ಎಲ್ಲಿ ಮಾನವ ಮತಿಗೆ ಭಯದ ಬಂಧನವಿರದೊ
ತಲೆಯೆತ್ತಿ ಸ್ಥೈರ್ಯದಲಿ ನಿಲ್ಲಬಹುದೋ
ಎಲ್ಲಿ ತಿಳಿವಿಗೆ ಯಾವ ಹಂಗುಗಳ ತಡೆಯಿರದೊ
ಭೇದದಲಿ ನೆಲ ನೂರು ಪಾಲಾಗದೋ,
ಎಲ್ಲಿ ಸತ್ಯದ ಒಡಲಿನಿಂದ ನುಡಿ ಚಿಮ್ಮುವುದೊ
ಸತತ ಸಾಧನೆ ಸಿದ್ದಿಯೆಡೆ ಕರೆವುದೋ
ರೂಢಿ ಮರುಧರೆಯಲ್ಲಿ ಶುದ್ಧ ತಿಳಿವಿನ ತೊರೆಯು
ಇಂಗದೆಯೆ ಸಂತತವು ಪ್ರವಹಿಸುವುದೋ,
ಎಲ್ಲಿ ನನ್ನೀ ಚಿತ್ತ ನಿನ್ನ ಚೋದನೆಯಿಂದ
ಬೆಳೆವ ಬೆಳಕಿನ ಎದೆಗೆ ಹಾಯುತಿಹುದೋ,
ಅಲ್ಲಿ ಆ ಬಿಡುಗಡೆಯ ಸ್ವರ್ಗದಲಿ ತಂದೆಯೇ
ನನ್ನ ಈ ನಾಡು ಕಣ್ದೆರೆಯಲಿ ಪ್ರಭೋ.
*****
ರವೀಂದ್ರನಾಥ ಟಾಗೋರರ ಗೀತಾಂಜಲಿಯ ಭಾಗವೊಂದರ ಅನುವಾದ