ಏಳು ವಾಹನದ ಗೀಳು ಅಂಟಿತ್ತೊ !
ಬೆಳಿಗ್ಗೆ ಅದನ್ನೇರಿಯೇ ಎಚ್ಚರಾಗಿ
ರಾತ್ರಿ ತೂಕಡಿಸಿಯೇ ಕೆಳಕ್ಕಿಳಿಯುವಷ್ಟು ಮೆಚ್ಚಾಗಿ
ಕಚ್ಚಿತ್ತು ಯಂತ್ರದ
ಹುಚ್ಚು ವ್ಯಾಮೋಹ.
ಸದಾ ಒತ್ತಿ ಒತ್ತಿ
ಬ್ರೇಕೇ ಕಾಲು, ಹ್ಯಾಂಡಲೇ ತೋಳು
ದೀಪವೇ ಕಣ್ಣು, ದನಿ ಹಾರನ್ನು,
ಇದರ ಮೂಲಕವೇ ಪ್ರಪಂಚ ಸಂಪರ್ಕ
ಹೊನ್ನು ಹೆಣ್ಣು ಮಣ್ಣು,
ಇದಿಲ್ಲದಿದ್ದರೆ ಇನ್ನೇನು ಗತಿ
ಇದೇ ನಾನು ಎನ್ನಿಸಿಬಿಟ್ಟಿತ್ತು
ಮೊನ್ನೆ ರಾತ್ರಿ ಟಾಪ್ ಗೇರಿನಲ್ಲೇ ಹಾಯುತ್ತ
ಎದುರಿಗೆ ಹಠಾತ್ತನೆ ಲಾರಿ !
ಬ್ರೇಕು ಒತ್ತುತ್ತಲೇ ಜಾರಿ
ಅಮ್ಮಾ ಅಂತ ಚೀರಿ
ಬುಡಕ್ಕೇ ಬಿದ್ದೆ.
ಯಾರೋ ‘ಬಾ, ಸಾಕು’ ಎಂದರು
ಇಳಿದು ಹೊರಕ್ಕೆ ಬಂದೆ
‘ನೋಡು ಹೇಗಿತ್ತು’ ಎಂದರು
ನೋಡಿದೆ
ನೋಡಿಕೊಂಡೇ ಇರಲಿಲ್ಲ ಮುಂಚೆ ಎನ್ನುವಂತೆ.
ಲಾರಿಯ ಬುಡಕ್ಕೆ ಬಿದ್ದಿತ್ತು ರಕ್ತಸಿಕ್ತ
ಕಾಲು ತೋಳು ಜಜ್ಜಿತ್ತು
ಕಣ್ಣು ಸಿಡಿದಿತ್ತು ಹಾರನ್ ತಣ್ಣಗಾಗಿತ್ತು
ಸುತ್ತ ಜನ, ಏನೇನೋ ಮಾತು ಸನ್ನೆ –
‘ಅಯ್ಯೋ ಪಾಪ’ ‘ಕಾದಿತ್ತಲ್ಲಪ್ಪ ವಿಧಿ’
‘ಇಷ್ಟೆ ಕಣಪ್ಪ ಎಲ್ಲ’ ಎನ್ನುವಂತೆ.
ಈಗ ಎಲ್ಲಿಗೆ ? ಎಂದೆ.
ಕನಸು ಸಿಡಿದ ಮೇಲೆ ಎಲ್ಲೆಂದರಲ್ಲಿಗೆ ಎಂದರು
‘ಕನಸಾ? ಅಬ್ಬ!
ಗೊತ್ತಾಗಲೇ ಇಲ್ಲ ಇಷ್ಟು ಕಾಲ
ಎಂಥ ಭ್ರಮೆ ! ಎಷ್ಣು ದಟ್ಟ ಎಷ್ಟು ಗಟ್ಟಿ’ ಎನ್ನುತ್ತಿರುವಂತೆ
‘ಅದು ಹಾಗೆಯೇ
ಕಟ್ಟಿಕೊಂಡದ್ದು
ಕಳೆದುಕೊಂಡ ಮೇಲೆಯೇ ತಿಳಿಯೋದು’
ನಡಿ ಹೋಗೋಣ ಎಂದರು.
ಹೊರಟೆವು-
ನಿಂತಂತೆ ಹೋಗುತ್ತಲೇ ಇದ್ದೇವೆ
ನೆನೆದಲ್ಲೇ ಇದ್ದೇವೆ
ಎನ್ನುವಂತೆ.
ಗಾಳಿಮಳೆಗಳ ಭಾರಿ ದಾಳಿ ಶುರುವಾಯಿತು
ದಟ್ಟಕಾಡು.
ಹಾದೇ ಹೋದೆವು. ಅರೇ, ಎಂಥ ಆಶ್ಚರ್ಯ!
ತೊಯ್ಯಲಿಲ್ಲ ಆರಲಿಲ್ಲ ಚುಚ್ಚಲಿಲ್ಲ
ಕಚ್ಚಲಿಲ್ಲ ಒಂದು ಸೊಳ್ಳೆಕೂಡ.
ದಾರಿಯಲ್ಲಿ ಭಾರಿ ಬೆಟ್ಟ
ಸುತ್ತಿ ಹೋಗಲು ಹೊರಳಿದೆ.
‘ಛಿ, ದುರಭ್ಯಾಸ
ನೇರ ಹೋಗು’ ಎಂದರು
ಒಳಕ್ಕೆ ಹೋದರೆ ಅಲ್ಲಿ
ಸೇದಿ ಬಿಟ್ಟ ಹೊಗೆಯಲ್ಲಿ
ಕೊರೆದು ತೆಗೆದಂತೆ
ಸಾವಿರ ಬಣ್ಣದ ಸಾವಿರ ದೃಶ್ಯ
ಒಲಿಯುವ ಕೆಲೆಯುವ ಸಾವಿರ ಕಲ್ಪನೆಗಳ ನೆರಳು
ತೂರಿ ಚೆಲ್ಲಾಡಿದಂತೆ ಸುಖ
ತೂಗುವ ಬೆಳ್ಳಿ ಬಂಗಾರ ಹವಳದ ಬಳ್ಳಿ, ಹರಳು.
ನೋಡಿ ದಂಗಾದೆ, ತೋರಿಸುತ್ತ, “ನೋಡು
ಬೆಟ್ಟ ಬಯಸುವ,
ಇನ್ನೂ ಅದಕ್ಕೆ ದಕ್ಕಿಲ್ಲದ ಬಾಳಿನ ಕನಸು” ಎಂದರು.
“ಆಗ ಇದು ಕಾಣುತ್ತಿರಲಿಲ್ಲ” ಎಂದೆ.
“ಅದು ಹಾಗೆಯೇ
ಗಡಿಗಳ ನಡುವೆ ಬಾಗಿಲು ಕಿಟಕಿ ಇಲ್ಲ
ಇನ್ನೊಂದಕ್ಕೆ ಹಾಯುವಂತಿಲ್ಲ
ಈಗಾದರೆ ಬಂಧನವಿಲ್ಲ ಎಲ್ಲಿ ಹೇಳು
ಹಸಿವಾ ? ಎಂದರು
ಇಲ್ಲ
“ದಾಹ ?”
“ಇಲ್ಲ”
“ನೋವು?” ಆಯಾಸ ? ನಿದ್ದೆ?
“ಇಷ್ಟೂ ಇಲ್ಲ, ಎಷ್ಟು ವಿಚಿತ್ರ
ಹಿಂದೆ ಪಟ್ಟ ಅನುಭವ ಅಷ್ಟು ಸುಳ್ಳಾ ?” ಎಂದೆ
“ಸುಳ್ಳಲ್ಲ
ಎಲ್ಲ ಸತ್ಯದ ನೆರಳು
ಸಂತೆಯ ನೋಟಕ್ಕೆ, ಅಲ್ಲಿಯ ಆಟಕ್ಕೆ
ಬಯಸಿದ ಬೇಟಕ್ಕೆ ಕೊಟ್ಟಿದ್ದ ಕಂತೆ ನಿನ್ನ ಮೈ.
ತೊಟ್ಟು ನಿಜ, ಎಸೆದು ಸುಳ್ಳು
ಆಕಾರ ಬಣ್ಣ ಕೊಳಕು ಹರಕು ಅದಕ್ಕೆ,
ಇದಕ್ಕಲ್ಲ” ಎಂದು
ನನ್ನ ಕಡೆ ಬೆರಳು ಮಾಡಿದರು.
ಯಾರಿದು ಎಂದು ನೋಡಿಕೊಳ್ಳಲು ಹೋದರೆ-
ಅರರೆ ! ಏನಿದು !
ಬೊಂಬೆಯಾ ?
ನೆರಳಾ ?
ಅಲ್ಲ
ಗಾಳಿ, ನೀರು, ನೆಲ ?
ಅಲ್ಲವೇ ಅಲ್ಲ
ಅಸ್ತಿತ್ವಕ್ಕೆ ಅವಲಂಬನವೇ ಇಲ್ಲ
ಗಾಬರಿಯಾಗಿ
ಅಯ್ಯೋ ಎಂದು ಸೂರು ಹಾರುವಂತೆ ಕೂಗಿ
ಯಾರೋ ಮತ್ತೆ ಒಳಕ್ಕೆ
ಎಸೆದಂತೆ ಎದ್ದರೆ-
ಮತ್ತೆ ಅದೇ ರೂಮು
ಅದೇ ಪುಸ್ತಕ, ಕ್ಯಾಲೆಂಡರು
ಅದರೊಳಗಿನ ಅದೇ ಲತಾ
ಹಾಡುತ್ತಿರುವ ಚಿತ್ರ ಹಾಡಿತೋ ಎನ್ನುವಂತೆ
ರೇಡಿಯೋದಿಂದ ಅವಳ ಹಾಡೇ ಬರುತ್ತಿದೆ.
ಲಾರಿಯಲ್ಲಿ ಬಿದ್ದಿದ್ದ ವಾಹನ ಸಹ
ಮೊದಲಿನಂತೇ ಇರುತ್ತ
ಓಡಾಟಕ್ಕೆ ಸಿದ್ಧವಾಗಿದೆ !
*****