ನಿನಗೆ ಅರವತ್ತಾಯಿತಾ ಎಂದದ್ದು
‘ಬರೋ ಹೊತ್ತಾಯಿತಾ’ ಎಂದು ಕೇಳಿಸಿ
ಸಣ್ಣಗೆ ಬೆಚ್ಚಿದೆ ಒಳಗೆ,
ಯಾರು ಕೇಳಿದ್ದು ಹಾಗೆ ?
ಜೊತೆಗಿದ್ದ ಅಳಿಯನ ? ಮಗನ ? ಅಥವಾ
ಸಿನಿಮಾ ರೇಸು ಕಾರು ಬಾರು ಎಂದು
ಸದಾ ಜೊತೆಗೆ ಪೋಲಿ ಅಲೆಯುವ
ಅವನ ಗೆಳೆಯನ ?
ಏನು ಕೇಳಿದರೊ ?
ಈ ಬೆಚ್ಚನೆ ಆರೋಗ್ಯ ಕಂಡು
ಮೆಚ್ಚಿಗೆ ಹುಟ್ಟಿ ಕೇಳಿದರೊ ?
ಯಾರಿಗೆ ಗೊತ್ತು
ಹುಚ್ಚು ಜನ ಅಸೂಯೆಪಟ್ಟೇ ಆಡಿದರೊ ?
ಯಾರು ಬಂದಾರೆಂದು ಇದ್ದೀತು ?
ಯಾರು ಬಂದರು ತಾನೆ ಏನು ದಿಗಿಲು ?
ಬಂದವರು ತಂದ ಋಣದಲ್ಲಿ ತೂಗಾಡುತಿವೆ
ನೂರು ಉರುಳಿನ ನೆರಳು ;
ಕನಸು ಕಲಿಸಿದ ಅಮ್ಮ
ಕಂಡು ತೀರಿದ ಅಪ್ಪ
ಕೈ ಹಿಡಿದ ಕಣ್ಮಣಿಯೊ
ತನ್ನ ಲೆಕ್ಕಗಳಲ್ಲಿ ನನ್ನ ಎತ್ತರ ಅಳೆದು
ನಟ್ಟನಡು ಚೌಕದಲಿ ಹರಾಜು ಹಾಕಿದ ಮಾಯೆ
ನುಂಗಲಾಗದೆ ಸುಟ್ಟ ಬಿಸಿ ಬಿಸೀ ತುಪ್ಪ
ಮಿಠಾಯಿ ಮಕ್ಕಳು, ಜೊತೆಗೆ ಕಠಾರಿ ನಂಟರು
ವೃತ್ತಿ ಹವ್ಯಾಸ ನೆರೆಹೊರೆಗೆ ಹುಟ್ಟಿದ ಎಷ್ಟೋ
ಪಟಾಕಿ ಗೆಳೆಯರು,
ಬೆಳಗಿನ ತುಷಾರ ಸರಿದು
ಕೆರಳಿದ ಮಧ್ಯಾಹ್ನ ಬೆಳೆದು
ಕನಸಿದ್ದ ಮುಖದಲ್ಲಿ ಸತ್ಯದ
ಕಠೋರ ದಾಡೆಗಳು !
ತುಂಬುತಿಂಗಳ ಬದುಕು
ಬರಿ ತಂಗಳು ಈಗ.
ನಿನ್ನೆ ಮೊನ್ನೆಯ, ಇವತ್ತು ನಿನ್ನೆಯ
ನಾಳೆ ಇಂದಿನ ಕಾರ್ಬನ್ ಕಾಪಿ.
ತರ್ಕಕ್ಕೆ ಗಣಿತಕ್ಕೆ ಅಂಕೆಗಳ ಮಣಿತಕ್ಕೆ ಸಿಕ್ಕು
ಬದುಕಲ್ಲಿ ಸುಖ ಸಿಗದ ಪಾಪಿ.
ಇದೆಲ್ಲ ಮೀಟಿ
ತಾರೆಗಳನ್ನೇ ದಾಟಿ
ನಿಂತ ಅನಂತದ ಹನಿ ಹನಿ ಆಮಂತ್ರಣ.
ಕಳ್ಳ ಹೆಜ್ಜೆಯನಿಟ್ಟು ಬಂದ ಕಾಮದ ಬೆಕ್ಕು
ಕತ್ತಲಲ್ಲಿ ತಿಂದು ಬಿಕ್ಕಿದ ಬದುಕಿನ
ಮೂಳೆಯವಶೇಷಕ್ಕೆ
ಅನಿರೀಕ್ಷಿತ ಅದ್ಭುತದ ಸಿಂಚನ.
ಹೀಗಿರುತ್ತ
ಯಾರು ಬಂದರೆ ತಾನೆ ಏನಂತೆ ?
ಬಾ ಎಂದು ಕರೆದರೂ ಇಲ್ಲ ಚಿಂತೆ.
ಬಂದು ಮುಟ್ಟಲಿ ನನ್ನ,
ಮುಟ್ಟಿ ಬಿಡಿಸಲಿ ಸಣ್ಣ
ಪಂಜರದಿ ಸೆರೆಸಿಕ್ಕ
ಗುಟ್ಟುಗಳ ಸಂತೆ.
ಹಕ್ಕಿ ಹಾರಲಿಬಿಡಿ ಬಾನಿನಲ್ಲಿ
ಸುಖವುಕ್ಕಿ ಈಜಲಿ ಬೆಳಕುಗಡಲಿನಲ್ಲಿ
ದೂರ ಮಣಿಯಾಗುತ್ತ ಸಮೆದು ಕಣವಾಗುತ್ತ
ತಾನೆ ಬಾನಾಗುತ್ತ ಕಾಣದಲ್ಲಿ
*****