ಯಾತ್ರಿಕ

ಜಡ ಮಾನಸವ ತಟ್ಟಿ
ಚೇತನವ ಬಿತ್ತರಿಸಿ
ಸಾಗುತಿಹ ಓ ಯಾತ್ರಿಕ

ತಾಳಣ್ಣ ನಾ ಬರುವೆ
ಹಿಂದಿಷ್ಟು ಸೋತಿರುವೆ
ದಿಬ್ಬಗಳ ಹಾಯ್ವತನಕ

ಮುಳ್ಳೆಷ್ಟೊ ತುಳಿದಿಹೆನು
ಕಲ್ಲೆಷ್ಟೊ ಎಡವಿದೆನು
ಹಸಿವಿನಿಂ ಸೊರಗುತಿಹೆನು

ನಿಲ್ಲಣ್ಣ ನಿಲ್ಲಣ್ಣ
ನಿನ್ನಂಥ ಪಯಣಿಗರ
ಹಾದಿಯನೆ ಕಾದಿದ್ದೆನು

ಕೇಳಿಸಿತು ಹುಚ್ಚು ನುಡಿ
ಕಾಣಿಸಿತು ಹುಚ್ಚು ನಡೆ
ಓಡೋಡಿ ನಾ ಬಂದೆನು

ಅಕ್ಕರೆಯ ಈ ನಿನ್ನ
ಮಾತೊಂದೆ ಸಾಕಣ್ಣ
ಬೇಡೆ ಮತ್ತೊಂದೇನನು

ಒಳ್ಳ ಮನವುಳ್ಳವನು
ಎಲ್ಲರನು ನಲಿಸುವನು
ಮನಗಂಡೆ ಕರುಣಿ ನೀನು

ಕಲ್ಲು ಕರಗಿಸುವಂಥ
ಅದ್ಭುತದ ಬಲವೊಂದು
ತುಂಬಿಹುದು ನಿನ್ನೊಳೇನೊ

ಜೀವಿ ಜೀವಿಯ ಬಯಸಿ
ಬಾಯ್ಬಿಡುವ ಮಿಡುಕುಗುಣ
ವೆನ್ನೊಳಗೆ ಅಣಗುವತನಕ

ಸಾಯಮಾಗಿರು ಎನಗೆ
ನಿನ್ನೊಡನೆ ನಾ ಬರುವೆ
ಸ್ವಸ್ಥಾನ ಸಿಗುವ ತನಕ

ಹೊತ್ತೇರಿ ಬರುತಿಹುದು
ಸುತ್ತಲೂ ಸುಡುತಿಹುದು
ಮರುಭೂಮಿ ನಾ ಬಂದುದು

ಕತ್ತಲಾಗುವ ಮುನ್ನ
ಸುತ್ತಿ ಸಂತೆಯನಣ್ಣ
ಬುತ್ತಿ ಉಂಬುವ ತಂದುದು

ಕುದಿಯೊಳಗೆ ಈ ಮರದ
ನೆಳಲೆಷ್ಟು ತಣುವಿಹುದು
ಈಶಕೃಪೆ ಹರಡಿದಂತೆ

ಚಣಕಾಲ ವಿಶ್ರಮಿಸಿ
ಅರುಹುವೆನು ನಿನಗೆನ್ನ
ಗತಪಯಣಗಳ ಭೀಕರ

ನಾ ಬಿದ್ದ ಕೂಪಗಳ
ನಾ ಗೆದ್ದ ಕೋಟೆಗಳ
ಸೊದೆಯನೆಲ್ಲವ ಪೇಳ್ವೆನು

ಕುರುಡು ಸಡಗರದಿಂದ
ಮುಳುಗಿ ತೇಲುತ ಬಂದ
ಹರುಕು ಮುರುಕಿನ ಕಥೆಯನು

ನೀನೆತ್ತಣಿಂ ಬಂದೆ
ಎಲ್ಲಿಗಿದೆ ಗುರಿ ಮುಂದೆ
ಏನೇನ ಕಂಡೆ ಹಿಂದೆ?

ಮಾನವರ ಕೃತ್ಯಮೇನ್?
ಜಗದೊಡೆಯನಿಚ್ಛೆಯೇನ್?
ಅರುಹು ನೀನರಿತುದಿಂದು

ಅರಿತವರ ನುರಿತವರ
ಒಡನಾಟವಂ ಬಯಸಿ
ನಾನಿತ್ತ ಪೊರಮಟ್ಟೆನು

ನಿರ್ಮಲದ ನಿಶ್ಚಲದ
ಕಾಂತಿಮಯದೈಸಿರಿಯ
ಕರುಣಿಸನು ಪರಮಾತ್ಮನು

ಕಣ್ ಕಟ್ಟಿ ಆಡಿಸುವ
ಕಪಟನಾಟಕ ಸೂತ್ರಿ
ಕಂಡನೇ ನಿನ ದೃಷ್ಟಿಗೆ?

ಕಾಣದಿಹನಾ ಕಳ್ಳ
ಇಟ್ಟಿಹನು ಬೇಗುದಿಯ
ಮಾಯೆಯನು ಬಿತ್ತಿ ಒಳಗೆ

ಅವನಿರುವು ಅಂತಿರಲಿ
ಅವನ ಕೃತಿ ಎಂತಿಹುದೊ
ನೋಡಿದೆಯ ಈ ಶಕ್ತಿಯ?

ಬುವಿ ಬಾನ ಮೂಸೆಯೊಳು
ಜೀವರಾಶಿಯ ಸೃಜಿಸಿ
ತುಂಬಿಹನು ಜಿಜ್ಞಾಸೆಯ

ಮದ ಮತ್ಸರಗಳೇನು
ಮಾಯಜಾಲಗಳೇನು
ನನದೆಂಬ ಭ್ರಾಂತಿಯೇನು

ಕಾಂಬುದೆಲ್ಲವು ಈತ
ನಿನ ರೂಪವೇ ಎಂಬ
ಜ್ಞಾನಿಯೇ ಆನಂದನು

ಆನಂದವಂ ನಿರುತ
ಅನುಭವಿಸುವನು ಜ್ಞಾನಿ
ಅಜ್ಞಾನಿಗೆ ಗತಿಯದೇನು?

ಪಾಮರತ್ವವ ಬಿತ್ತಿ
ಪೈರು ಬೆಳಸಿಹನಿಲ್ಲಿ
ಕುಹುಕನೇಂ ಪರಮ ಶಿವನು?

ಅಲ್ಲದೊಡೆ ಜೀವನಿಗೆ
ಸ್ವಾತಂತ್ರ್‍ಯವುಂಟೇನು
ಊಳಿಗದಿ ತೊಡಗಿದವನು!

ವಿಧಿಯಂತ್ರ ಸೆಳೆದತ್ತ
ಬುದ್ಧಿ, ಮನ ಓಡುತಿರೆ
ಜೀವಿ ತಾನೇಗೈವನು?

ಒಡೆಯಲಾರದ ಒಗಟೆ
ಎಷ್ಟೊ ಉಳಿದಿಹುದಿಂತು
ಬೆಳೆಯುತಿದೆ ಗ್ರಂಥರಾಸಿ

ನುಂಗಲಾರದ ತುತ್ತ
ನೂಕಿದರೆ ಫಲವೇನು?
ಶ್ರಮೆಗೊಳದ ಮಿತವೆ ಲೇಸು

ಅಂತಿರಲಿ ಆ ಮಾತು
ಅವನಿರಲು ಎಮಗೇಕೆ?
ನೀ ದೊರೆತುದೆನ್ನ ಪುಣ್ಯ

ನೆಳಲೊಳಗೆ ನಿನ ಜೊತೆಗೆ
ಮೆಲ್ಲ ಮೆಲ್ಲನೆ ನಡೆವೆ
ಸೊಗವಹುದು ಪಯಣವಿನ್ನು

ಒಬ್ಬರೊಬ್ಬರ ಹಿಂಡಿ
ಈರ್ಷ್ಯೆಯಿಂದುರಿಯದಿಹ
ಹೊಸ ರಾಜ್ಯದೊಳಗೆ ಸುಳಿದು

ಕಂಡುದನು ಬಣ್ಣಿಸುತ
ಕಾಣದುದ ಶೋಧಿಸುತ
ನಡೆವ ನಾವ್ ನಕ್ಕುನಲಿದು

ಆ ಜಾಣನದ್ಭುತದ
ಕೌಶಲವ ಪರಿಕಿಸುವ!
ಶೃಂಗಾರಮೆಂತಿಪ್ಪುದೊ!

ಭೀಭತ್ಸ ಶರಧಿಯಂ
ಮಥಿಸಿ ನೋಡುವ ಅಣ್ಣ
ಹಾಸಾದಮೇಮ್ ದೊರೆವುದೊ!

ನವರಸಗಳೆಲ್ಲವಂ
ಒರೆಗಿಟ್ಟು ಶೋಧಿಸುವ
ಈ ಬುದ್ಧಿ ಯಂತ್ರದೊಳಗೆ

ಜೀವಿ ತಾಂ ಬಯಸಿರುವ
ತಿಳಿಮಧುವನೀಕ್ಷಿಸುವ
ಗುಪ್ತಸಂಧಾನದೊಳಗೆ

ಗೀತೆಯದು ಬೋಧಿಸುವ
ಸಾಹಸದ ಕಾರ್ಯದೊಳ್
ಧೈರ್‍ಯದಿಂ ಮುನ್ನುಗ್ಗುವ

ಮುರವೈರಿ ತೋರಿಸಿದ
ವಿಶ್ವರೂಪದ ಧೃತಿಯ
ನಾವೊಮಮೆ ಕಂಡುಬರುವ

ಇಲ್ಲಿರುವ ಚೆಲುವೇನೊ?
ಅಲ್ಲಿರುವ ತಿಳಿವೇನೊ?
ಎಲ್ಲವಂ ಪರಿಶೋಧಿಸಿ

ನೀನರಿತ ವಿಷಯಗಳ
ತಂಗಿ ಜನಕಜೆಗರುಹಿ
ಸಂತಸದಿ ಯಾತ್ರೆ ನಡೆಸು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು ಜೀವವೇ ಯಾರು ಬಂದವರು
Next post Navy man ತನ್ನ ಹೆಂಡತಿಗೆ ಬರೆದ ಪತ್ರ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…