ಎಲ್ಲ ದಾರಿಗೊಂದೆ ಗುರಿ
ಬಿಡುಗಡೆ
ಸೃಷ್ಟಿನಿಯಮದಲ್ಲಿ ಇಲ್ಲ ನಿಲುಗಡೆ
ನೀಲಿಯಾಕಾಶದಿಂದ
ಹೂಬಿಸಿಲಿಗೆ ಬಿಡುಗಡೆ
ತೂಗುತಿರುವ ಮೋಡದಿಂದ
ನೀರ ಸೆರೆಗೆ ಬಿಡುಗಡೆ
ಹಗಲು ತೀರಿ ಇರುಳಿಗೆ
ಇರುಳು ದಾಟಿ ಹಗಲಿಗೆ
ಸರದಿ ಮುಗಿದು ಸೆರೆಯು ಹರಿದು
ಬರುತಲೆ ಇದೆ ಬಿಡುಗಡೆ
ಮಣ್ಣ ಸೀಳಿ ಮೇಲೇಳುವ
ಬೀಜದಾ ಮೊಳಕೆಗೆ,
ಬಳ್ಳಿಯಾಗಿ ವೃಕ್ಷವಾಗಿ
ಹಬ್ಬುವಾ ಥಳುಕಿಗೆ,
ಹೂವು ಅರಳಿ ಕಾಯಿಗೆ
ಕಾಯಿ ಹೊರಳಿ ಹಣ್ಣಿಗೆ
ಹಣ್ಣೊಳಗಿನ ಬೀಜ ಚಿಮ್ಮಿ
ಮತ್ತೆ ತವರುಮಣ್ಣಿಗೆ.
ಅಜ್ಞಾನದ ನಿದ್ದೆ ಹರಿದು ವಿದ್ಯೆಗೆ
ದಾರಿದ್ರ್ಯದ ದೈನ್ಯ ತೀರಿ ವೃದ್ಧಿಗೆ
ಕೋಪದಿಂದ ತಾಪದಿಂದ ಶುದ್ಧಿಗೆ
ಬೆಳಕು ಹರಿದು ಕೊನೆಯಾಗಲಿ ನಿದ್ದೆಗೆ
*****