ ||
ಬಾಳನೇತ್ರನೊಳು ಶಕ್ತಿ ಬಾಳವಿಲಾಸದಲಿಂದ
ತಾಳಿದಳು ಶಿವ ನಿಜರೂಪಸ್ಥಳಾ
ಬಾಳಿವಂತಿ ನಾಡೀರೋಳು
ಬಾಳಮಂದಿ ಶರಣರನ್ನು ತರಬೆನೆಂದು
ತಾಳ್ತೈತಿ ನಿನ್ನ ಛಲಾ
ವಾಳೆವಾಯಿತೆಂದು ಹರನಾ
ಮ್ಯಾಳದಿಂದ ಮನೆಗೆ ಬಂದು
ಹೇಳಿ ಕಳಿವ್ಯಾಳೋ ತಾಮಸದ ಕಳಾ
ಗಾಳಿ ಸೋಂಕಲಳಿಯ ಮುನಿ ಮೃಗಗಳಕೊಲ್ಲುವಂಥಾ
ಜಾಲ ಜಗದೊಳಗಿದು ಹೆಣ್ಣುಕುಲಾ
ಬಾಲೆ ತಯಾರಾಗಿ ಸಾಗಿ
ಮೇಲು ಆಕಾಶದ ತಾರಿ
ಪೋಲ್ವ ಚನ್ನಿಗಮುಖಿ ಪದ್ಮಗಳಾ
ಕಲ್ಲು ಕದಪು ಕನ್ನಡಿಗಳಾ
ಕೋಲಮಿಂಚಿನಂತೆ ಕಣ್ಣು
ಸಾಲ ದಂತ ದಾಳಿಂಬ್ರ ತುಟಿ ಹವಳಾ
ಆ ಲಲನೆ ತಿದ್ದಿ ತಿಲ್ಕಿಟ್ಟು ಫಣಿಗೆ ಕಸ್ತೂರಿ
ಭೂಲೋಕದೊಳಗೆ ವಿಸ್ತಾರಿ
ಒಪ್ಪುವಂತ ಕರ್ಣದೊಳು ಬುಗುಡಿ ಬಾವಲಿ ಬಲು ಭಾರಿ
ಚಳತುಂಬು ವಜ್ರಗಳು ಹೇರಿ
ವಸ್ತ್ರ ಆಭರಣ ಅಲಂಕಾರ ಭಾರಿ
ಕಲಿಯಗಕೆ ಇಳಿದಳೋ ಬೀರಿ
ಕೀಲಗಡಗ ಹರಡಿ ಹಸ್ತ
ಕಾಲ ಸರಪಳಿ ರುಳಿ ತೋಳ್ಬ೦ದಿ ವಂಕಿ
ನಡುವಿನ ಡಾಬಾ ಬಾಳಿ ಸುಳಿ ನಳಿನಾಭಿ
ತೋಳ್ಗಳ ಬೀಸುತ
ಸೂಳ್ಗೇರಿಯೊಳು ಸುಳಿದಳೋ ಜಂಬಾ || ೨ ||
ಧಾರುಣಿಗೆ ಮೀರಿ ಮಾಯ ಅವತಾರ
ಸಾರಿ ಹೊರಟು ಬರುತದ ದೂರದಿಂದ ಬರಬರಾ
ದಾರಿಯೊಳು ಲಂಕಾಪುರ
ವೀರದಾನ್ನವರ ಸುಟ್ಟುಬಿಟ್ಟಿತು
ಕುಂಭಕರ್ಣ ರಾವಣಾಸುರಾ
ಭಾರತದೀ ಧೀರ ಕ್ಷತ್ರಿಯರನ್ನು ಮುರಿದೊತ್ತಿ
ಸೂರೆಮಾಡಿದಳು ಗಮಕಿಲೆ ಪೂರಾ
ಹರಿ ಹರ ಬ್ರಹ್ಮರನು ಸುರಮುನಿ ಜನರನು
ಜಾರತನದಲಿ ಮೆಚ್ಚಿಸಿ ಪಾರಾ
ಪರಿಪರಿಯಲಿಂದ ಸಂಚರಿಸಿ ಬಂದು
ಶಿಶುನಾಳಾ ಪ್ರಭುವರನ ಕಂಡು ಕಳವಳಾ
ತೋರಲ್ಕೆ ಕೆಟ್ಟಿತು ಮಾಯದಿಂದ
ಮಾಡಿದಳಾಕಿ ಮ್ಯಾಳಾ
ತಿಳಿದಷ್ಟು ಹೇಳುವೆ ಕುಶಲಗಳಾ
ನಾರಿಯರ ವಾಸಗೂಡಿ
ಮೂರು ನುಡಿ ಪದ ಹಾಡಿ
ಪಾರಗಾಂಬುದು ಪರಮಾಲಂಬಾ ||೩||
*****